ಸೋಮವಾರ, ಜೂನ್ 27, 2022
21 °C
ಈ ವರ್ಷದ ಜನವರಿಯಲ್ಲಿ ಬೆಕ್ಕಿನ ದಾಳಿಗೆ ಒಳಗಾದವರ ಸಂಖ್ಯೆ 28,168

ಕೇರಳದಲ್ಲಿ ನಾಯಿಗಳಿಗಿಂತ ಬೆಕ್ಕುಗಳಿಂದ ಕಚ್ಚಿಸಿಕೊಂಡವರೇ ಹೆಚ್ಚು !

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ನಾಯಿಗಳ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಕೇಳಿರುತ್ತೀರಿ. ಆದರೆ, ಬೆಕ್ಕುಗಳ ದಾಳಿಯಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಕೇಳಿದ್ದೀರಾ?

ನಾಯಿಗಳಿಗಿಂತ ಬೆಕ್ಕುಗಳು ಕಚ್ಚಿದ ಕಾರಣ ಹೆಚ್ಚು ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವಂತಹ ಅಪರೂಪದ ಸಂಗತಿಯೊಂದು ಈಗ ಕೇರಳದಲ್ಲಿ ಬೆಳಕಿಗೆ ಬಂದಿದೆ. ಜನವರಿ ತಿಂಗಳಲ್ಲಿ ಕೇರಳದಲ್ಲಿ ಬೆಕ್ಕುಗಳ ದಾಳಿಗೆ ಒಳಗಾದವರ ಸಂಖ್ಯೆ 28,186. ನಾಯಿಗಳಿಂದ ಕಚ್ಚಿಸಿಕೊಂಡವರ ಸಂಖ್ಯೆ 20,875.

ಅಚ್ಚರಿ ಎನ್ನಿಸುತ್ತಿದೆ ಅಲ್ಲವಾ? ಆದರೂ ಇದು ನಿಜ. ಏಕೆಂದರೆ, ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ರಾಜ್ಯ ಆರೋಗ್ಯ ಇಲಾಖೆ ನೀಡಿರುವ ದಾಖಲೆಗಳಲ್ಲಿ ಈ ಅಂಕಿ ಅಂಶಗಳಿವೆ.

ರಾಜ್ಯ ಮಟ್ಟದ ಪ್ರಾಣಿ ಸಂರಕ್ಷಣಾ ಸಂಸ್ಥೆ ಅನಿಮಲ್ ಲೀಗಲ್ ಫೋರ್ಸ್‌ ಸಲ್ಲಿಸಿದ ಆರ್‌ಟಿಐ ಪ್ರತಿಯಾಗಿ ರಾಜ್ಯ ಆರೋಗ್ಯ ಇಲಾಖೆ ಈ ಅಂಕಿ ಅಂಶಗಳನ್ನೊಳಗೊಂಡ ಮಾಹಿತಿಯನ್ನು ನೀಡಿದೆ.

2013ರಿಂದ 2021ರವರೆಗೆ ನಾಯಿಗಳು ಮತ್ತು ಬೆಕ್ಕುಗಳ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆದಿರುವರ ಅಂಕಿ ಅಂಶಗಳು ಮತ್ತು ಆ್ಯಂಟಿ ರೇಬಿಸ್ ಲಸಿಕೆ ಮತ್ತು ಸೆರಂಗಾಗಿ ಖರ್ಚು ಮಾಡಿರುವ ಹಣದ ಬಗ್ಗೆಯೂ ದಾಖಲೆಗಳ ಜತೆಗೆ ನೀಡಿದೆ. ಅದನ್ನು ಅನಿಮಲ್ ಲೀಗಲ್ ಫೋರ್ಸ್‌ ಸಂಸ್ಥೆ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.

ಅಂಕಿ ಅಂಶಗಳ ಪ್ರಕಾರ, 2016ರಿಂದಲೂ ಬೆಕ್ಕುಗಳ ದಾಳಿಗೆ ಒಳಗಾಗುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. 2016ರಲ್ಲಿ ಬೆಕ್ಕಿನ ದಾಳಿಗೆ ಒಳಗಾದ 1,60,534 ಮಂದಿ ಚಿಕಿತ್ಸೆ ಪಡೆದಿದ್ದರೆ, ಅದೇ ರೀತಿ 1,35,217 ಮಂದಿ ನಾಯಿಗಳ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ.

2017ರಲ್ಲಿ 1.60 ಲಕ್ಷ ಜನರು ಬೆಕ್ಕಿನ ದಾಳಿಗೆ ಒಳಗಾಗಿದ್ದಾರೆ. 2018ರಲ್ಲಿ ಈ ಸಂಖ್ಯೆ 1.75 ಲಕ್ಷ ದಾಟಿದೆ. 2019 ಮತ್ತು 2020ರಲ್ಲಿ ಕ್ರಮವಾಗಿ 2.04 ಲಕ್ಷ ಮತ್ತು 2.16 ಲಕ್ಷಕ್ಕೆ ಏರಿಕೆಯಾಗಿದೆ. 2014ರಿಂದ 2020ರವರೆಗೆ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಬೆಕ್ಕುಗಳ ದಾಳಿಗೊಳಾದವರ ಪ್ರಮಾಣಶೇ 128 ರಷ್ಟು ಹೆಚ್ಚಾಗಿದೆ.

ನಾಯಿಗಳಿಗೆ ಹೋಲಿಸಿದರೆ ಬೆಕ್ಕುಗಳು ಮಾನವನ ಮೇಲೆ ಸಾಮಾನ್ಯವಾಗಿ ದಾಳಿ ನಡೆಸುವುದಿಲ್ಲ. ಆದರೆ ಅದು ಹಲ್ಲು ಅಥವಾ ಉಗುರಿನಿಂದ ಉದ್ದೇಶಪೂರ್ವಕವಾಗಿ ಅಲ್ಲದೆಯೂ ಗೀರಿದರೆ ಸಾಕು. ಇದೇ ಕಾರಣಕ್ಕೆ ಜನರು ಚಿಕಿತ್ಸೆ ಪಡೆಯುತ್ತಾರೆ. ಬೆಕ್ಕು ಈ ರೀತಿ ಗೀರುವುದೇ ’ಕಚ್ಚುವುದು‘ ಎಂದು ವೈದ್ಯಕೀಯ ದತ್ತಾಂಶಗಳಲ್ಲಿ ದಾಖಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು