ಅಂತಿಮ ಹಂತದಲ್ಲಿ ಭಾರತ್ ಜೋಡೊ ಯಾತ್ರೆ: ಪುಲ್ವಾಮಾ ಹುತಾತ್ಮರಿಗೆ ರಾಹುಲ್ ನಮನ

ಶ್ರೀನಗರ: ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ಯು ಅಂತಿಮ ಹಂತ ತಲುಪುತ್ತಿದ್ದು, ಇದೇ 30ರಂದು ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7ರಂದು ಆರಂಭವಾದ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಗಿದ್ದು, ಇದೇ 30ರಂದು ಶ್ರೀನಗರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದರೊಂದಿಗೆ ಅಂತ್ಯಗೊಳ್ಳಲಿದೆ.
2019ರ ಆಗಸ್ಟ್‌ನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿರುವ ಮೊದಲ ರಾಜಕೀಯ ರ್‍ಯಾಲಿ ಇದಾಗಿದೆ.
ಭದ್ರತಾ ಲೋಪದ ಕಾರಣಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಮೊಟಕುಗೊಳಿಸಿದ್ದ ಯಾತ್ರೆಯು ಶನಿವಾರ ದಕ್ಷಿಣ ಕಾಶ್ಮೀರದ ಆವಂತಿಪುರದಿಂದ ಪುನರಾರಂಭವಾಯಿತು. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ಕಾಂಗ್ರೆಸ್‌ನ ಇತರ ನಾಯಕರು ಯಾತ್ರೆಯಲ್ಲಿ ರಾಹುಲ್ ಜತೆ ಹೆಜ್ಜೆ ಹಾಕಿದರು.
ಶ್ರೀನಗರ– ಜಮ್ಮು ರಾಷ್ಟ್ರೀಯ ಹೆದ್ದಾರಿ ಸಾಗುವ ಚುರ್ಸು ಎಂಬಲ್ಲಿ ಮೆಹಬೂಬಾ, ತನ್ನ ಮಗಳಾದ ಇಲ್ತಿಜಾ ಮುಫ್ತಿ ಹಾಗೂ ಇತರ ಮಹಿಳೆಯರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡರು.
‘ರಾಹುಲ್ ಗಾಂಧಿ ಅವರ ಈ ಯಾತ್ರೆಯು ಕಾಶ್ಮೀರದಲ್ಲಿ ಶುದ್ಧ ಗಾಳಿ ಬೀಸುವಂತೆ ಮಾಡಿದೆ. 2019ರ ಬಳಿಕ ಕಾಶ್ಮೀರಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮನೆಗಳಿಂದ ಹೊರಬಂದಿದ್ದು ಇದೇ ಮೊದಲು’ ಎಂದು ಮುಫ್ತಿ ಅವರು ಟ್ವೀಟ್ ಮಾಡಿದ್ದಾರೆ.
ಯಾತ್ರೆ ವಿರಾಮಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹೋದರ ರಾಹುಲ್ ಜತೆ ಸೇರಿ ಹೆಜ್ಜೆ ಹಾಕಿದರು.
ಪುಲ್ವಾಮಾ ದಾಳಿಯ ಹುತಾತ್ಮರಿಗೆ ನಮನ: ಪುಲ್ವಾಮಾದ ಲೆಥ್‌ಪೋರಾದಲ್ಲಿ 2019ರ ಫೆಬ್ರುವರಿ 14ರಂದು ನಡೆದಿದ್ದ ಭಯೋತ್ಪದನಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ 40 ಯೋಧರಿಗೆ, ರಾಹುಲ್ ಗಾಂಧಿ ಇದೇ ವೇಳೆ ಪುಷ್ಪ ಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
ಯಾತ್ರೆಯು ಭಾನುವಾರ ಪಂಥಾ ಚೌಕ್‌ನಿಂದ ಪುನರಾರಂಭ ಆಗಲಿದ್ದು, ದಾಲ್ ಸರೋವರದ ದಡದ ನೆಹರೂ ಪಾರ್ಕ್‌ವರೆಗೆ ಸಾಗಲಿದೆ. ಅಲ್ಲಿ ರಾಹುಲ್ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಸೂಕ್ತ ಭದ್ರತೆ; ಅಮಿತ್ ಶಾಗೆ ಖರ್ಗೆ ಪತ್ರ
ನವದೆಹಲಿ (ಪಿಟಿಐ): ರಾಹುಲ್ ಗಾಂಧಿ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆಗೆ ಸೂಕ್ತ ಭದ್ರತೆಯನ್ನು ನೀಡುವಂತೆ ಕೋರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
‘ಮುಂದಿನ ಎರಡು ದಿನಗಳ ಯಾತ್ರೆ ಹಾಗೂ ಜನವರಿ 30ರಂದು ಶ್ರೀನಗರದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾರಿ ಜನಸಂದಣಿಯನ್ನು ನಿರೀಕ್ಷಿಸುತ್ತಿದ್ದೇವೆ. ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಇದರಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.
‘ಈ ವಿಷಯದಲ್ಲಿ ತಾವು (ಅಮಿತ್ ಶಾ) ವೈಯಕ್ತಿಕವಾಗಿ ಮಧ್ಯ ಪ್ರವೇಶಿಸಿ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಖರ್ಗೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಮಹತ್ವದ ಪಾತ್ರ: ಜೈರಾಮ್ ರಮೇಶ್
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳ ಯಾವುದೇ ಮೈತ್ರಿಕೂಟ ರಚನೆಯಾದರೂ ಅಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರವಹಿಸುತ್ತದೆ. ಏಕೆಂದರೆ ಬಿಜೆಪಿಗೆ ಎದುರಾಗಿ ದೇಶದಾದ್ಯಂತ ರಾಜಕೀಯ ಶಕ್ತಿ ಹೊಂದಿರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶನಿವಾರ ಪ್ರತಿಕ್ರಿಯಿಸಿದರು.
2029ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ರಾಜ್ಯದಲ್ಲೂ ಸ್ವಂತವಾಗಿ ಹೋರಾಡಲು ಕಾಂಗ್ರೆಸ್ ತಯಾರಿ ನಡೆಸಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಈ ವರ್ಷ ಗುಜರಾತಿನ ಪೋರಬಂದರ್‌ನಿಂದ ಅರುಣಾಚಲ ಪ್ರದೇಶದವರೆಗೆ ಮತ್ತೊಂದು ಯಾತ್ರೆ ಆರಂಭಿಸುವ ಕುರಿತು ಚರ್ಚೆ ನಡೆದರೆ ನಾನು ಅದನ್ನು ಬೆಂಬಲಿಸುತ್ತೇನೆ. ಆದರೆ ಈ ವಿಚಾರದಲ್ಲಿ ಪಕ್ಷ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿದರು.
ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್ ‘ಮೀರ್ ಜಾಫರ್’ ಆಗುತ್ತಾರೆ ಎಂಬುದಾಗಿ ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಜೈರಾಮ್ ರಮೇಶ್ ದೂರಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಮತಗಳನ್ನು ವಿಭಜಿಸಲು ಬಿಜೆಪಿಯು ಅವರನ್ನು ಬೆಂಬಲಿಸಿದೆ ಎಂದು ಅವರು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.