ನವದೆಹಲಿ: ಲಂಚ ಪಡೆದು ನಿಯಮಗಳನ್ನು ಮೀರಿ ಚೀನಾ ಪ್ರಜೆಗಳಿಗೆ ವೀಸಾ ಕೊಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಕಾರ್ತಿ ಚಿದಂಬರಂ ಅವರ ಆಪ್ತ ಎಸ್. ಭಾಸ್ಕರ ರಾಮನ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಸಂಬಂಧ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ಮಂಗಳವಾರ, ತನಿಖಾ ಸಂಸ್ಥೆಯು ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರ ಮನೆ ಸೇರಿದಂತೆ ದೇಶದಾದ್ಯಂತ 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು.
ಕಾರ್ತಿ ಚಿದಂಬರಂ, ಭಾಸ್ಕರ ರಾಮನ್ ಮತ್ತು ಖಾಸಗಿ ಸಂಸ್ಥೆ ಸೇರಿದಂತೆ ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಫ್‌ಐಆರ್‌ನ ಪ್ರಕಾರ, ಪಂಜಾಬ್‌ನ ಮಾನ್ಸಾ ಮೂಲದ ಖಾಸಗಿ ಸಂಸ್ಥೆ, ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ಯೋಜನೆಯನ್ನು ನಿಗದಿತ ಸಮಯದೊಳಗೆ ಮುಗಿಸುವ ಧಾವಂತದಲ್ಲಿತ್ತು. ಅದಕ್ಕಾಗಿ, ಚೀನಾದ ಪ್ರಜೆಗಳನ್ನು ಕರೆಸಿಕೊಳ್ಳಲು ಅವರಿಗೆ ನಿಯಮ ಮೀರಿ ವೀಸಾ ಕೊಡಿಸಲು ಮಧ್ಯವರ್ತಿಗಳನ್ನು ಬಳಸಿಕೊಂಡು 50 ಲಕ್ಷ ರೂಪಾಯಿ ಪಾವತಿ ಮಾಡಿದೆ ಎಂದು ಆರೋಪಿಸಲಾಗಿದೆ.
‘ಪಂಜಾಬ್ ಮೂಲದ ಖಾಸಗಿ ಸಂಸ್ಥೆಯು 1980 ಎಂಡಬ್ಲ್ಯೂ ಉಷ್ಣ ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿತ್ತು. ಸ್ಥಾವರದ ಕಾಮಗಾರಿಯನ್ನು ಚೀನಾದ ಕಂಪನಿಗೆ ಹೊರಗುತ್ತಿಗೆ ನೀಡಲಾಗಿತ್ತು. ಯೋಜನೆಯ ನಿಗದಿತ ಸಮಯದಲ್ಲಿ ಕೆಲಸ ಮುಗಿಸಬೇಕಿತ್ತು. ವಿಳಂಬಕ್ಕಾಗಿ ದಂಡದ ಕ್ರಮಗಳನ್ನು ತಪ್ಪಿಸಲು ಖಾಸಗಿ ಕಂಪನಿಯು ಹೆಚ್ಚು ಹೆಚ್ಚು ಚೀನೀ ವೃತ್ತಿಪರರನ್ನು ಕರೆತರಲು ಪ್ರಯತ್ನಿಸಿತ್ತು. ಗೃಹ ಸಚಿವಾಲಯವು ವಿಧಿಸಿರುವ ಮಿತಿಗಿಂತ ಹೆಚ್ಚಿನ ವೀಸಾಗಳ ಅಗತ್ಯ ಕಂಪನಿಗಿತ್ತು’ಎಂದು ಸಿಬಿಐ ಅಧಿಕಾರಿ ಹೇಳಿದ್ದಾರೆ.
ಈ ವೇಳೆ ಚೆನ್ನೈ ಮೂಲದ ವ್ಯಕ್ತಿಯನ್ನು ಸಂಪರ್ಕಿಸಿದ ಖಾಸಗಿ ಕಂಪನಿಯು ಹಿಂಬಾಗಿಲ ಮೂಲಕ ಪ್ರಯತ್ನ ನಡೆಸಿದೆ. ಚೀನಾ ಕಂಪನಿಯ ಅಧಿಕಾರಿಗಳಿಗೆ ಮಂಜೂರು ಮಾಡಲಾದ 263 ಪ್ರಾಜೆಕ್ಟ್ ವೀಸಾಗಳನ್ನು ಮರುಬಳಕೆ ಮಾಡಲು ನಿಯಮ ಮೀರಿ ಅನುಮತಿ ಪಡೆಯಲು ನಿರ್ಧರಿಸಿತು ಎಂದು ಅವರು ಹೇಳಿದ್ದಾರೆ.
ಅದರನ್ವಯ, ಮಾನ್ಸಾ ಮೂಲದ ಖಾಸಗಿ ಕಂಪನಿಯ ಪ್ರತಿನಿಧಿಯು ಕಂಪನಿಗೆ ಮಂಜೂರು ಮಾಡಿದ ಪ್ರಾಜೆಕ್ಟ್ ವೀಸಾಗಳನ್ನು ಮರುಬಳಕೆ ಮಾಡಲು ಅನುಮೋದನೆ ಕೋರಿ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದಾದ ಒಂದು ತಿಂಗಳೊಳಗೆ ಅನುಮೋದನೆ ಸಿಕ್ಕಿದೆ.ಇದಕ್ಕಾಗಿ ಕಂಪನಿಯು ಮಧ್ಯವರ್ತಿ ಮೂಲಕ ₹ 50 ಲಕ್ಷ ಲಂಚ ಪಾವತಿಸಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.