ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ನದಿಯಲ್ಲಿ ತೇಲುತ್ತಿರುವ ಮೃತದೇಹಗಳು: ಕೋವಿಡ್‌ ಸೋಂಕಿತರದ್ದೆಂಬ ಶಂಕೆ

Last Updated 10 ಮೇ 2021, 14:35 IST
ಅಕ್ಷರ ಗಾತ್ರ

ಪಟ್ನಾ: ಕೆಲವು ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಗಂಗಾ ನದಿಯಲ್ಲಿ ತೇಲುತ್ತಿರುವುದು ಕಂಡುಬಂದಿದ್ದು, ಇವು ಕೋವಿಡ್‌ ಸೋಂಕಿನಿಂದ ಮೃತಪಟ್ಟವರದ್ದು ಇರಬಹುದು ಎಂದು ಶಂಕಿಸಲಾಗಿದೆ.

ಬಿಹಾರದ ಬಕ್ಸಾರ್‌ ಜಿಲ್ಲೆಯ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ಶವಗಳು ಪತ್ತೆಯಾಗಿವೆ. ಈ ಜಿಲ್ಲೆಯು ಉತ್ತರ ಪ್ರದೇಶ ಗಡಿಗೆ ಹೊಂದಿಕೊಂಡಂತಿದೆ.

‘ಶವಗಳು ತೇಲುತ್ತಿರುವ ಬಗ್ಗೆ ಕಾವಲುಗಾರರು ನಮಗೆ ಮಾಹಿತಿ ನೀಡಿದರು. ನದಿಯ ಮೇಲ್ಭಾಗದಿಂದ ಇವು ತೇಲಿ ಬಂದಿವೆ ಎಂದು ಅವರು ಮಾಹಿತಿ ನೀಡಿದರು. ಈವರೆಗೆ 15 ಶವಗಳನ್ನು ಪತ್ತೆಮಾಡಲಾಗಿದೆ. ಈ ಪೈಕಿ ಯಾವುದೂ ಜಿಲ್ಲೆಗೆ ಸೇರಿದವರದ್ದಲ್ಲ ಎಂದು ಬಕ್ಸಾರ್‌ನ ಚಸುವಾ ಗ್ರಾಮದ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

‘ಉತ್ತರ ಪ್ರದೇಶದ ಅನೇಕ ಜಿಲ್ಲೆಗಳು ಗಂಗಾ ನದಿತಟದಲ್ಲಿವೆ. ಶವಗಳನ್ನು ನದಿಗೆ ಎಸೆಯಲು ಕಾರಣಗಳೇನಿರಬಹುದು ಎಂಬುದು ತಿಳಿದಿಲ್ಲ. ಮೃತದೇಹಗಳು ಕೋವಿಡ್‌ನಿಂದ ಸಾವಿಗೀಡಾದವರದ್ದೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮೃತದೇಹಗಳು ಕೊಳೆಯಲು ಆರಂಭವಾಗಿದ್ದವು. ಆದರೆ, ಇವುಗಳನ್ನು ಯೋಗ್ಯ ರೀತಿಯಲ್ಲಿ ವಿಲೇವಾರಿ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಜತೆಗೆ ನಾವು ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.

ಕೆಲವು ಸುದ್ದಿವಾಹಿನಿಗಳು 100ಕ್ಕೂ ಹೆಚ್ಚು ಶವಗಳು ನದಿಯಲ್ಲಿ ತೇಲುತ್ತಿವೆ ಎಂದು ವರದಿ ಮಾಡಿರುವುದನ್ನು ಅಲ್ಲಗಳೆದಿರುವ ಅವರು, ಇವು ಅತಿರಂಜಿತ ವರದಿಗಳು ಎಂದಿದ್ದಾರೆ.

‘ಮೃತದೇಹಗಳ ದಹನಕ್ಕೆ ಕಟ್ಟಿಗೆ ಮತ್ತು ಇತರ ಸಾಮಗ್ರಿಗಳ ಕೊರತೆ ಇದೆ. ಲಾಕ್‌ಡೌನ್‌ನಿಂದಾಗಿ ಇವುಗಳು ಲಭ್ಯವಾಗುತ್ತಿಲ್ಲ. ಇದು ಬಂಧುಗಳ ಸಾವಿನಿಂದ ದುಃಖತಪ್ತರಾದ ಕುಟುಂದವರು ಅಗಲಿದ ಸಂಬಂಧಿಕರ ದೇಹಗಳನ್ನು ನದಿಯಲ್ಲಿ ಮುಳುಗಿಸಲು ಮುಂದಾಗಲು ಪ್ರೇರೇಪಿಸುತ್ತಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT