ಗುರುವಾರ , ಸೆಪ್ಟೆಂಬರ್ 23, 2021
22 °C

ಬಿಎಸ್ಎನ್‌ಎಲ್‌ ಕಳಪೆ ನೆಟ್‌ವರ್ಕ್‌: ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter/ANI

ಪಣಜಿ: ಕೊರೊನಾ ವೈರಸ್‌ ಸಂಕಷ್ಟದಿಂದ ಪಾರಾಗಲು ಹರಸಾಹಸ ಪಡುತ್ತಿರುವ ನಡುವೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕುಂಟಾಗದಿರಲಿ ಎಂಬ ಆಶಯದಲ್ಲಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ಸರ್ಕಾರದ ಸುಪರ್ದಿಯಲ್ಲೇ ಇರುವ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಮಾತ್ರ ವಿದ್ಯಾರ್ಥಿಗಳಿಗೆ ನರಕ ಯಾತನೆ ನೀಡುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಇಲ್ಲದಿದ್ದರೆ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸೇವೆ ಸ್ಥಗಿತಗೊಂಡಿರುತ್ತದೆ. ಇದು ಸರ್ವೇಸಾಮಾನ್ಯ ಎಂಬಂತೆ ಆಗಿದೆ. ಬಿಎಸ್‌ಎನ್‌ಎಲ್‌ ಬಳಕೆದಾರರು ಬೇಸತ್ತು ಬೇರೆ ನೆಟ್‌ವರ್ಕ್‌ಗಳಿಗೆ ಪೋರ್ಟ್‌ ಆಗುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಇದರ ಕುರಿತು ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಈ ನಡುವೆ ಗೋವಾದ ಸತ್ತಾರಿ ತಾಲೂಕಿನ ಕೆಲವು ವಿದ್ಯಾರ್ಥಿಗಳು ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ತರಗತಿಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರದ ಹೆಚ್ಚಿನ ಮಂದಿಯ ಧ್ವನಿಯೂ ಇದಾಗಿರುವುದರಿಂದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ.

ಸತ್ತಾರಿ ತಾಲೂಕಿನ ಕೋಡಲ್‌, ಸಟ್ರೆ ಮತ್ತು ದಿರೊಡೆ ಗ್ರಾಮದ ವಿದ್ಯಾರ್ಥಿಗಳು ವಾಲ್‌ಪೊಯಿ ಎಂಬಲ್ಲಿರುವ ಬಿಎಸ್‌ಎನ್‌ಎಲ್‌ ಕಚೇರಿಗೆ ಮಂಗಳವಾರ ತೆರಳಿ, ಕಳಪೆ ಸೇವೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಬಿಎಸ್‌ಎನ್‌ಎಲ್‌ ಸಂಪರ್ಕ ಸಮಸ್ಯೆ ಹೊಸದೇನು ಅಲ್ಲ. ಕಳೆದ ಶೈಕ್ಷಣಿಕ ವರ್ಷದಲ್ಲೂ ವಿದ್ಯಾರ್ಥಿಗಳು ಇಂತಹ ಸಮಸ್ಯೆ ಎದುರಿಸಿದ್ದರು. ರಾಜ್ಯ ಸರ್ಕಾರ ಈ ಸಮಸ್ಯೆಗೆ ಪರಿಹಾರ ಒದಗಿಸಬಹುದು ಎಂಬ ಆಶಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ.

ಆನ್‌ಲೈನ್‌ ತರಗತಿಗಳಿಗೆ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ನಿಂದ ತೊಡಕು ಉಂಟಾಗುತ್ತಿರುವ ಬಗ್ಗೆ ಪಂಚಾಯಿತಿಗೆ ಪತ್ರ ಬರೆದಿದ್ದೆವು. ಕೊನೆಗೆ ಪತ್ರವನ್ನು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರಿಗೆ ರವಾನಿಸಲಾಗಿತ್ತು. ಆದರೆ ಇದುವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಸೋಮನಾಥ್‌ ಗವಾಸ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾನೆ.

ಸರ್ಕಾರ ಅಥವಾ ಅಧಿಕಾರಿಗಳು ಬಿಎಸ್‌ಎನ್‌ಎಲ್‌ನ ಕಳಪೆ ಗುಣಮಟ್ಟದ ಸೇವೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳದಿದ್ದರೆ ಪುನಃ ಕಚೇರಿಗೆ ಮುತ್ತಿಗೆ ಹಾಕುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು