ಭಾನುವಾರ, ನವೆಂಬರ್ 29, 2020
25 °C
ಪ್ರಧಾನಿ ವಾಗ್ದಾಳಿ l ಮೋದಿಗೆ ರಾಹುಲ್ ಮರುಪ್ರಶ್ನೆ

ಬಿಹಾರ ಚುನಾವಣೆ: ವಿಪಕ್ಷ ವಿರುದ್ಧ 370ನೇ ವಿಧಿ ಪ್ರಸ್ತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಸಾರಾಮ್: ‘370ನೇ ವಿಧಿಯ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ನಮ್ಮ ಎನ್‌ಡಿಎ ಸರ್ಕಾರ ರದ್ದುಪಡಿಸಿದೆ. ತಾವು ಅಧಿಕಾರಕ್ಕೆ ಬಂದರೆ 370ನೇ ವಿಧಿಯ ಅಡಿಯಲ್ಲಿನ ವಿಶೇಷ ಸ್ಥಾನ ಮರುಸ್ಥಾಪಿಸುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹವರು ಈಗ ಬಿಹಾರಕ್ಕೆ ಬಂದು ಮತ ಕೇಳುತ್ತಿದ್ದಾರೆ. ಇದು ಬಿಹಾರದ ಜನತೆಗೆ ಮಾಡುತ್ತಿರುವ ಅವಮಾನವಲ್ಲವೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಇಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ಕೋವಿಡ್‌ ಲಾಕ್‌ಡೌನ್‌ನ ನಂತರ ಪ್ರಧಾನಿ ಮೋದಿ ಅವರು ನಡೆಸುತ್ತಿರುವ ಮೊದಲ ಬಹಿರಂಗ ಸಭೆ ಇದು. 2022ರ ಮಾರ್ಚ್‌ 22ರ ನಂತರ ಕೋವಿಡ್‌ನ ಕಾರಣದಿಂದ ಪ್ರಧಾನಿ ಮೋದಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಚುನಾವಣಾ ಪ್ರಚಾರಕ್ಕಾಗಿ ಬಿಹಾರಕ್ಕೆ ಬಂದಿದ್ದರು. ಬಿಹಾರದಲ್ಲಿ ಶುಕ್ರವಾರ ಒಂದೇ ದಿನ ಮೂರು ರ್‍ಯಾಲಿಗಳನ್ನು ನಡೆಸಿದರು.

ಸಸಾರಾಮ್‌ನಲ್ಲಿ ನಡೆದ ಸಭೆಯಲ್ಲಿ ಅವರು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ‘ನಾವು ತೆಗೆದುಕೊಂಡ ನಿರ್ಧಾರವನ್ನು ಇವರು ತಲೆಕೆಳಗು ಮಾಡುತ್ತಾರಂತೆ. ಬಿಹಾರದ ಮಕ್ಕಳು ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ದೇಶಕ್ಕಾಗಿ ಬಲಿದಾನ ನೀಡಿದ್ದಾರೆ. ಇದು ಬಿಹಾರಿಗಳಿಗೆ ಮಾಡಿದ ಅವಮಾನವಲ್ಲವೇ? ಬಿಹಾರದ ಜನ ತಮ್ಮ ಮಕ್ಕಳನ್ನು ದೇಶಕಾಯಲು ಗಡಿಗೆ ಕಳುಹಿಸುತ್ತಾರೆ. ವಿರೋಧ ಪಕ್ಷಗಳು 370ನೇ ವಿಧಿಯ ಅಡಿಯಲ್ಲಿನ ವಿಶೇಷಾಧಿಕಾರ ಮರುಸ್ಥಾಪಿಸುತ್ತೇವೆ ಎಂದು ಘೋಷಿಸಿ, ಮತ ಕೇಳಲು ಬಿಹಾರಕ್ಕೆ ಬರುವ ಧೈರ್ಯ ಮಾಡಿವೆ’ ಎಂದು ಮೋದಿ ಹೇಳಿದರು.

ಬಿಹಾರದ ಜನ ಪ್ರಬುದ್ಧರು: ‘ಬಿಹಾರದ ಜನ ಪ್ರಬುದ್ಧರು. ಅವರು ಯಾವತ್ತೂ ಗೊಂದಲಕ್ಕೆ ಒಳಗಾಗಿಲ್ಲ. ಮುಂದೆಯೂ ಗೊಂದಲಕ್ಕೆ ಒಳಗಾಗುವುದಿಲ್ಲ. ಆದರೆ ಕೆಲವರು ಅವರನ್ನು ಹಾದಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಭಗಲಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಆರೋಪಿಸಿದರು.

‘ನಿತೀಶ್ ಕುಮಾರ್ ಅವರ ಆಡಳಿತ ಚೆನ್ನಾಗಿದೆ. ಅವರು ತಮ್ಮ ಆಡಳಿತದ ಅವಧಿಯಲ್ಲಿ ಬಿಹಾರವನ್ನು ಅಭಿವೃದ್ಧಿಯ ಹಳಿಗೆ ಮರಳಿಸಿದ್ದಾರೆ. ಈಗ ಬಿಹಾರವು ತ್ವರಿತ ಅಭಿವೃದ್ಧಿಯ ಹಳಿಯಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಸುಳ್ಳಿ ಏಕೆ ಹೇಳುತ್ತೀರಿ: ಮೋದಿಗೆ ರಾಹುಲ್ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸೈನಿಕರಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಬಿಹಾರದ ನವಾಡ ಜಿಲ್ಲೆಯ ಹಿಸುವಾದಲ್ಲಿ ಶುಕ್ರವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ರಾಹುಲ್ ಮಾತನಾಡಿದರು.

‘ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ನೀವು ಹೇಳಿದ್ದೀರಿ. ಅದರೆ, ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಜತೆ ಹೋರಾಡುತ್ತಾ ನಮ್ಮ 20 ಸೈನಿಕರು ಮೃತಪಟ್ಟಿದ್ದರು. ಹಾಗಿದ್ದಮೇಲೆ ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಸುಳ್ಳು ಏಕೆ ಹೇಳಬೇಕು? ಇದು ಸೈನಿಕರಿಗೆ ನೀವು ಮಾಡುತ್ತಿರುವ ಅವಮಾನವಲ್ಲವೇ’ ಎಂದು ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಪ್ರಶ್ನಿಸಿದರು.

‘ಭಾರತದ 1,200 ಚದರ ಕಿ.ಮೀ. ನೆಲವನ್ನು ಅತಿಕ್ರಮಿಸಿರುವ ಚೀನಾ ಸೈನಿಕರನ್ನು ನಮ್ಮ ನೆಲದಿಂದ ಯಾವಾಗ ಓಡಿಸುತ್ತೀರಿ ಎಂಬುದನ್ನು ಹೇಳಿ’ ಎಂದು ರಾಹುಲ್ ಅವರು ಮೋದಿ ಅವರನ್ನು ಆಗ್ರಹಿಸಿದರು.

‘ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಬರುತ್ತಿರುವಾಗ ಬೀದಿಯಲ್ಲಿದ್ದರು. ಆಗ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಮನೆಯಲ್ಲಿ ಆರಾಮವಾಗಿ ಇದ್ದರು. ಈಗ ಮತ ಕೇಳಲು ಹೊರಗೆ ಬಂದಿದ್ದಾರೆ’ ಎಂದು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಲೇವಡಿ ಮಾಡಿದರು. ಇಲ್ಲಿ ನಡೆದ ರ್‍ಯಾಲಿಯಲ್ಲಿ ರಾಹುಲ್ ಗಾಂಧಿ ಅವರ ಮಾತಿನ ನಂತರ ತೇಜಸ್ವಿ ಮಾತನಾಡಿದರು.

‘ಕೋವಿಡ್‌ನ ಹೆಸರಿನಲ್ಲಿ ನಿತೀಶ್ ಅವರು 144 ದಿನ ತಮ್ಮ ಮನೆಯಲ್ಲೇ ಇದ್ದರು. ಹೊರಗೆ ಬಂದಿರಲಿಲ್ಲ. ಆಗಲೂ ಕೊರೊನಾ ಇತ್ತು. ಈಗಲೂ ಕೊರೊನಾ ಇದೆ. ಆಗ ಜನರ ಎದುರು ಬಾರದೇ ಇದ್ದವರು, ಕೊರೊನಾ ಇದ್ದರೂ ಈಗ ಮತ ಕೇಳಲು ಬಂದಿದ್ದಾರೆ. ಅವರಿಗೆ ಅವರ ಖುರ್ಚಿ ಉಳಿಸಿಕೊಳ್ಳುವುದು ಮಾತ್ರ ಬೇಕಿದೆ’ ಎಂದು ತೇಜಸ್ವಿ ಹರಿಹಾಯ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು