ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶದಲ್ಲಿ ಸೋಲುವ ಭಯದಿಂದ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಆರೋಪ: ರಾವುತ್

Last Updated 21 ಫೆಬ್ರುವರಿ 2022, 6:45 IST
ಅಕ್ಷರ ಗಾತ್ರ

ನಾಗ್ಪುರ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ವಿರೋಧ ಪಕ್ಷಗಳ ವಿರುದ್ಧ ಆರೋಪಗಳನ್ನು ಮಾಡುತ್ತಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್‌ ಹೇಳಿದ್ದಾರೆ.

2008ರಲ್ಲಿಅಹಮದಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ 56 ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಈ ಪ್ರಕರಣಗಳ ವಿಚಾರಣೆ ನಡೆಸಿದ್ದ ಗುಜರಾತ್‌ನ ವಿಶೇಷ ನಿಯೋಜಿತ ನ್ಯಾಯಾಲಯವು, 49 ಮಂದಿಯನ್ನು ತಪ್ಪಿತಸ್ಥರು ಎಂದು ಫೆಬ್ರುವರಿ 8 ರಂದುತೀರ್ಪು ನೀಡಿತ್ತು. ಫೆಬ್ರುವರಿ 18ರಂದು, 38 ಅಪರಾಧಿಗಳಿಗೆ ಮರಣದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ನ್ಯಾಯಾಲಯದ ತೀರ್ಪಿನ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿಯೋಗಿ ಆದಿತ್ಯನಾಥ ಅವರು ಅಖಿಲೇಶ್ ಯಾದವ್ ನೇತೃತ್ವದಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧ ಕಿಡಿಕಾರಿದ್ದರು.ಲಖನೌ ಮತ್ತು ಕಾನ್ಪುರದಲ್ಲಿ ನಡೆದ ಚುನಾವಣಾ ಸಮಾವೇಶಗಳಲ್ಲಿ ಮಾತನಾಡಿದ್ದ ಯೋಗಿ, ಉಗ್ರನ ತಂದೆ ಸಮಾಜವಾದಿ ಪಕ್ಷದೊಂದಿಗೆ ಸಂಬಂಧ ಹೊಂದಿದ್ದು, ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷದ ಪರ ಪ್ರಚಾರ ಮಾಡುತ್ತಿದ್ದಾರೆ. ಸಮಾಜವಾದಿ ಪಕ್ಷವು ಉಗ್ರರನ್ನು ರಕ್ಷಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಸಂಬಂಧ ಅಖಿಲೇಶ್ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಕೇಂದ್ರ ಸಚಿವ ಅನುರಾಗ್ ಠಾಕೂರ್, 'ಅಹಮದಾಬಾದ್‌ನ ಸರಣಿ ಸ್ಫೋಟ ಪ್ರಕರಣಗಳ49 ಅಪರಾಧಿಗಳಿಗೂ ಸಮಾಜವಾದಿ ಪಕ್ಷಕ್ಕೂ ಸಂಬಂಧವಿದೆಯೇ ಎಂದು ಕೇಳಲು ಬಯಸುತ್ತೇನೆ. ಎಸ್‌ಪಿ ನಾಯಕ ಶಹಬಾದ್ ಅಹ್ಮದ್ ಅವರ ಮಗ ಮೊಹಮ್ಮದ್ ಸೈಫ್, ಸ್ಫೋಟ ಪ್ರಕರಣಗಳ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬ. ಈ ಸಮಾಜವಾದಿ ಪಕ್ಷದ ನಾಯಕ ಯಾರು? ಅಖಿಲೇಶ್ ಯಾದವ್ ಅವರು ಈ ಬಗ್ಗೆ ಮೌನವಾಗಿರುವುದು ಏಕೆ?' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಸಂಜಯ್ ರಾವುತ್‌, 'ಸೋಲಿನ ಅಂಚಿನಲ್ಲಿರುವಾಗ ಬಿಜೆಪಿ ನಾಯಕರು ಈ ರೀತಿಯ ಆರೋಪಗಳನ್ನು ಮಾಡುತ್ತಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸೋಲುತ್ತಿದ್ದು, ಅದರ ನಾಯಕರು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವವು ಕೊನೆಗೊಳ್ಳುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಸದ್ಯ ಮೂರು ಹಂತಗಳ (ಫೆಬ್ರುವರಿ 10, 14 ಮತ್ತು 20ರಂದು) ಮತದಾನ ಪ್ರಕ್ರಿಯೆ ಮುಗಿದಿದೆ.ಫೆಬ್ರುವರಿ 23, 27, ಮಾರ್ಚ್‌ 3 ಮತ್ತು 7ರಂದು ಉಳಿದ ನಾಲ್ಕು ಹಂತಗಳ ಮತದಾನ ನಡೆಯಲಿದೆ. ಮಾರ್ಚ್‌ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಫೆಬ್ರುವರಿ 20ರಂದು 16 ಜಿಲ್ಲೆಗಳ 59 ಕ್ಷೇತ್ರಗಳಲ್ಲಿನಡೆದ ಮೂರನೇ ಹಂತದ ಮತದಾನದ ವೇಳೆ ಶೇ 61.02ರಷ್ಟು ಮಂದಿ ತಮ್ಮ ಹಕ್ಕುಚಲಾಯಿಸಿದ್ದಾರೆ.

ಕಳೆದ (2017ರ) ವಿಧಾನ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT