ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಬಿಜೆಪಿ ಸರ್ಕಾರ ಭದ್ರ

ಗುಜರಾತ್: ಬಿಜೆಪಿ ಕ್ಲೀನ್‌ ಸ್ವೀಪ್‌
Last Updated 10 ನವೆಂಬರ್ 2020, 19:33 IST
ಅಕ್ಷರ ಗಾತ್ರ
ADVERTISEMENT
""

ಭೋಪಾಲ್: ಮಧ್ಯಪ್ರದೇಶದ ವಿಧಾನಸಭೆಯ 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, 19ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಮೂಲಕ ಸರ್ಕಾರವನ್ನುಭದ್ರಪಡಿಸಿಕೊಂಡಿದೆ.

ಕಾಂಗ್ರೆಸ್‌ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಜತೆ ಬಿಜೆಪಿ ಸೇರಿದ್ದ 23 ಕಾಂಗ್ರೆಸ್ಸಿಗರಲ್ಲಿ 19 ಮಂದಿ ಜಯಗಳಿಸಿದ್ದಾರೆ.

ಈ ಗೆಲುವಿನ ಶ್ರೇಯ ಸಂಪೂರ್ಣ ವಾಗಿ ಸಿಂಧಿಯಾ ಅವರಿಗೆ ಸಲ್ಲುತ್ತದೆ. ರಾಜ್ಯ ಸರ್ಕಾರಕ್ಕೆ ಅಗತ್ಯವಿದ್ದ ಬಹುಮತ ವನ್ನು ತಂದುಕೊಡುವಲ್ಲಿ ಸಿಂಧಿಯಾ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗೆ ಬೇಡಿಕೆ ಸಲ್ಲಿಸಲು ಅರ್ಹರಾಗಿದ್ದಾರೆ. ಪಕ್ಷದಲ್ಲಿ ಅವರ ಬಲ ಹೆಚ್ಚಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮಾರ್ಚ್‌ನಲ್ಲಿ ಕಾಂಗ್ರೆಸ್‌ನ 23 ಶಾಸಕರ ಜತೆ ಸಿಂಧಿಯಾ ಅವರು ಬಿಜೆಪಿ ಸೇರಿದ್ದರು. ಈ ಎಲ್ಲರನ್ನೂ ಬಿಜೆಪಿ ಕಣಕ್ಕೆ ಇಳಿಸಿತ್ತು.

ಫಲ ನೀಡದ ಕಮಲನಾಥ್ ಪ್ರಯತ್ನ: ಉಪಚುನಾವಣೆ ನಡೆದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಜಯ ಗಳಿಸಿದ್ದಿದ್ದರೆ, ಮತ್ತೆ ಸರ್ಕಾರ ರಚಿಸ ಬಹುದಿತ್ತು. ಹೀಗಾಗಿ ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ ನಾಥ್ ಅವರು ಸ್ವತಃ ಎಲ್ಲಾ ಕ್ಷೇತ್ರ ಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು.

‘ಪ್ರಜಾಸತ್ತಾತ್ಮಕವಾಗಿ ರಚನೆ ಯಾಗಿದ್ದ ಸರ್ಕಾರವನ್ನು ಉರುಳಿಸಿದ ದ್ರೋಹಿಗಳಿಗೆ ಸರಿಯಾದ ಪಾಠ ಕಲಿಸಿ’ ಎಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು.

ಆದರೆ, ಅವರ ಈ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆತಿಲ್ಲ. ಅವರ ಮನವಿ ಮತದಾರರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ ಕೇವಲ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದೆ.

ಆದರೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ನಡೆಸಿದ ಪ್ರಚಾರ ಫಲ ನೀಡಿದೆ. ಇಬ್ಬರು ನಾಯಕರೂ, ‘ಕಮಲನಾಥ್ ಸರ್ಕಾರವು ರಾಜ್ಯದ ಅಭಿವೃದ್ಧಿಯ ಹಳಿಯನ್ನು ತಪ್ಪಿಸಿತ್ತು. ರಾಜ್ಯವನ್ನು ಅಭಿವೃದ್ಧಿಯ ಹಾದಿಗೆ ಮರಳಿಸಲು ಬಿಜೆಪಿಗೆ ಮತ ನೀಡಿ’ ಎಂದು ಮನವಿ ಮಾಡಿಕೊಂಡಿದ್ದರು.

‘ಬಿಜೆಪಿ ಸೇರಿರುವ ಕಾಂಗ್ರೆಸ್‌ ನಾಯಕರ ಬಗೆಗಿನ ಸಿಟ್ಟನ್ನು ಮರೆತು, ಅವರನ್ನು ಗೆಲ್ಲಿಸಲು ಹೋರಾಡಿ’ ಎಂದು ಪಕ್ಷದ ಕಾರ್ಯಕರ್ತರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮನವಿ ಮಾಡಿಕೊಂಡಿದ್ದರು. ಬಿಜೆಪಿಯ ಗೆಲುವಿನಲ್ಲಿ ಇದು ಹೆಚ್ಚು ಕೆಲಸ ಮಾಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಗುಜರಾತ್: ಬಿಜೆಪಿ ಕ್ಲೀನ್‌ ಸ್ವೀಪ್‌

ಅಹಮದಾಬಾದ್‌: ಗುಜರಾತ್ ವಿಧಾನಸಭೆಯ ಎಂಟು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ, ಎಲ್ಲಾ ಸ್ಥಾನಗಳನ್ನು ಆಡಳಿತಾರೂಢ ಬಿಜೆಪಿ ಗೆದ್ದುಕೊಂಡಿದೆ. ‘ಉಪಚುನಾವಣೆಯ ಫಲಿತಾಂಶವು ಮುಂಬರಲಿರುವ ವಿಧಾನಸಭಾ ಚುನಾವಣೆಯ ಟ್ರೇಲರ್‌’ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾಣಿ ಹೇಳಿದ್ದಾರೆ.

ಹಲವು ಶಾಸಕರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರಿಂದ ಈ ಸ್ಥಾನಗಳು ತೆರವಾಗಿದ್ದವು. ಹೀಗೆ ಕಾಂಗ್ರೆಸ್‌ನಿಂದ ಬಂದಿದ್ದ ಐವರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಇವರೆಲ್ಲರೂ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕಣಕ್ಕೆ ಇಳಿದಿದ್ದ ಬಿಜೆಪಿಯ ಮೂವರು ಅಭ್ಯರ್ಥಿಗಳೂ ಜಯಗಳಿಸಿದ್ದಾರೆ. ಆದರೆ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.

ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಸಹ ಚುನಾವಣೆಯಲ್ಲಿ ಸೋತಿದ್ದಾರೆ. ಹಾರ್ದಿಕ್ ಅವರು ಪಾಟಿದಾರ್ ಸಮುದಾಯದ ಮತಗಳನ್ನು ಸೆಳೆಯಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಬಿಜೆಪಿಯು ಎಲ್ಲಾ ತಂತ್ರಗಳನ್ನು ಸಮರ್ಥವಾಗಿ ಬಳಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ನಮ್ಮ ಸೋಲಿಗೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT