ಶುಕ್ರವಾರ, ಅಕ್ಟೋಬರ್ 30, 2020
26 °C

ಹಾಥರಸ್‌ ಸಂತ್ರಸ್ತೆ ಕುಟುಂಬದ ಭೇಟಿಗೆ ಅವಕಾಶ ನೀಡಿ: ಯೋಗಿಗೆ ಉಮಾ ಭಾರತಿ ವಿನಂತಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಹಾಥರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿರುವ ಯುವತಿಯ ಕುಟುಂಬವನ್ನು ಭೇಟಿಯಾಗಲು ರಾಜಕೀಯ ನಾಯಕರಿಗೆ ಅವಕಾಶ ನೀಡಬೇಕೆಂದು ಬಿಜೆಪಿ ನಾಯಕಿ ಉಮಾ ಭಾರತಿ ಅವರು ಯೋಗಿ ಆದಿತ್ಯನಾಥ್‌ಗೆ ವಿನಂತಿಸಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 'ಯುವತಿಯು ದಲಿತ ಕುಟುಂಬಕ್ಕೆ ಸೇರಿದವಳು. ಪೊಲೀಸರು ಆತುರದಿಂದ ಆಕೆಯ ಕೊನೆಯ ವಿಧಿಗಳನ್ನು ನಡೆಸಿದ್ದಾರೆ. ಈಗ ಆಕೆಯ ಕುಟುಂಬದ ಮೇಲೆ ನಿರ್ಬಂಧ ಹೇರಲಾಗಿದೆ. ತನಿಖೆ ನಡೆಯುತ್ತಿರುವ ಸಮಯದಲ್ಲಿ ಸಂತ್ರಸ್ತೆಯ ಕುಟುಂಬದ ಮೇಲೆ ನಿರ್ಬಂಧ ಹೇರುವ ಯಾವುದೇ ನಿಯಮದ ಬಗ್ಗೆ ನನಗೆ ತಿಳಿದಿಲ್ಲ. ಇದರಿಂದ ಎಸ್‌ಐಟಿ ತನಿಖೆಯ ಬಗ್ಗೆಯೇ ಪ್ರಶ್ನೆಗಳು ಏಳುತ್ತವೆ' ಎಂದು ಉಮಾ ಭಾರತಿ ಹೇಳಿದ್ದಾರೆ. 

'ನೀವು ತುಂಬಾ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದೀರಿ ಎಂಬುದು ನನಗೆ ಗೊತ್ತು. ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಮಾಧ್ಯಮ ವ್ಯಕ್ತಿಗಳು ಮತ್ತು ಇತರ ರಾಜಕೀಯ ಪಕ್ಷಗಳಿಗೆ ಅವಕಾಶ ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ' ಎಂದು ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಅವರು ಯೋಗಿ ಆದಿತ್ಯನಾಥ್‌ಗೆ ಕೇಳಿಕೊಂಡಿದ್ದಾರೆ. 

ಕಳೆದ ವಾರ ಕೋವಿಡ್‌ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಉಮಾ ಭಾರತಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿದ್ದ ಉತ್ತರ ಪ್ರದೇಶದ ಹಾಥರಸ್‌ನ 19 ವರ್ಷದ ಯುವತಿ ದೆಹಲಿಯಲ್ಲಿ ಮಂಗಳವಾರ ಮೃತಪಟ್ಟಿದ್ದರು. ಮೂಳೆ ಮುರಿತ ಮತ್ತು ನಾಲಿಗೆಯು ತುಂಡಾಗಿದ್ದ ಯುವತಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರು. 

ಮೃತಪಟ್ಟ ಯುವತಿಯ ಅಂತ್ಯಕ್ರಿಯೆಯನ್ನು ಉತ್ತರ ಪ್ರದೇಶ ಪೊಲೀಸರು ನಡುರಾತ್ರಿಯಲ್ಲೇ ಮಾಡಿ ಮುಗಿಸಿದ್ದರು. ಅಂತ್ಯಕ್ರಿಯೆಗೆ ತೆರಳಲು ತಮಗೂ ಅವಕಾಶ ನೀಡಿರಲಿಲ್ಲ ಎಂದು ಸಂತ್ರಸ್ತೆಯ  ಕುಟುಂಬ ಸದಸ್ಯರು ಆರೋಪಿಸಿದ್ದರು. ಈ ಘಟನೆಯು ದೇಶದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ | ಹಾಥರಸ್‌ ಅತ್ಯಾಚಾರ ಪ್ರಕರಣ: ದೆಹಲಿಯ ಜಂತರ್‌ ಮಂತರ್‌ನಲ್ಲಿ ಭಾರಿ ಪ್ರತಿಭಟನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು