ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲೂ ಎಐಎಂಐಎಂ ಸ್ಪರ್ಧೆ: ಒವೈಸಿ

Last Updated 11 ನವೆಂಬರ್ 2020, 10:17 IST
ಅಕ್ಷರ ಗಾತ್ರ

ಹೈದರಾಬಾದ್: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಉತ್ತೇಜನ ಪಡೆದಿರುವ ಎಐಎಂಐಎಂ ಪಕ್ಷ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲೂ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಬಿಹಾರದ ಪೂರ್ವ ಸೀಮಾಂಚಲ್ ಭಾಗದ ಐದು ಕ್ಷೇತ್ರಗಳಲ್ಲಿ ಎಐಎಂಐಎಂ ಪಕ್ಷದ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಕುರಿತು ಮಂಗಳವಾರ ರಾತ್ರಿ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ‘ಬಿಹಾರದ ಪೂರ್ವ ಸೀಮಾಂಚಲ್ ಭಾಗದ ಮತದಾರರು ನಮ್ಮ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷ ಆ ಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಡಲಿದೆ‘ ಎಂದು ಭರವಸೆ ನೀಡಿದರು.

‘ಎಐಎಂಐಎಂ ಪಕ್ಷ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಯಾವ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದನ್ನು ಕಾಲವೇ ಉತ್ತರಿಸುತ್ತದೆ‘ ಎಂದು ಒವೈಸಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತಮ್ಮ ಪಕ್ಷವು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತಿದೆ‘ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಒವೈಸಿ, ’ನಾವು ರಾಜಕೀಯ ಪಕ್ಷವನ್ನು ನಡೆಸುತ್ತಿದ್ದೇವೆ. ನಾವು ಎಲ್ಲಿ ಸ್ವಂತವಾಗಿ ಸ್ಪರ್ಧಿಸುವ ಹಕ್ಕನ್ನು ಪಡೆದಿದ್ದೇವೆ‘ ಎಂದು ಹೇಳಿದರು. ‘ನೀವು ಮಾತ್ರ ಮಹಾರಾಷ್ಟ್ರದಲ್ಲಿ ಶಿವಸೇನಾ ಮಡಿಲಲ್ಲಿ ಕುಳಿತುಕೊಂಡು ಅಧಿಕಾರ ನಡೆಸಬಾರದು. ನಾವು ಚುನಾವಣೆಗೆ ಹೋಗಬಾರದಾ‘ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹೆಸರು ಪ್ರಸ್ತಾಪಿಸದೇ, ಅಸಾದುದ್ದೀನ್ ಪ್ರತಿಕ್ರಿಯಿಸಿದರು.

ಬೇರೆ ರಾಜ್ಯಗಳಲ್ಲೂ ನಿಮ್ಮ ಪಕ್ಷ ಚುನಾವಣೆಗೆ ಸ್ಪರ್ಧಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಒವೈಸಿ, ‘ ನಮ್ಮ ಪಕ್ಷ ಪಶ್ಚಿಮ ಬಂಗಾಳ, ಉತ್ತರಪ್ರದೇಶದಲ್ಲೂ ಸ್ಪರ್ಧಿಸುತ್ತದೆ. ನಾನು ದೇಶದ ಪ್ರತಿ ಚುನಾವಣೆಯಲ್ಲೂ ಸ್ಪರ್ಧಿಸಿ ಹೋರಾಡುತ್ತೇನೆ. ಇದಕ್ಕಾಗಿ ನಾನು ಯಾರದ್ದಾದರೂ ಅನುಮತಿ ಕೇಳಬೇಕಾ‘ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT