ಮಂಗಳವಾರ, ಜನವರಿ 31, 2023
19 °C

ಜ. 30ಕ್ಕೆ ಶ್ರೀನಗರದಲ್ಲಿ ಭಾರತ್ ಜೋಡೊ ಯಾತ್ರೆ ಮುಕ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.

ಯಾತ್ರೆಯ 150ನೇ ದಿನ ಹಾಗೂ ಮಹಾತ್ಮ ಗಾಂಧಿ ಅವರು ಹುತಾತ್ಮರಾದ ದಿನದಂದು ಶ್ರೀನಗರದಲ್ಲಿ ರಾಹುಲ್ ಗಾಂಧಿ ಅವರು  ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ. 

ಯಾತ್ರೆಯ ಸಮಾರೋಪದಲ್ಲಿ ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೇರಿದಂತೆ ವಿರೋಧಪಕ್ಷಗಳ ಅನೇಕ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಆದರೆ, ಕಾಂಗ್ರೆಸ್‌ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಆಹ್ವಾನ ನೀಡಲಾಗಿದೆಯೇ ಎನ್ನುವ ಕುರಿತು ಕಾಂಗ್ರೆಸ್ ಖಚಿತಪಡಿಸಿಲ್ಲ. 

ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆಯು 108 ದಿನಗಳಲ್ಲಿ ಇದುವರೆಗೆ ಒಟ್ಟು 3,122 ಕಿ.ಮೀ. ಸಂಚರಿಸಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (ಸಂಘಟನೆ) ಹಾಗೂ ಜೈರಾಂ ರಮೇಶ್ (ಸಂವಹನ) ಹೇಳಿದ್ದಾರೆ.

‘ಯಾತ್ರೆಯಲ್ಲಿ ರಾಹುಲ್ ಅವರು ಇದುವರೆಗೆ ವಿವಿಧ ಗುಂಪುಗಳೊಂದಿಗೆ 87 ಸಂವಾದಗಳನ್ನು ನಡೆಸಿದ್ದಾರೆ. ಅಂತೆಯೇ 95 ಬೀದಿ ಸಭೆಗಳನ್ನು ನಡೆಸಿದ್ದಾರೆ. ಸಾರ್ವಜನಿಕ ಮಟ್ಟದ 10 ದೊಡ್ಡ ಸಭೆಗಳನ್ನು ಹಾಗೂ 9 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ’ ಎಂದೂ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.  

ಉತ್ತರಪ್ರದೇಶಕ್ಕೆ ಪ್ರವೇಶ: 9 ದಿನಗಳ ವಿರಾಮದ ಬಳಿಕ ಭಾರತ್ ಜೋಡೊ ಯಾತ್ರೆಯು ಜ. 3ರಂದು (ಮಂಗಳವಾರ) ಪುನರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಉತ್ತರಪ್ರದೇಶವನ್ನು ತಲುಪಲಿದೆ. ಅಲ್ಲಿ ಮೂರು ದಿನಗಳ ಕಾಲ ಇರುವ ಯಾತ್ರೆಯು ಬಳಿಕ ಹರಿಯಾಣದಲ್ಲಿ ಜ. 10ತನಕ ಇರಲಿದೆ. 11 ಮತ್ತು 18ರ ನಡುವೆ ಪಂಜಾಬ್ ಮೂಲಕ ಹಾದುಹೋಗಲಿರುವ ಯಾತ್ರೆಯು ಜ. 19ರಂದು ಹಿಮಾಚಲಪ್ರದೇಶವನ್ನು ತಲುಪಲಿದ್ದು, ಜ. 20ರಂದು ಜಮ್ಮು–ಕಾಶ್ಮೀರವನ್ನು ಪ್ರವೇಶಿಸಲಿದೆ.

ಉತ್ತರಪ್ರದೇಶದಲ್ಲಿ ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಬಿಎಸ್‌ಪಿಯ ಮಾಯಾವತಿ ಹಾಗೂ ಆರ್‌ಎಲ್‌ಡಿಯ ಜಯಂತ್ ಸಿಂಗ್ ಅವರು ಭಾಗವಹಿಸುವುದಿಲ್ಲ ಎಂದು ಹೇಳಿದ್ದರೆ, ನಿತೀಶ್ ಕುಮಾರ್ ಅವರು ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. 

ಅಖಿಲೇಶ್ ಪತ್ರ:  ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಅಖಿಲೇಶ್, ‘ಯಾತ್ರೆಗೆ ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ಯಾತ್ರೆಯು ಯಶಸ್ವಿಯಾಗಲಿ’ ಎಂದು ಶುಭ ಹಾರೈಸಿದ್ದಾರೆ. 

‘ಭಾರತವು ಭೌಗೋಳಿಕ ವಿಸ್ತರಣೆಯನ್ನೂ ಮೀರಿದ ಒಂದು ಭಾವನೆಯಾಗಿದೆ. ಪ್ರೀತಿ, ಅಹಿಂಸೆ ಮತ್ತು ಸಹಕಾರದಂಥ ಗುಣಗಳು ದೇಶವನ್ನು ಒಂದುಗೂಡಿಸುವ ಸಕಾರಾತ್ಮಕ ಅಂಶಗಳು. ಯಾತ್ರೆಯು ಈ ಅಂತರ್ಗತ ಸಂಸ್ಕೃತಿಯನ್ನು ಸಂರಕ್ಷಿಸುವ ಗುರಿಯನ್ನು ಸಾಧಿಸುತ್ತದೆ ಎಂದು ಆಶಿಸುತ್ತೇನೆ’ ಎಂದೂ ಅಖಿಲೇಶ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. 

2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ‘ಭಾರತ್ ಜೋಡೊ’ ಪಾದಯಾತ್ರೆಯು 12 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 3,570 ಕಿ.ಮೀ. ಸಂಚರಿಸುವ ಗುರಿಯನ್ನು ಹೊಂದಿದೆ. ಯಾತ್ರೆಯ ಮೂಲನಕ್ಷೆಯಲ್ಲಿ ಇಲ್ಲದ ಹಿಮಾಚಲ ಪ್ರದೇಶವನ್ನು ಬಳಿಕ ಸೇರ್ಪಡೆ ಮಾಡಲಾಗಿದೆ. 

‘ಹಾಥ್ ಸೇ ಹಾಥ್ ಜೋಡೊ’ ಅಭಿಯಾನ: ಕಾಂಗ್ರೆಸ್‌ನ ರಾಜ್ಯಮಟ್ಟದ ಯಾತ್ರೆಯಾಗಿರುವ ‘ಹಾಥ್ ಸೇ ಹಾಥ್ ಜೋಡೊ’ ಅಭಿಯಾನವು, ಈಗಾಗಲೇ ಕೆಲವು ರಾಜ್ಯಗಳಲ್ಲಿ ಆರಂಭವಾಗಿದ್ದು, ಅಭಿಯಾನವು ಭಾರತವನ್ನು ಒಗ್ಗೂಡಿಸುವ ಸಂದೇಶವನ್ನು ಪ್ರತಿ ಭಾರತೀಯನ ಮನೆಬಾಗಿಲಿಗೆ ಕೊಂಡೊಯ್ಯಲಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. 

ಈ ಅಭಿಯಾನವು ಭಾರತದ ಜನರ ಮಾತನ್ನು ಆಲಿಸುವ ಯಾತ್ರೆಯಾಗಿದ್ದು, ಹೆಚ್ಚಿನ ಸಂಖ್ಯೆಯ ಸಭೆಗಳನ್ನು ನಡೆಸಲಿದೆ ಎಂದೂ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು