ಸೋಮವಾರ, ಮಾರ್ಚ್ 27, 2023
31 °C
ಮುಂಬೈ: ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಬಿಸಿಸಿ ಸಾಕ್ಷ್ಯಚಿತ್ರ ಪ್ರದರ್ಶನದ ವಿರುದ್ಧ ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ಇಲ್ಲಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಸ್) ಆವರಣದಲ್ಲಿ ಪ್ರದರ್ಶಿಸುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಸಾಕ್ಷ್ಯಚಿತ್ರ ಪ್ರದರ್ಶಿಸುವುದಾಗಿ ‘ದಿ ಪ್ರೊಗ್ರೆಸಿವ್ ಸ್ಟೂಡೆಂಟ್ಸ್ ಫೋರಂ’ (ಪಿಎಸ್‌ಎಫ್) ಪ್ರಕಟಿಸಿತ್ತು. 

ಪ್ರತಿಭಟನೆ ಹಾಗೂ ಭದ್ರತೆಯ ಕಾರಣಕ್ಕೆ, ಪ್ರೊಜೆಕ್ಟರ್‌ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಆದರೆ, ಕೆಲವು ವಿದ್ಯಾರ್ಥಿಗಳು ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಚಿತ್ರ ವೀಕ್ಷಿಸಿದರು. ‘ಇದು ನಕಲಿ ಸಾಕ್ಷ್ಯಚಿತ್ರ. ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದರೆ ನಾವೇ ಮಧ್ಯಪ್ರವೇಶಿಸುತ್ತೇವೆ’ ಎಂದು ಬಿಜೆಪಿಯ ಮುಂಬೈ ಘಟಕದ ಅಧ್ಯಕ್ಷ ಆಶಿಶ್ ಶೆಲಾರ್ ಅವರು ಹೇಳಿದ್ದಾರೆ. 

ಪ್ರೆಸಿಡೆನ್ಸಿ ವಿ.ವಿಯಲ್ಲಿ ವಿದ್ಯುತ್ ಕಡಿತ: ಕೋಲ್ಕತ್ತದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಪ್ರದರ್ಶಿಸಲಾದ ಬಿಬಿಸಿ ಸಾಕ್ಷ್ಯಚಿತ್ರವನ್ನು 50ಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು. ಆದರೆ ವಿಶ್ವವಿದ್ಯಾಲಯವು ವಿದ್ಯುತ್ ಪೂರೈಕೆ ಕಡಿತಗೊಳಿಸಿ ಅಡ್ಡಿಪಡಿಸಿದ್ದರಿಂದ ಪ್ರದರ್ಶನ ಸ್ಥಳವನ್ನು ಬದಲಾಯಿಸಬೇಕಾಯಿತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಜೆ 6 ಗಂಟೆಯ ಹೊತ್ತಿಗೆ ವಿದ್ಯುತ್ ಪೂರೈಕೆ ಶುರುವಾದ ಬಳಿಕ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. 

ಪುಣೆಯ ಎಫ್‌ಟಿಐಐನಲ್ಲಿ ಪ್ರದರ್ಶನ: ಜನವರಿ 26ರಂದು ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಾಗಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ (ಎಫ್‌ಟಿಐಐ) ವಿದ್ಯಾರ್ಥಿ ಸಂಘಟನೆ ಶನಿವಾರ ತಿಳಿಸಿದೆ.

ದೆಹಲಿ ವಿ.ವಿ ಗಲಾಟೆ ತನಿಖೆಗೆ ಸಮಿತಿ

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸುವ ಕುರಿತಂತೆ ಶುಕ್ರವಾರ ಉಂಟಾದ ಗಲಾಟೆಯ ಬಗ್ಗೆ ತನಿಖೆ ನಡೆಸಲು ದೆಹಲಿ ವಿ.ವಿ. ಏಳು ಸದಸ್ಯರ ಸಮಿತಿ ರಚಿಸಿದೆ ಎಂದು ‘ಪಿಟಿಐ’ ವರದಿ ಮಾಡಿದೆ. ವಿಶ್ವವಿದ್ಯಾಲಯದ ಮುಖ್ಯ ಮೇಲ್ವಿಚಾರಕಾರದ ರಜಿನಿ ಅಬ್ಬಿ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಯೋಗೇಶ್ ಸಿಂಗ್ ಅವರಿಗೆ ಸೋಮವಾರ ಸಂಜೆಯ 5 ಗಂಟೆಯ ಒಳಗೆ ವರದಿ ನೀಡಬೇಕು ಎಂದು ಸಮಿತಿಗೆ ಸೂಚನೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು