ಸೋಮವಾರ, ಮಾರ್ಚ್ 27, 2023
31 °C

ಮನಮೋಹನ್‌ ಸಿಂಗ್‌ರನ್ನು ಮೂದಲಿಸಿದಾಗ ಮೊದಲು ಎಚ್ಚರಿಕೆ ನೀಡಿದ್ದು ಮೋದಿ: ಬಿಜೆಪಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮನ್‌ಮೋಹನ್ ಸಿಂಗ್‌ ಅವರನ್ನು ‘ದೇಹಾತಿ ಔರತ್ -(ಹಳ್ಳಿ ಹೆಂಗಸು)’ ಎಂದು ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಅವರು ನಿಂದಿಸಿದಾಗ ಮೊದಲು ಎಚ್ಚರಿಕೆ ರವಾನಿಸಿದ್ದು ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ. ಈ ರೀತಿಯ ದೇಶಹಿತದ ಬದ್ಧತೆ ಇಲ್ಲದ್ದಕ್ಕೆ ಕಾಂಗ್ರೆಸ್ ಇಂದು ನೆಲಕಚ್ಚಿದೆ ಎಂದು ಬಿಜೆಪಿ ಭಾನುವಾರ ಹೇಳಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಗುಜರಾತ್‌ನ ಕಟುಕ‘ ಎಂಬ ಹೇಳಿಕೆ ಬಗ್ಗೆ ಕಾಂಗ್ರೆಸ್‌ ನಾಯಕರು ಮಾತನಾಡದಿರುವ ಬಗ್ಗೆ ಮತ್ತು ಮಂಗಳೂರು ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದ ಅನುಮಾನದ ನುಡಿಗಳ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸರಣಿ ಟ್ವೀಟ್‌ಗಳನ್ನು ಮಾಡಿ ಕಾಂಗ್ರೆಸ್‌ ವಿರುದ್ಧ ಗುಡುಗಿದೆ.

‘ಕಾಂಗ್ರೆಸ್‌ ಮತ್ತು ಪಾಕಿಸ್ತಾನ ಎರಡರದ್ದೂ ಚಿಂತನೆಗಳು ಬಹುತೇಕ ಒಂದೇ ಆಗಿವೆ. ಈ ಕಾರಣಕ್ಕೆ ಪಾಕಿಸ್ತಾನ ವಿರುದ್ಧ ಕಾಂಗ್ರೆಸ್‌ ಶಸ್ತ್ರವನ್ನಲ್ಲ, ಧ್ವನಿಯನ್ನು ಎತ್ತುವುದಕ್ಕೂ ಹಿಂಜರಿಯುತ್ತದೆ. ಪಾಕ್‌ ಭಾರತದ ವಿರುದ್ಧ ಮಾತಾಡಿದರೆ, ಕಾಂಗ್ರೆಸ್ ಸಹ ದೇಶದ ವಿಚಾರದ ವಿರುದ್ಧ ಮಾತಾಡುತ್ತಿದೆ. ಇದು ಅವಿನಾಭಾವ ಸಾಮ್ಯತೆ. ಈ ಹಿಂದೆ ಕಾಂಗ್ರೆಸ್‌ ಆಡಳಿತದಲ್ಲಿ ಭಾರತದ ಮೇಲೆ ಬಾಂಬ್‌ ಹಾಕಿಕೊಂಡು ಪಾಕಿಸ್ತಾನ ಅಬ್ಬರಿಸುತಿತ್ತು. ಆದರೆ ಇದೀಗ ಪ್ರಧಾನಿ ಮೋದಿ ಸರ್ಕಾರದಡಿಯಲ್ಲಿ ಉಗ್ರರು ಮತ್ತು ಉಗ್ರರ ತವರಾದ ಪಾಕ್‌ ಹೆದರಿದೆ. ಸರ್ಜಿಕಲ್‌ ದಾಳಿ, ಯೋಧರಿಗೆ ಬಲ ತುಂಬಿದ್ದಕ್ಕೆ ಪಾಕ್‌ಗೆ ನಿದ್ದೆಯೂ ಬರುತ್ತಿಲ್ಲ‘ ಎಂದು ಹೇಳಿದೆ.

‘ಹೆದರಿದ ಪಾಕ್‌ ಮಾತುಗಳು ಭುಟ್ಟೋ ಬಾಯಲ್ಲಿ ಬಂದ ಹಾಗೆ, ಹೆದರಿದ ಕಾಂಗ್ರೆಸ್‌ ಮಾತುಗಳು ಡಿಕೆ ಶಿವಕುಮಾರ್‌ ಬಾಯಲ್ಲಿ ಬಂದಿವೆ. ಮತಗಳ ಓಲೈಕೆಗೆ ಉಗ್ರನನ್ನು ಬೆಂಬಲಿಸುವ ದರ್ದು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗೇಕೆ ಬೇಕು ಹೇಳಿ? ಪಾಕ್‌ ಹಾಗೂ ಕಾಂಗ್ರೆಸ್‌ಗೆ ಭಾರತ ಮತ್ತು ಭಾರತದ ವಿಚಾರದ ವಿರುದ್ಧ ಸೋಲುವ ಭಯ‘ ಎಂದು ಗೇಲಿ ಮಾಡಿದೆ.

‘ಉಗ್ರನ ಪರ ಮಾತಾಡಿದ ಡಿಕೆಶಿ ಅವರಿಗೆ ಬೆಂಬಲ ಕೊಡುವುದಕ್ಕೆ ಓಡೋಡಿ ಬರುವ ಸಿದ್ದರಾಮಯ್ಯ , ಪಾಕಿಸ್ತಾನ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುವಾಗ ತುಟಿ ಬಿಚ್ಚುವುದಿಲ್ಲವೇಕೆ’ ಎಂದು ಪ್ರಶ್ನೆ ಮಾಡಿದೆ.

‘ಕಾಂಗ್ರೆಸ್‌ ಪಾಕಿಸ್ತಾನವನ್ನು ವಿರೋಧಿಸುತ್ತಿಲ್ಲ. ಏಕೆಂದರೆ, ಪಾಕ್‌ ಮತ್ತು ಕಾಂಗ್ರೆಸ್‌ನ ಮನಸ್ಥಿತಿ ಎರಡೂ ಒಂದೇ. ಭಾರತದಲ್ಲಿರುವ ಕೆಲ ಪಾಕ್‌ ಪ್ರೇಮಿಗಳ ಮತಗಳಿಗಾಗಿ ಅವರು ಈ ಹಂತಕ್ಕೆ ಕುಸಿದಿರುವುದು ದುರಂತ. ಇದು ಗಾಂಧೀಜಿ, ಅಂಬೇಡ್ಕರ್‌ರ ಚಿಂತನೆಗಳಿಗೆ ಮಾಡಿದ ಅಪಮಾನ’ ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು