ಶನಿವಾರ, ಸೆಪ್ಟೆಂಬರ್ 25, 2021
24 °C
ತಾಲಿಬಾನ್‌ ಕುರಿತು ಹೇಳಿಕೆ: ಸಮಾಜವಾದಿ ಪಾರ್ಟಿ ಸಂಸದ ಶಫಿಕುರ್‌ ವಿರುದ್ಧ ಪ್ರಕರಣ

'ಅಫ್ಗನ್ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್ ಹೋರಾಟ' ಎಂದ ಸಂಸದ; ದೇಶದ್ರೋಹ ಪ್ರಕರಣ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಲಖನೌ: ತಾಲಿಬಾನ್‌ ಅಫ್ಗಾನಿಸ್ತಾನವನ್ನು ಕೈವಶ ಮಾಡಿಕೊಂಡಿರುವುದನ್ನು ಸಮರ್ಥಿಸುತ್ತ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೋಲಿಕೆ ಮಾಡಿರುವ ಸಮಾಜವಾದಿ ಪಕ್ಷದ ಸಂಸದ ಶಫಿಕುರ್‌ ರಹಮಾನ್‌ ಬರ್ಕ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆ ಕುರಿತು ಸೋಮವಾರ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಸಂಭಲ್‌ ಲೋಕಸಭಾ ಕ್ಷೇತ್ರದ ಸಂಸದ ಶಫಿಕುರ್‌, 'ಭಾರತವು ಬ್ರಿಟಿಷ್‌ ಆಡಳಿತಕ್ಕೆ ಒಳಪಟ್ಟಿದ್ದಾಗ, ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಅವರೂ ಸಹ ಸ್ವತಂತ್ರರಾಗಲು ಇಚ್ಛಿಸಿದ್ದಾರೆ. ಇದು ಅವರ ಖಾಸಗಿ ವಿಚಾರವಾಗಿದೆ. ಇದರಲ್ಲಿ ನಾವು ಹೇಗೆ ಮೂಗು ತೂರಿಸಲು ಸಾಧ್ಯ?' ಎಂದಿದ್ದರು.

'ಅಫ್ಗನ್ನರು ಅವರ ರಾಷ್ಟ್ರವನ್ನು ಅವರದೇ ರೀತಿಯಲ್ಲಿ ಮುನ್ನಡೆಸಲು ಬಯಸಿದ್ದಾರೆ. ತಾಲಿಬಾನಿಗಳು ಅವರ ರಾಷ್ಟ್ರವನ್ನು ಸ್ವತಂತ್ರಗೊಳಿಸಲು ಮುಂದಾಗಿದ್ದಾರೆ ಹಾಗೂ ಇದು ಅಫ್ಗಾನಿಸ್ತಾನದ ಆಂತರಿಕ ವಿಚಾರವಾಗಿದೆ' ಎಂದು ಶಫಿಕುರ್‌ ಹೇಳಿದ್ದರು.

ಸಂಸದ ಶಫಿಕುರ್‌ ಅವರು ತಾಲಿಬಾನಿಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಹೋಲಿಕೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. 'ಶಫಿಕುರ್‌ ಅವರ ವಿರುದ್ಧ ದೇಶ ದ್ರೋಹ (124ಎ), 154ಎ, 295 ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಫೇಸ್‌ಬುಕ್‌ ವಿಡಿಯೊದಲ್ಲೂ ಇಂಥದ್ದೇ ಹೇಳಿಕೆಗಳನ್ನು ನೀಡಿರುವ ಇಬ್ಬರು ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ' ಎಂದು ಸಂಭಲ್‌ನ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಸುದೀರ್ಘ ಹೋರಾಟ; ಅಫ್ಗನ್‌ನಲ್ಲಿ ಅಮೆರಿಕ ಮಾಡಿದ ಖರ್ಚೆಷ್ಟು?

ತಾಲಿಬಾನ್‌ ಪಡೆ ರಷ್ಯಾ ಅಥವಾ ಅಮೆರಿಕವು ಅಫ್ಗಾನಿಸ್ತಾನದಲ್ಲಿ ಪ್ರಭುತ್ವ ಸಾಧಿಸಲು ಬಿಡಲಿಲ್ಲ ಎಂದಿದ್ದರು. ಅವರ ಅಭಿಪ್ರಾಯಗಳಿಗೆ ಮಂಗಳವಾರ ಉತ್ತರ ಪ್ರದೇಶದ ಹಲವು ರಾಜಕೀಯ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಇದನ್ನೂ ಓದಿ: Explainer | ದೇಶದ್ರೋಹ: ಕಾನೂನಿನ ವ್ಯಾಖ್ಯಾನ

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಮೌರ್ಯ ಪ್ರತಿಕ್ರಿಯಿಸಿದ್ದು, ಶಫಿಕುರ್‌ ಅವರ ಹೇಳಿಕೆಯನ್ನು ಕೇಳಿಲ್ಲ. ಆದರೆ, 'ಇಂಥ ಹೇಳಿಕೆಯನ್ನು ನೀಡಿರುವುದಾದರೆ, ಅವರಿಗೂ ಮತ್ತು ಇಮ್ರಾನ್‌ ಖಾನ್‌ಗೂ ಯಾವುದೇ ವ್ಯತ್ಯಾಸವಿರುವುದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಫ್ಗನ್ ಮುಂದಿನ ನಡೆ: ಜಿ7 ಶೃಂಗಸಭೆಯಲ್ಲಿ ಚರ್ಚಿಸಲು ಬೈಡನ್–ಬೋರಿಸ್ ಸಮ್ಮತಿ

ಕಾಬೂಲ್‌ನಲ್ಲಿ ತಾಲಿಬಾನಿಗಳು ಅಧಿಕಾರ ಸ್ಥಾಪಿಸುತ್ತಿದ್ದಂತೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ 'ಅಫ್ಗಾನಿಸ್ತಾನವು ದಾಸ್ಯದ ಸಂಕೋಲೆಯನ್ನು ಬಿಡಿಸಿಕೊಂಡಿದೆ' ಎಂದು ತಾಲಿಬಾನ್‌ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು