ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದಲ್ಲಿ ಗೋಮಾಂಸದ ಬದಲು ಕಡವೆ ಮಾಂಸ ಏಕೆ ನೀಡಬಾರದು?: ಅಸ್ಸಾಂ ಬಿಜೆಪಿ ನಾಯಕ

ಪ್ರಾಣಿಗಳಿಗೆ ಗೋಮಾಂಸ ನೀಡುವುದರ ವಿರುದ್ಧ ಸತ್ಯರಂಜನ್ ಬೋರಾ ಪ್ರತಿಭಟನೆ
Last Updated 13 ಅಕ್ಟೋಬರ್ 2020, 11:21 IST
ಅಕ್ಷರ ಗಾತ್ರ

ಗುವಾಹಟಿ: ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಗೋಮಾಂಸ ನೀಡುವುದನ್ನು ನಿಷೇಧಿಸಬೇಕು ಎಂದು ಅಸ್ಸಾಂನ ಯುವ ಬಿಜೆಪಿ ನಾಯಕ ಸತ್ಯರಂಜನ್ ಬೋರಾ ಹಾಗೂ ಬೆಂಬಲಿಗರು ಆಗ್ರಹಿಸಿದ್ದಾರೆ. ಗುವಾಹಟಿಯಲ್ಲಿರುವ ಮೃಗಾಲಯಗಳಿಗೆ ಗೋಮಾಂಸ ಕೊಂಡೊಯ್ಯುತ್ತಿದ್ದ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.

‘ಹಿಂದುಗಳು ಗೋವನ್ನು ಆರಾಧಿಸುತ್ತಾರೆ. ಮೃಗಾಲಯಗಳಲ್ಲಿನ ಪ್ರಾಣಿಗಳಿಗೆ ಗೋಮಾಂಸದ ಬದಲು ಬೇರೆ ಪ್ರಾಣಿಯ ಮಾಂಸ ಯಾಕೆ ನೀಡಬಾರದು? ಕಡವೆಯ ಮಾಂಸ ನೀಡಬಹುದು’ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಬೋರಾ ಕೋಮು ಸೂಕ್ಷ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಮೃಗಾಲಯದಲ್ಲಿ ಪ್ರಾಣಿಗಳಿಗೆ ಆಹಾರವಾಗಿ ನೀಡಲು ನಡೆಯುವ ಗೋಹತ್ಯೆ ನಿಲ್ಲಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಮದರಸಾಗಳಿಗೆ ಮತ್ತು ಮುಸ್ಲಿಮರಿಗೆ ವಿದ್ಯಾರ್ಥಿವೇತನ ನೀಡುವುದನ್ನು ನಿಲ್ಲಿಸಬೇಕು ಎಂದೂ ಅವರು ಇತ್ತೀಚೆಗೆ ಹೇಳಿದ್ದರು.

ಪ್ರತಿಭಟನಾಕಾರರನ್ನು ಚದುರಿಸಿದ ಮೃಗಾಲಯದ ಅಧಿಕಾರಿಗಳು, ‘ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ ಪ್ರಾಣಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ. ನಿಮ್ಮ ಬೇಡಿಕೆಗಳನ್ನು ಪ್ರಾಧಿಕಾರದೊಂದಿಗೆ ಹೇಳಿಕೊಳ್ಳಿ’ ಎಂದು ಸೂಚಿಸಿದ್ದಾರೆ.

ಪ್ರತಿಭಟನಾಕಾರರು ಸಲಹೆ ನೀಡಿರುವಂತೆ, ಕಡವೆ ಮಾಂಸವನ್ನು ಮೃಗಾಲಯದಲ್ಲಿ ಪ್ರಾಣಿಗಳಿಗೆ ಆಹಾರವಾಗಿ ನೀಡಲಾಗದು. ಅದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಅಡಿಯಲ್ಲಿ ಬರುವ ಪ್ರಾಣಿಯಾಗಿದ್ದು ಅದನ್ನು ಕೊಲ್ಲುವಂತಿಲ್ಲ ಎಂದು ವಿಭಾಗೀಯ ಅರಣ್ಯಾಧಿಕಾರಿ ತೇಜಸ್ ಮರಿಸ್ವಾಮಿ ಹೇಳಿದ್ದಾರೆ.

ಅಸ್ಸಾಂನಲ್ಲಿ ಗೋಹತ್ಯೆಗೆ ನಿಷೇಧವಿಲ್ಲ. ಪಶುವೈದ್ಯ ಅಧಿಕಾರಿಯ ಅನುಮತಿಯೊಂದಿಗೆ ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳ ಅನ್ವಯ ಗೋಹತ್ಯೆ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT