ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ | ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮಾಯಾವತಿ ಬೆಂಬಲ

Last Updated 25 ಜೂನ್ 2022, 6:29 IST
ಅಕ್ಷರ ಗಾತ್ರ

ಲಖನೌ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ವರಿಷ್ಠೆ ಮಾಯಾವತಿ ಬೆಂಬಲ ಘೋಷಿಸಿದ್ದಾರೆ.

ಬುಡಕಟ್ಟು ಸಮಾಜವು ಪಕ್ಷದ ಚಳವಳಿಯ ಪ್ರಮುಖ ಭಾಗವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡಲು ಬಿಎಸ್‌ಪಿ ನಿರ್ಧರಿಸಿದೆ ಎಂದು ಮಾಯಾವತಿ ತಿಳಿಸಿದರು.

ಇದು ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿಸುವ ಅಥವಾ ವಿರೋಧ ಪಕ್ಷ ಯುಪಿಎ ವಿರುದ್ಧದ ನಿರ್ಧಾರವಲ್ಲ. ಬದಲಾಗಿ ನಮ್ಮ ಪಕ್ಷ ಹಾಗೂ ಆಂದೋಲನವನ್ನು ಗಮನದಲ್ಲಿಟ್ಟುಕೊಂಡು ಸಮರ್ಥ ಹಾಗೂ ಸಮರ್ಪಿತ ಬುಡಕಟ್ಟು ಮಹಿಳೆಯನ್ನು ದೇಶದ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದರೆ, ಈ ಹುದ್ದೆ ಅಲಂಕರಿಸಲಿರುವ ಮೊದಲ ಬುಡಕಟ್ಟು ನಾಯಕಿ ಹಾಗೂ ಎರಡನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ.

ವಿರೋಧ ಪಕ್ಷಗಳು ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ತಮ್ಮ ಪಕ್ಷದ ಜೊತೆ ಸಮಾಲೋಚಿಸಿಲ್ಲ ಎಂದು ದೂರಿದ ಮಾಯಾವತಿ, ರಾಷ್ಟ್ರಪತಿ ಚುನಾವಣೆಯಲ್ಲಿ ನಿರ್ಧಾರ ತೆಗೆದುಕೊಳ್ಳಲು ತಮ್ಮ ಪಕ್ಷ ಸ್ವತಂತ್ರವಾಗಿದೆ ಎಂದು ಸಮರ್ಥಿಸಿಕೊಂಡರು.

ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಕಾಂಗ್ರೆಸ್, ಟಿಎಂಸಿ ಮತ್ತು ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಅಖಾಡಕ್ಕಿಳಿಸಿದೆ.

ಶುಕ್ರವಾರ ಸಂಸತ್ ಭವನದಲ್ಲಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಪ್ರಮುಖ ಮುಖಂಡರ ಉಪಸ್ಥಿತಿಯಲ್ಲಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಸಿದ್ದರು.

ಇದಕ್ಕೂ ಮೊದಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿ ಪ್ರತಿಪಕ್ಷಗಳ ಪ್ರಮುಖ ನಾಯಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಉಮೇದುವಾರಿಕೆಗೆ ಬೆಂಬಲ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT