ಶನಿವಾರ, ಮೇ 15, 2021
24 °C
ದಕ್ಷಿಣ ತಮಿಳುನಾಡಿನ ಕೆಲವು ಸಮುದಾಯಗಳ ಧ್ರುವೀಕರಣ: ಡಿಎಂಕೆಗೆ ಅನುಕೂಲವಾಗುವ ಸಾಧ್ಯತೆ

ದಕ್ಷಿಣ ತಮಿಳುನಾಡು: ಎಐಎಡಿಎಂಕೆಗೆ ಜಾತಿ ಧ್ರುವೀಕರಣದ ಏಟು

ಇ.ಟಿ.ಬಿ. ಶಿವಪ್ರಿಯನ್ Updated:

ಅಕ್ಷರ ಗಾತ್ರ : | |

Prajavani

ಮದುರೈ: ಕೆಲವು ಸಮುದಾಯಗಳ ವಿಶೇಷವಾಗಿ ಮುಕುಲತ್ತೂರು ಸಮುದಾಯದ ಮತಗಳು ಕ್ರೋಡೀಕರಣಗೊಳ್ಳುತ್ತಿರುವುದು, ಆಡಳಿತಾರೂಢ ಎಐಎಡಿಎಂಕೆಗೆ ತಮಿಳುನಾಡಿನ ದಕ್ಷಿಣ ಭಾಗದ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ದೀರ್ಘಕಾಲದಿಂದ ಎಐಎಡಿಎಂಕೆಗೆ ಬೆಂಬಲವಾಗಿ ನಿಂತಿದ್ದ ಮುಕುಲತ್ತೂರು ಸಮುದಾಯದ ಮತಗಳು ಪಕ್ಷದಿಂದ ಚದುರಿ ಹೋಗುತ್ತಿರುವುದು 2019ರ ಲೋಕಸಭಾ ಚುನಾವಣೆ ಹಾಗೂ ಆ ನಂತರ ನಡೆದ ಉಪಚುನಾವಣೆಗಳಲ್ಲಿ ಪಕ್ಷದ ಅನುಭವಕ್ಕೆ ಬಂದಿದೆ. ಈ ಮತಗಳು ವಿ.ಕೆ. ಶಶಿಕಲಾ ಅವರ ಸೋದರಳಿಯ ಟಿ.ಟಿ.ವಿ. ದಿನಕರನ್‌ ನೇತೃತ್ವದ ಎಎಂಎಂಕೆ ಪಕ್ಷದತ್ತ ವಾಲುತ್ತಿವೆ.

ಎಎಂಎಂಕೆಯು ಈ ಬಾರಿ ನಟ ವಿಜಯಕಾಂತ್‌ ನೇತೃತ್ವದ ಡಿಎಂಡಿಕೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ಪಕ್ಷವು ಪ್ರಭಾವ ಹೆಚ್ಚಿಸಿಕೊಂಡಿರುವುದರಿಂದ, ದಕ್ಷಿಣದ 10 ಜಿಲ್ಲೆಗಳ 58  ಕ್ಷೇತ್ರಗಳಲ್ಲಿ ಎಐಎಡಿಎಂಕೆ– ಬಿಜೆಪಿ ಮೈತ್ರಿ ಅಭ್ಯರ್ಥಿಗಳಿಗೆ ಮುಳುವಾಗಿ, ಇದರ ಲಾಭವು ಡಿಎಂಕೆ– ಕಾಂಗ್ರೆಸ್‌ ಮೈತ್ರಿಗೆ ಆಗುವ ಸಾಧ್ಯತೆ ಇದೆ.

ದಿನಕರನ್‌ ಮತ್ತು ಎಐಎಡಿಎಂಕೆ:

ಕೆಲವು ಸಮುದಾಯದ ಮತಗಳು ಎಐಎಡಿಎಂಕೆಯ ಕೈಜಾರಲು ದಿನಕರನ್‌ ಪ್ರಭಾವವೊಂದೇ ಕಾರಣವಲ್ಲ. ಶಶಿಕಲಾ ಅವರನ್ನು ಮೂಲೆಗುಂಪು ಮಾಡಿದ್ದು, ಶೇ 20ರಷ್ಟು ಎಂಬಿಸಿ ಮೀಸಲಾತಿಯಲ್ಲಿ ಶೇ 10.5ರಷ್ಟನ್ನು ಪ್ರಭಾವಿ ಸಮುದಾಯವಾದ ವಣ್ಣಿಯಾರ್‌ ಸಮುದಾಯಕ್ಕೆ ನೀಡಲು ತೀರ್ಮಾನಿಸಿದ್ದು, ಪರಿಶಿಷ್ಟ ಜಾತಿಯ ಪಲ್ಲಾರ್ ಸೇರಿದಂತೆ ಏಳು ಉಪಜಾತಿಗಳನ್ನು ‘ದೇವೇಂದ್ರಕುಲ ವೆಲ್ಲಾಲರ್’ ಅಡಿ ಸೇರಿಸಿದ ಕೇಂದ್ರದ ನಿರ್ಧಾರಗಳೂ ಎಐಎಡಿಎಂಕೆಯ ಗೆಲುವಿಗೆ ತಡೆಯೊಡ್ಡುವ ಸಾಧ್ಯತೆ ಇದೆ.

ಇನ್ನೊಂದೆಡೆ, 2019ರಲ್ಲಿ ತನಗೆ ಲಭಿಸಿದ ಮತಗಳನ್ನು ಭದ್ರವಾಗಿರಿಸಲು ಡಿಎಂಕೆ ಸರ್ವ ಪ್ರಯತ್ನಗಳನ್ನು ಮಾಡುತ್ತಿದೆ. ತೂತ್ತುಕುಡಿಯಲ್ಲಿ ನಡೆಸಿದ್ದ ಸ್ಟರ್‌ಲೈಟ್‌ ಸಂಸ್ಥೆ ವಿರುದ್ಧದ ಹೋರಾಟವು ಈ ವಿಚಾರದಲ್ಲಿ ಪಕ್ಷಕ್ಕೆ ಲಾಭವಾಗಿ ಪರಿಣಮಿಸಬಹುದು. ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್‌, ಎಡಪಕ್ಷಗಳು ಹಾಗೂ ಎಂಡಿಎಂಕೆಯ ಪಾರಂಪರಿಕ ಮತಗಳು ತಮ್ಮನ್ನು ಗೆಲ್ಲಿಸಬಲ್ಲವು ಎಂಬ ನಿರೀಕ್ಷೆಯೂ ಡಿಎಂಕೆ ನಾಯಕರಿಗಿದೆ.

ಆದರೆ, ಏಳು ಉಪ ಜಾತಿಗಳನ್ನು ದೇವೇಂದ್ರಕುಲ ವೆಲ್ಲಾಲರ್‌ ಗುಂಪಿನಡಿ ತಂದಿರುವುದರಿಂದ ಮುಕುಲತ್ತೂರ್‌, ಪಿಳ್ಳೆ, ಶೈವ ವೆಲಲಾರ್‌ ಮುಂತಾದ ಪ್ರಭಾವಿ ಸಮುದಾಯಗಳ ಮತಗಳು ನಮ್ಮತ್ತ ಬರಲಿವೆ ಎಂದು ಎಐಎಡಿಎಂಕೆ ಲೆಕ್ಕಾಚಾರ ಹಾಕಿದೆ.

ದಕ್ಷಿಣದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಕಳೆದಬಾರಿ ಎಎಂಎಂಕೆ ಪಕ್ಷವು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿತ್ತು. ಇದು ಮುಕುಲತ್ತೂರು ಸಮುದಾಯದ ಮತಗಳು ಧ್ರುವೀಕರಣಗೊಂಡಿರುವುದರ ಸೂಚನೆಯಾಗಿದೆ. ಶಶಿಕಲಾ ಅವರು ಇದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲ, 2019ರಲ್ಲಿ ನಡೆದ ಉಪಚುನಾವಣೆಯಲ್ಲೂ ಈ ಸಮುದಾಯದ ಮತಗಳು ಎಐಎಡಿಎಂಕೆಯ ಸೋಲಿಗೆ ಕಾರಣವಾಗಿದ್ದವು.

ವಣ್ಣಿಯಾರ್‌ ಸಮುದಾಯಕ್ಕೆ ಶೇ 10.5ರಷ್ಟು ಮೀಸಲಾತಿ ನೀಡಿದ್ದಕ್ಕಾಗಿ ಮುಕುಲತ್ತೂರು ಸಮುದಾಯದ ಉಪ ಪಂಗಡ ಪಿರಮಲೈ ಕಲ್ಲಾರ್‌ನ ಮತದಾರರು ಎಐಎಡಿಎಂಕೆ ಜತೆಗೆ ಮುನಿಸಿಕೊಂಡಿದ್ದಾರೆ. ಈ ಕ್ರಮದಿಂದ ಎಂಬಿಸಿ ಕೋಟಾದ ಅಡಿ ತಮಗೆ ಲಭಿಸುತ್ತಿದ್ದ ಸೌಲಭ್ಯಗಳಲ್ಲಿ ಒಂದು ಭಾಗವನ್ನು ಈ ಸಮುದಾಯ ಕಸಿದುಕೊಳ್ಳಲಿದೆ ಎಂಬುದು ಅವರ ವಾದ. ಉಪಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಅವರು ಪ್ರತಿನಿಧಿಸುವ ಬೋದಿನಾಯಕನೂರು ಸೇರಿದಂತೆ ಕನಿಷ್ಠ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಿರಮಲೈ ಕಲ್ಲಾರ್ ಸಮುದಾ
ಯದ ಮತಗಳು ನಿರ್ಣಾಯಕವಾಗಿವೆ.

‘ಭಿನ್ನಾಭಿಪ್ರಾಯಗಳ ಹೊರತಾಗಿಯೂ ಮುಕುಲತ್ತೂರು ಸಮುದಾಯವು ಎಂಜಿಆರ್‌ ಕಾಲದಿಂದ ಇತ್ತೀಚಿನವರೆಗೆ ಎಐಎಡಿಎಂಕೆಗೆ ಬೆಂಬಲವಾಗಿ ನಿಂತಿತ್ತು. ಶಶಿಕಲಾ ಅವರನ್ನು ಮೂಲೆಗುಂಪು ಮಾಡಿದ್ದು ಮತ್ತು ಎಎಂಎಂಕೆ ಪ್ರವೇಶದಿಂದ ಎಐಎಡಿಎಂಕೆಯ ಚಿಂತೆಯನ್ನು ಈ ಸಮುದಾಯವು ಹೆಚ್ಚಿಸಿದೆ’ ಎಂದು ರಾಜಕೀಯ ವಿಶ್ಲೇಷಕ ಪಿ. ರಾಮಜಯಂ ವಿಶ್ಲೇಷಿಸಿದ್ದಾರೆ.

ಹಿಂದುಳಿದ ಜಿಲ್ಲೆಗಳಾದ ಶಿವಗಂಗಾ ಮತ್ತು ರಾಮನಾಥಪುರಂನಲ್ಲಿ ಈ ಬಾರಿ ಕುಡಿಯುವ ನೀರು, ನೀರಾವರಿ ಹಾಗೂ ಸೌಲಭ್ಯಗಳ ಕೊರತೆಯೇ ಚುನಾವಣೆಯ ಮುಖ್ಯ ವಿಷಯಗಳಾಗಿವೆ. ಆಡಳಿತದಲ್ಲಿ ಬದಲಾವಣೆ ಆಗಲೇಬೇಕು ಎಂದು ಇಲ್ಲಿನ ಜನರು ಈಗ ವಾದಿಸುತ್ತಿದ್ದಾರೆ.

ಮುಸ್ಲಿಂ ಮತಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನಗಳನ್ನು ಎಎಂಎಂಕೆ ಮಾಡುತ್ತಿದ್ದರೂ, ತೂತ್ತುಕುಡಿ, ತಿರುನಲ್ವೇಲಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳ ಅಲ್ಪಸಂಖ್ಯಾತ ಮತಗಳು ಡಿಎಂಕೆ– ಕಾಂಗ್ರೆಸ್‌ ಮೈತ್ರಿಕೂಟದ ಪಾಲಾಗುವ ಸಾಧ್ಯತೆ ಹೆಚ್ಚಿದೆ. ನಗರ ಪ್ರದೇಶದ ಯುವಕರ ಮತಗಳನ್ನು ಮಕ್ಕಳ್‌ ನೀಧಿ ಮಯ್ಯಂ ಸೆಳೆಯಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಯುವಕರ ಮತಗಳನ್ನು ನಾಮ್‌ ತಮಿಳರ್‌ ಕಚ್ಚಿ (ಎನ್‌ಟಿಕೆ) ಸೆಳೆಯುವ ನಿರೀಕ್ಷೆ ಇದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು