ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕೊಡಲು ಹಣವೆಲ್ಲಿ: ತೇಜಸ್ವಿ ಯಾದವ್‌ ಉದ್ಯೋಗ ಭರವಸೆಗೆ ನಿತೀಶ್‌ ವ್ಯಂಗ್ಯ

10 ಲಕ್ಷ ಸರ್ಕಾರಿ ಉದ್ಯೋಗ: ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಘೋಷಣೆ
Last Updated 2 ನವೆಂಬರ್ 2020, 17:00 IST
ಅಕ್ಷರ ಗಾತ್ರ

ಪಟ್ನಾ:ಮಹಾ ಘಟಬಂಧನವು ಅಧಿಕಾರಕ್ಕೆ ಬಂದರೆ 10 ಲಕ್ಷ ಮಂದಿಗೆ ಸರ್ಕಾರಿ ಉದ್ಯೋಗ ಕೊಡುವುದಾಗಿ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಮಾಡಿರುವ ಘೋಷಣೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೋಮವಾರ ಪ್ರಶ್ನಿಸಿದ್ದಾರೆ.

‘10 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ ನೀಡಿದರೆ ಬೊಕ್ಕಸದ ಮೇಲೆ ವಾರ್ಷಿಕ ₹1.44 ಲಕ್ಷ ಕೋಟಿಯ ಹೊರೆ ಬೀಳಲಿದೆ. ತೇಜಸ್ವಿ ಅವರು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಿ ಈ ಹಣವನ್ನು ನೀಡುವರೇ ಅಥವಾ ತಮ್ಮ ಭರವಸೆಯನ್ನು ಜಾರಿ ಮಾಡಲು ಸರ್ಕಾರಿ ನೌಕರರ ವೇತನವನ್ನು ವಿಳಂಬ ಮಾಡುವರೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಮೊದಲ ಸಂಪುಟ ಸಭೆಯಲ್ಲೇ 10 ಲಕ್ಷ ಮಂದಿಗೆ ಸರ್ಕಾರಿ ಉದ್ಯೋಗ ಕೊಡುವ ಆದೇಶಕ್ಕೆ ಸಹಿ ಮಾಡುವುದಾಗಿ ತೇಜಸ್ವಿ ಹೇಳಿದ್ದಾರೆ. ಅವರು ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲದಿರುವುದರಿಂದ ಅದಕ್ಕೆ ಅವಕಾಶ ಸಿಗಲಾರದು. ಹಿಂದೆ ಸರ್ಕಾರಿ ನೌಕರರಿಗೆ ಸಕಾಲದಲ್ಲಿ ವೇತನ ಲಭಿಸುತ್ತಿರಲಿಲ್ಲ. ಆ ಅವ್ಯವಸ್ಥೆಯನ್ನು ನಾವು ಸರಿಪಡಿಸಿದ್ದೇವೆ. ಈಗ ಅವರು ಮತ್ತೆ ಹಿಂದಿನ ಸ್ಥಿತಿಯನ್ನು ತರುವರೇ ಅಥವಾ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುವರೇ? ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ತೇಜಸ್ವಿ ಈ ಹೇಳಿಕೆ ನೀಡಿದ್ದಾರೆ’ ಎಂದು ನಿತೀಶ್‌ ಆರೋಪಿಸಿದ್ದಾರೆ.

ಮಹತ್ವದ ಹಂತ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ನಡೆಯಲಿದೆ. ಒಟ್ಟಾರೆ ಮೂರು ಹಂತದ ಚುನಾವಣೆಗಳಲ್ಲಿ, ಈ ಹಂತವು ಅತ್ಯಂತ ಮಹತ್ವ ಪಡೆದಿದೆ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ. 17 ಜಿಲ್ಲೆಗಳ ವ್ಯಾಪ್ತಿಗೆ ಬರುವ, 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಸಲಿದೆ. 2.85 ಕೋಟಿ ಮತದಾರರು 1,463 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಕಣದಲ್ಲಿರುವವರ ಪೈಕಿ ಶೇ 10ರಷ್ಟು ಮಹಿಳಾ ಅಭ್ಯರ್ಥಿಗಳಿದ್ದಾರೆ. ಮತದಾರರಲ್ಲೂ ಮಹಿಳೆ ಯರ ಸಂಖ್ಯೆ ಸುಮಾರು 1.35 ಕೋಟಿ ಇದೆ.

ಮತದಾನಕ್ಕೆ ಒಳಗಾಗಲಿರುವ ಒಟ್ಟು 94 ಕ್ಷೇತ್ರಗಳಲ್ಲಿ 56 ಕಡೆ ಆರ್‌ಜೆಡಿ ಹಾಗೂ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿದ್ದಾರೆ. ಇತ್ತೀಚೆಗೆ ಘಟಬಂಧನವನ್ನು ಸೇರಿಕೊಂಡಿರುವ ಸಿಪಿಐ ಹಾಗೂ ಸಿಪಿಎಂ ತಲಾ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಉಳಿದ ಕ್ಷೇತ್ರಗಳನ್ನು ಘಟಬಂಧನದ ಇತರ ಪಕ್ಷಗಳಿಗೆ ನೀಡಲಾಗಿದೆ.

ಎನ್‌ಡಿಎ ಕೂಟದಿಂದ 46 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 43 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳಿದ್ದಾರೆ. ಉಳಿದ ಐದು ಕ್ಷೇತ್ರದಲ್ಲಿ ವಿಐಪಿಯ ಅಭ್ಯರ್ಥಿಗಳಿದ್ದಾರೆ. ಎರಡೂ ಬಣಗಳಿಂದ ಹೊರಗೆ ಉಳಿದಿರುವ ಎಲ್‌ಜೆಪಿಯು 52 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರು ನಿತೀಶ್‌ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಪಕ್ಷದ ಪರವಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದಾರೆ. ಅವರು ರಾಘೋಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಸತೀಶ್‌ ಕುಮಾರ್‌ ಅವರು 2010ರಲ್ಲಿ ತೇಜಸ್ವಿ ಅವರ ತಾಯಿ ರಾಬ್ಡಿ ದೇವಿಯನ್ನು ಸೋಲಿಸಿದ್ದರು. 2015ರ ಚುನಾವಣೆಯಲ್ಲಿ ತೇಜಸ್ವಿ ಅವರು ಈ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಈ ಬಾರಿ ಇಲ್ಲಿ ಸತೀಶ್‌ ಕುಮಾರ್‌ ಹಾಗೂ ತೇಜಸ್ವಿ ಮಧ್ಯೆ ಸ್ಪರ್ಧೆ ಇದೆ. ಅ. 28ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 71 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಮೂರನೇ ಹಂತದ ಚುನಾವಣೆಯು ನ.7ರಂದು ನಡೆಯಲಿದ್ದು ಅಂದು 78 ಕ್ಷೇತ್ರಗಳಿಗೆ ಮತದಾನ ನಡೆಯುವುದು. ನ. 10ರಂದು ಫಲಿತಾಂಶ ಘೋಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT