ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಪ್ರಚೋದನೆಗಾಗಿ ‘ದಿ ಕಾಶ್ಮೀರ ಫೈಲ್ಸ್‌’ ಚಿತ್ರ ಪ್ರಚಾರ: ಮೆಹಬೂಬ ಮುಫ್ತಿ

Last Updated 23 ಮಾರ್ಚ್ 2022, 15:30 IST
ಅಕ್ಷರ ಗಾತ್ರ

ಜಮ್ಮು: ‘ಧಾರ್ಮಿಕ ನೆಲೆಯಲ್ಲಿ ಜನರನ್ನು ಪ್ರಚೋದಿಸುವ ಸಲುವಾಗಿ ಬಿಜೆಪಿಯು ‘ದಿ ಕಾಶ್ಮೀರಿ ಫೈಲ್ಸ್‌’ ಚಲನಚಿತ್ರವನ್ನು ಪ್ರಚಾರ ಮಾಡುತ್ತಿದೆ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಆರೋಪಿಸಿದರು.

ಜಮ್ಮುವಿನಲ್ಲಿ ಬುಧವಾರ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಣ ಗಳಿಸುವ ಉದ್ದೇಶದಿಂದಲೇ ‘ದಿ ಕಾಶ್ಮೀರಿ ಫೈಲ್ಸ್‌’ ಚಿತ್ರವನ್ನು ತೆಗೆಯಲಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಯು ಧಾರ್ಮಿಕ ನೆಲೆಗಟ್ಟಿನಲ್ಲಿ ಜನರನ್ನು ಪ್ರಚೋದಿಸಲು ಈ ಚಿತ್ರಕ್ಕೆ ಉಚಿತ ಟಿಕೆಟ್‌ ವ್ಯವಸ್ಥೆ ಹಾಗೂ ತೆರಿಗೆ ಮುಕ್ತಗೊಳಿಸಿದ್ದಾರೆ’ ಎಂದು ಆರೋಪಿಸಿದರು.

‘ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ವಲಸೆಯ ನಿಖರ ಕಾರಣ ತಿಳಿಯಲು ಸಮಿತಿಯೊಂದನ್ನು ರಚಿಸಬೇಕು. ಅದೇ ರೀತಿ 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಹಿಂಸಾಚಾರ ಹಾಗೂ 2020 ರ ದೆಹಲಿ ಗಲಭೆಗಳ ಕಾರಣ ತಿಳಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ‘ಸತ್ಯ ಮತ್ತು ಸಾಮರಸ್ಯ ಆಯೋಗ’ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ದಿ ಕಾಶ್ಮೀರಿ ಫೈಲ್ಸ್‌’ ಚಲನಚಿತ್ರವನ್ನು ನಾನು ನೋಡಿಲ್ಲ. ಆದರೆ ಬಹಳ ಹಿಂಸಾಚಾರ ಹಾಗೂ ರಕ್ತಪಾತದಿಂದ ಕೂಡಿದ ಮನಕಲಕುವ ದೃಶ್ಯಗಳಿವೆ ಎಂದು ಕೇಳಿ ತಿಳಿದಿದ್ದೇನೆ. ಅಂದು ಕಾಶ್ಮೀರಿ ಪಂಡಿತರ ಮೇಲೆ ನಡೆದ ಭಯಾನಕ ದಾಳಿಯ ಬಗ್ಗೆ ನಮಗೆ ನೋವಿದೆ. ಆದರೆ ಈ ಕಾರಣಕ್ಕಾಗಿ ‍ಇಡೀ ಕಾಶ್ಮೀರಿ ಮುಸ್ಲಿಮರನ್ನು ದ್ವೇಷಿಸಬಾರದು’ ಎಂದು ಮನವಿ ಮಾಡಿದರು.

‘ಕಾಶ್ಮೀರಿ ಪಂಡಿತರಿಗೆ ಆದ ಅನ್ಯಾಯಕ್ಕೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಕಳೆದ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿದ್ದರೆ ಅವರ ಪರಿಸ್ಥಿತಿ ಸುಧಾರಿಸುತ್ತಿತ್ತು. ಆದರೆ ಅವರಿಗಾಗಿ ಏನು ಮಾಡಲಿಲ್ಲ’ ಎಂದು ಆರೋಪಿಸಿದರು.

‘ಕಾಶ್ಮೀರಿ ಪಂಡಿತರಿಗಾಗಿ ಉದ್ಯೋಗದ ಪ್ಯಾಕೇಜ್‌, ಪುನರ್ವಸತಿ ಕಲ್ಪಿಸಿದ್ದು ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯ್ಯೀದ್‌. ನಿರಾಶ್ರಿತ ಕೇಂದ್ರಗಳಿಂದ ಕಾಶ್ಮೀರಿ ಪಂಡಿತರನ್ನು ಕರೆತಂದು ವೆಸು, ಶೇಖ್‌ಪೋರಾ, ಮಟ್ಟಾನ್‌ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಿ ಸಾರಿಗೆ ಸೌಲಭ್ಯ ಒದಗಿಸಿದ್ದರು’ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT