ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಮತ್ತೆ ಎಡಪಕ್ಷಗಳ ಮ್ಯಾಜಿಕ್

Last Updated 10 ನವೆಂಬರ್ 2020, 19:03 IST
ಅಕ್ಷರ ಗಾತ್ರ

2015ರ ಚುನಾವಣೆಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಎಡಪಕ್ಷಗಳ ಪಾಲಿಗೆ ಈ ಬಾರಿಯ ಚುನಾವಣೆ ಸಿಹಿಯಾಗಿದೆ. ಸರಿಸುಮಾರು 17 ಕ್ಷೇತ್ರಗಳಲ್ಲಿ ಎಡಪಕ್ಷಗಳು ಮುನ್ನಡೆ ಸಾಧಿಸಿವೆ. ಸಿಪಿಐ (ಎಂಎಲ್) 19, ಸಿಪಿಐ ಆರು ಹಾಗೂ ಸಿಪಿಎಂ 4 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದವು.

ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಭಾಗವಾಗಿರುವ ಮೂರೂ ಪಕ್ಷಗಳು ಬಲರಾಮ್‌ಪುರ, ವಿಭೂತಿಪುರ, ದರೌಲಿ, ಘೋಸಿ, ಮಾಂಝಿ ಸೇರಿದಂತೆ 16 ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಳ್ಳುವತ್ತ ಹೆಜ್ಜೆ ಇರಿಸಿವೆ.

ಒಂದು ಕಾಲದಲ್ಲಿ ಬಿಹಾರದಲ್ಲಿ ಪ್ರಮುಖ ರಾಜಕೀಯ ನೆಲೆ ಕಂಡುಕೊಂಡಿದ್ದ ಎಡಪಕ್ಷಗಳು ಕಳೆದೆರಡು ಚುನಾವಣೆಗಳಲ್ಲಿ ನೆಲಕಚ್ಚಿದ್ದವು. ಕಳೆದ ಬಾರಿ ಸಿಪಿಎಂ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

ಈ ಮೂರೂ ಪಕ್ಷಗಳಿಂದ ಮಹಾಘಟಬಂಧನದ ಬಲ ವೃದ್ಧಿಸಿದ್ದು, ಮೈತ್ರಿಕೂಟ ರಾಜ್ಯದಲ್ಲಿ ಹೆಚ್ಚು ವಿಸ್ತರಿಸಲು ನೆರವಾಗಿವೆ. ಎಡಪಕ್ಷಗಳು ಈ ಬಾರಿ ಗಮನಾರ್ಹ ಸಾಧನೆ ಮಾಡಲಿವೆ ಎಂದು ಮತಗಟ್ಟೆ ಸಮೀಕ್ಷೆಗಳೂ ಭವಿಷ್ಯ ನುಡಿದಿದ್ದವು. ಸಿಪಿಐ (ಎಂಎಲ್) ಸ್ಪರ್ಧಿಸಿರುವ 19 ಕ್ಷೇತ್ರಗಳ ಪೈಕಿ 12–16 ಸೀಟು ಗೆಲ್ಲುವುದಾಗಿ ಇಂಡಿಯಾ ಟುಡೆ–ಆ್ಯಕ್ಸಿಸ್ ಮತಗಟ್ಟೆ ಸಮೀಕ್ಷೆ ತಿಳಿಸಿತ್ತು.

ಅಪರಾಧ ಹಿನ್ನೆಲೆಯವರಿಗೆ ಜೈ ಎಂದ ಮತದಾರ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 1,201 ಅಭ್ಯರ್ಥಿಗಳು ‘ಅಪರಾಧ ಹಿನ್ನೆಲೆ ಹೊಂದಿದ್ದೇವೆ’ ಎಂದು ಘೋಷಿಸಿಕೊಂಡಿದ್ದರು. ಆದರೂ ಮತದಾರ ಇವರ ಕೈಬಿಟ್ಟಿಲ್ಲ. ಈ ಪೈಕಿ ಹಲವು ಅಭ್ಯರ್ಥಿಗಳು ಗಮನ ಸೆಳೆಯುವ ಫಲಿತಾಂಶ ನೀಡಿದ್ದಾರೆ.

ಏಳು ಕೊಲೆ ‍ಪ‍್ರಕರಣಗಳ ಆರೋಪ ಹೊತ್ತಿರುವ ಆರ್‌ಜೆಡಿಯ ಅನಂತ್ ಕುಮಾರ್ ಸಿಂಗ್, ಜೆಡಿಯುನ ರಾಜೀವ ಲೋಚನ ನಾರಾಯಣ ಸಿಂಗ್ ಅವರನ್ನು ಮಣಿಸಿದ್ದಾರೆ.‘ಛೋಟೆ ಸರ್ಕಾರ್’ ಎಂದು ಕರೆಸಿಕೊಳ್ಳುವ ಅನಂತ್, 2005ರಲ್ಲಿ ಜೆಡಿಯುನಿಂದ, 2015ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕೊಲೆ ಯತ್ನ, ಕಳ್ಳತನ, ಮಹಿಳೆ ವಿರುದ್ಧದ ದೌರ್ಜನ್ಯ ಮೊದಲಾದ ಆರೋಪಗಳನ್ನು ಹೊತ್ತಿರುವ ಬಿಜೆಪಿ ಹಾಲಿ ಶಾಸಕ ಸಂಜೀವ್ ಚೌರಾಸಿಯಾ ಅವರು ದಿಘಾ ಕ್ಷೇತ್ರದಲ್ಲಿ ಶೇ 61ರಷ್ಟು ಮತಗಳನ್ನು ಪಡೆದು ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಆರ್‌ಜೆಡಿಯಿಂದ ಸ್ಪರ್ಧಿಸಿರುವ ಮಾಜಿ ಗ್ಯಾಂಗ್‌ಸ್ಟರ್‌ ರಿತ್‌ಲಾಲ್ ರಾಯ್ ಅಲಿಯಾಸ್ ರಿತ್‌ಲಾಲ್ ಯಾದವ್ ಅವರು ‌ದಾನಾಪುರ ಕ್ಷೇತ್ರದಿಂದ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.ಮರು ಆಯ್ಕೆಯತ್ತ ಹೆಜ್ಜೆ ಇರಿಸಿರುವ ಸಿಪಿಐ ಎಂಎಲ್‌ ಶಾಸಕ ಮೆಹಬೂಬ್‌ ಆಲಂ ವಿರುದ್ಧ 14 ಕ್ರಿಮಿನಲ್ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT