ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? -ಆರ್‌ಜಿವಿ ವಿರುದ್ಧ ಬಿಜೆಪಿ ದೂರು

ಅಕ್ಷರ ಗಾತ್ರ

ಹೈದರಾಬಾದ್: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ ಹಿನ್ನೆಲೆಯಲ್ಲಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ತೆಲಂಗಾಣದಲ್ಲಿ ಬಿಜೆಪಿ ದೂರು ದಾಖಲಿಸಿದೆ.

‘ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು’ ಎಂದು ಪ್ರಶ್ನಿಸಿ ವರ್ಮಾ ಶುಕ್ರವಾರ ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ, ರಾಮ್ ಗೋಪಾಲ್ ವರ್ಮಾ ವಿರುದ್ಧ ಎಸ್‌ಸಿ –ಎಸ್‌ಟಿ ಕಾನೂನಿನ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ತೆಲಂಗಾಣ ಬಿಜೆಪಿಯ ಹಿರಿಯ ನಾಯಕ ಜಿ. ನಾರಾಯಣರೆಡ್ಡಿ ಅಬಿಡ್‌ ರೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿದ್ದಾರೆ.

‘ನಾವು ದೂರು ಸ್ವೀಕರಿಸಿದ್ದು, ಕಾನೂನಿನ ಅಭಿಪ್ರಾಯ ಕೇಳಿದ್ದೇವೆ. ಕಾನೂನು ಅಭಿಪ್ರಾಯ ಸ್ವೀಕರಿಸಿದ ಬಳಿಕ ವರ್ಮಾ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ’ ಎಂದು ಅಬಿಡ್‌ ರೋಡ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಬಿ.ಪ್ರಸಾದ್ ರಾವ್ ತಿಳಿಸಿದ್ದಾರೆ.

ವರ್ಮಾ ಅವರು ಹಿರಿಯ ಬುಡಕಟ್ಟು ಮಹಿಳಾ ರಾಜಕಾರಣಿಯನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಪೊಲೀಸರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಆರ್‌ಜಿವಿ ಸ್ಪಷ್ಟನೆ: ಈ ಹೇಳಿಕೆಯನ್ನು ನಾನು ಕೇವಲ ವ್ಯಂಗ್ಯವಾಗಿ ಹೇಳಿದ್ದೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ದ್ರೌಪದಿ ಮಹಾಭಾರತದಲ್ಲಿರೋ ನನ್ನ ನೆಚ್ಚಿನ ಪಾತ್ರ. ಈ ಹೆಸರು ಅಪರೂಪವಾಗಿದ್ದರಿಂದ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆ ಹೆಸರಿಗೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT