ಶನಿವಾರ, ಆಗಸ್ಟ್ 20, 2022
22 °C

ಬಿಹಾರ ಚುನಾವಣೆ: ಅಂತಿಮ ಘಟ್ಟದಲ್ಲಿ ‘ಮಹಾಮೈತ್ರಿ’ ಒಪ್ಪಂದ

ಅಭಯ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಪಟ್ನಾ: ಚುನಾವಣಾ ಆಯೋಗವು ಇದೇ ತಿಂಗಳ ಮೂರನೇ ವಾರದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಇದರಿಂದ, ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಸೀಟು ಹಂಚಿಕೆ ಕಸರತ್ತು ಆರಂಭವಾಗಿದೆ.

ಮಹಾ ಮೈತ್ರಿ ಕೂಟದ ದೊಡ್ಡ ಪಕ್ಷವಾದ ಆರ್‌ಜೆಡಿ ಸೀಟು ಹಂಚಿಕೆ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ನಿರತವಾಗಿದೆ. ಈ ಮಧ್ಯೆ ಮಹಾ ಮೈತ್ರಿಯ ಜೊತೆ ಗುರುತಿಸಿಕೊಂಡಿರುವ ಸಣ್ಣ ಪಕ್ಷಗಳು ಸೀಟು ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ನಿಷಾದ್ ಸಮುದಾಯದ ಮುಖಂಡ ಮುಖೇಶ್‌ ಸಹಾನಿ ಅವರ ವಿಐಪಿ (ವಿಕಾಸ್‌ ಶೀಲ್‌ ಇನ್‌ಸಾನ್‌ ಪಕ್ಷ) ಸರಿಯಾಗಿ ಹಂಚಿಕೆ ನಡೆಯದಿದ್ದರೆ ಮೈತ್ರಿಯಿಂದ ಹೊರನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

ಒಪ್ಪಂದದಂತೆ ಸೀಟುಗಳ ಸಿಂಹಪಾಲನ್ನು ಆರ್‌ಜೆಡಿ ಪಡೆದುಕೊಳ್ಳಲಿದೆ. ಉಳಿದ ಸೀಟುಗಳು ಕಾಂಗ್ರೆಸ್‌ ಮತ್ತು ಎಡಪಕ್ಷಗಳೊಂದಿಗೆ ಹಂಚಿಕೆಯಾಗಲಿವೆ. 243 ವಿಧಾನಸಭಾ ಕ್ಷೇತ್ರಗಳಲ್ಲಿ ಆರ್‌ಜೆಡಿ ಸುಮಾರು 150 ಮತ್ತು ಕಾಂಗ್ರೆಸ್‌ 50 ಸೀಟುಗಳನ್ನು ಪಡೆಯಲಿವೆ. ಉಳಿದ 43 ಸೀಟುಗಳನ್ನು ಎಡಪಕ್ಷಗಳು (ಸಿಪಿಐ, ಸಿಪಿಎಂ, ಸಿಪಿಐಎಂಎಲ್‌), ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮತ್ತು ವಿಐಪಿ ಹಂಚಿಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

‘ಸದ್ಯ ನಾವು ಮಹಾ ಮೈತ್ರಿಯ ಭಾಗವಾಗಿದ್ದೇವೆ. ಒಪ್ಪಂದದಲ್ಲಿ ನಮಗೆ ಸೂಕ್ತ ಪಾಲನ್ನು ನೀಡದಿದ್ದರೆ ಆರ್‌ಜೆಡಿ ನೇತೃತ್ವದ ಮೈತ್ರಿಯಿಂದ ಹೊರ ನಡೆಯುತ್ತೇವೆ. ಎದುರಾಳಿ ಗುಂಪ‍ನ್ನು ಸೇರುತ್ತೇವೆ’ ಎಂದು ವಿಐಪಿ ಮುಖ್ಯಸ್ಥ ಮುಖೇಶ್‌ ಸಹಾನಿ ಹೇಳಿದ್ದಾರೆ. 

‘2019ರ ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷಗಳು, ಅದರಲ್ಲೂ ಮುಖ್ಯವಾಗಿ ಸಿಪಿಐಎಂಎಲ್‌ ಪಕ್ಷದ ಅಭ್ಯರ್ಥಿಗಳು ಮತವನ್ನು ನಿರೀಕ್ಷಿತ ಪ್ರಮಾಣದಲ್ಲಿ ಪಡೆಯಲು ವಿಫಲರಾಗಿದ್ದಾರೆ. ಹೀಗಾಗಿ ಈ ಬಾರಿ ಗೆಲ್ಲುವ ಸಾಮರ್ಥ್ಯ ಇದ್ದವರಿಗೆ ಮಾತ್ರ ಸೀಟು ಹಂಚಿಕೆ ನಡೆಯಲಿದೆ’ ಎಂದು ಆರ್‌ಜೆಡಿಯ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಹೇಳಿರುವುದಾಗಿ ಮೂಲಗಳು ತಿಳಿಸಿವೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು