ಗುರುವಾರ , ಮಾರ್ಚ್ 4, 2021
23 °C
ನದಿಗಳ ಜೋಡಣೆಗೆ ಕೇಂದ್ರ ಸರ್ಕಾರದ ನೆರವು...

ಕಾವೇರಿ: ತಮಿಳುನಾಡು ವಿರುದ್ಧ ಚಕಾರವೆತ್ತದ ರಾಜ್ಯ!

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾವೇರಿ ಕಣಿವೆಯಲ್ಲಿನ ಹೆಚ್ಚುವರಿ ನೀರನ್ನು ಬರಪೀಡಿತ ಜಿಲ್ಲೆಗಳ ಜನರ ದಾಹ ನೀಗಿಸಲು ಬಳಸಬೇಕೆಂಬ ರಾಜ್ಯದ ಸದುದ್ದೇಶಕ್ಕೆ ಸದಾ ಆಕ್ಷೇಪಣೆ ಸಲ್ಲಿಸುವ ತಮಿಳುನಾಡು, ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಬಳಕೆಯ ‘ಬೃಹತ್‌ ಯೋಜನೆ’ಗೆ ಭಾನುವಾರ ಸದ್ದಿಲ್ಲದೇ ಚಾಲನೆ ನೀಡುತ್ತಿದೆ.

ವ್ಯರ್ಥವಾಗಿ ಸಮುದ್ರ ಸೇರುವ ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಕರ್ನಾಟಕದ ಪ್ರಸ್ತಾವಿತ ಯೋಜನೆಗಳಿಗೆ ನೆರೆಯ ರಾಜ್ಯ ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆಯಿಂದ ತಡೆ ಬೀಳುವ ಸಾಧ್ಯತೆ ಇದ್ದರೂ, ರಾಜ್ಯ ಸರ್ಕಾರ ಇದುವರೆಗೂ ಚಕಾರ ಎತ್ತಿಲ್ಲ.

ವಿಧಾನಸಭೆ ಚುನಾವಣೆಗೆ ಸನ್ನದ್ಧವಾಗಿರುವ ತಮಿಳುನಾಡಿನಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಳ್ಳುವ ಉದ್ದೇಶದೊಂದಿಗೆ ‘ನದಿ ಜೋಡಣೆ’ ಯೋಜನೆಗೆ ಆರ್ಥಿಕ ನೆರವು ಒದಗಿಸಿರುವ ಕೇಂದ್ರದ ಬಿಜೆಪಿ ಸರ್ಕಾರದ ನಡೆಯು ರಾಜ್ಯದ ಹಿತಾಸಕ್ತಿಗೆ ಮಾರಕವಾಗಲಿದ್ದರೂ, ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸದಿರುವುದು ಆಶ್ಚರ್ಯ ಮೂಡಿಸಿದೆ.

ರಾಜ್ಯದ ವಿರುದ್ಧ ಕ್ಯಾತೆ: ಕರ್ನಾಟಕ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ನಾಲ್ಕೂ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ 2018ರ ಫೆಬ್ರುವರಿ 16ರಂದು ಸುಪ್ರೀಂ ಕೋರ್ಟ್‌ ತೀರ್ಪನ್ನು ನೀಡಿದೆ. ಕಾವೇರಿಯ ಹೆಚ್ಚುವರಿ ನೀರು ಬಳಸಿ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ರಾಜ್ಯ ಸರ್ಕಾರ ರೂಪಿಸಿರುವ ‘ಮೇಕೆದಾಟು’ ಮತ್ತು ‘ಮಾರ್ಕಂಡೇಯ’ ಯೋಜನೆಗಳಿಗೂ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸಿದೆ.

ಅಪಾಯದ ಕರೆಗಂಟೆ: ಕಾವೇರಿಯ ಹೆಚ್ಚುವರಿ ನೀರಿನ ಮೇಲೆ ಕಣ್ಣಿಟ್ಟಿರುವ ತಮಿಳುನಾಡು, ಈ ಯೋಜನೆ ಕೈಗೆತ್ತಿಕೊಂಡ ನಂತರ ಕರ್ನಾಟಕದ ಯೋಜನೆಗಳಿಗೆ ನೀರು ಒದಗಿಸದಂತೆ ನ್ಯಾಯಾಲಯದಲ್ಲಿ ವಾದಿಸಲಿದೆ.

‘ಇದರಿಂದ ನದಿ ಕಣಿವೆಯ ಮೇಲ್ಭಾಗದ ರಾಜ್ಯವಾದ ಕರ್ನಾಟಕದ ಪ್ರಸ್ತಾವಿತ ಯೋಜನೆಗಳಿಗೆ ತಡೆ ಬೀಳುವ ಅಪಾಯ ಇದೆ’ ಎಂದು ರಾಜ್ಯದ ಜಲವಿವಾದ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಸಭೆ; ಚರ್ಚೆ ಸಾಧ್ಯತೆ: ನವದೆಹಲಿಯ ಕರ್ನಾಟಕ ಭವನದಲ್ಲಿ ಭಾನುವಾರ ರಾಜ್ಯದ ಜಲವಿವಾದ ಕಾನೂನು ತಂಡದ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳ ಸಭೆ ಆಯೋಜಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ತಮಿಳುನಾಡು ಆರಂಭಿಸಲಿರುವ ಯೋಜನೆಯ ಸಾಧಕ–ಬಾಧಕಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ರಾಜ್ಯದ ಜಲವಿವಾದ ಪ್ರಕರಣಗಳ ಕುರಿತೂ ಈ ಸಂದರ್ಭ ಚರ್ಚೆ ನಡೆಯಲಿದೆ. ಸೋಮವಾರ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್ ಅವರನ್ನು ಭೇಟಿ ಮಾಡಲಿರುವ ಜಾರಕಿಹೊಳಿ, ತಮಿಳುನಾಡಿನ ಯೋಜನೆಯ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಮಿಳುನಾಡು ರೂಪಿಸಿರುವ ಯೋಜನೆ
ಕೇಂದ್ರದ ಆರ್ಥಿಕ ನೆರವಿನೊಂದಿಗೆ ₹ 6,941 ಕೋಟಿ ವೆಚ್ಚದಲ್ಲಿ ವೆಲ್ಲಾರು– ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿಯೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಭಾನುವಾರ ವಿರಾಳಿಮಲೈ– ಕುಣ್ಣತ್ತೂರ್ ಬಳಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕರೂರ್‌ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಮಾಯನೂರ್‌ ಜಲಾಶಯದಿಂದ ಕಾವೇರಿಯ ಹೆಚ್ಚುವರಿ ನೀರನ್ನು ತಿರುಚ್ಚಿ, ಪುದುಕೋಟೆ, ಶಿವಗಂಗೈ ಹಾಗೂ ವಿರುಧುನಗರ ಜಿಲ್ಲೆಗಳ ಜನತೆಗೆ ಒದಗಿಸಲು, 118.45 ಕಿಲೋಮೀಟರ್‌ ಉದ್ದದ ಬೃಹತ್‌ ಕಾಲುವೆ ನಿರ್ಮಿಸಿ ಗುಂಡಾರು ನದಿಗೆ ಜೋಡಿಸುವುದು ಈ ಯೋಜನೆಯ ಮೊದಲ ಹಂತವಾಗಿದೆ. ಈ ಭಾಗದ ಒಟ್ಟು 342 ಕೆರೆಗಳನ್ನು ಭರ್ತಿ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವುದಲ್ಲದೆ, 42,170 ಎಕರೆ ಭೂಮಿಗೆ ನೀರಾವರಿ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ.

ಯೋಜನೆಯ 2ನೇ ಹಂತದಲ್ಲಿ ದಕ್ಷಿಣ ವೆಲ್ಲಾರು ನದಿಯಿಂದ ವೈಗೈ ನದಿವರೆಗೆ 109 ಕಿಲೋಮೀಟರ್‌ ಉದ್ದದ ಕಾಲುವೆ ನಿರ್ಮಿಸಿ ಪುದುಕೋಟೆ, ಶಿವಗಂಗೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿನ 220 ಕೆರೆಗಳ ಭರ್ತಿ ಮತ್ತು 23,245 ಎಕರೆ ಭೂಮಿಗೆ ನೀರಾವರಿ ಒದಗಿಸಲಾಗುತ್ತದೆ.

ವೈಗೈ ನದಿಯಿಂದ ಗುಂಡಾರು ನದಿಗೆ 34 ಕಿಲೋಮೀಟರ್‌ ಅಂತರದ ಕಾಲುವೆ ನಿರ್ಮಿಸಿ ವಿರುಧುನಗರ ಮತ್ತು ರಾಮನಾಥಪುರಂ ಜಿಲ್ಲೆಗಳಿಗೆ ನೀರು ಹರಿಸುವ ಮೂಲಕ 492 ಕೆರೆಗಳ ಭರ್ತಿ ಹಾಗೂ 44,547 ಎಕರೆ ಭೂಮಿಗೆ ನೀರಾವರಿ ಒದಗಿಸುವುದು ಯೋಜನೆಯ 3ನೇ ಹಂತದ ಉದ್ದೇಶವಾಗಿದೆ.

ಅಲ್ಲದೆ, ನೀರಾವರಿ ಪ್ರದೇಶ ವಿಸ್ತರಣೆ ಉದ್ದೇಶದೊಂದಿಗೆ ಅಂದಾಜು ₹ 3,400 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಾಲುವೆಗಳನ್ನೂ ಪಳನಿಸ್ವಾಮಿ ಉದ್ಘಾಟಿಸಲಿದ್ದಾರೆ.

ಪ್ರಧಾನಿಯಿಂದಲೂ ಚಾಲನೆ: ಕೇಂದ್ರ ಸರ್ಕಾರದ ಆರ್ಥಿಕ ನೆರವಿನ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ ಮೊದಲ ವಾರ ಮತ್ತೊಮ್ಮೆ ಚಾಲನೆ ನೀಡಲಿದ್ದಾರೆ.

ಪ್ರಧಾನಿಯವರು ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲೇ ಈ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ರದ್ದಾಗಿದೆ.

ರಾಜ್ಯಕ್ಕೆ ಮಾರಕವಾಗಲಿರುವ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದ್ದರೂ ಆಕ್ಷೇಪಣೆ ಸಲ್ಲಿಸಲು ಹಾಗೂ ಕಾನೂನು ಹೋರಾಟ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಆರೋಪವೂ ಕೇಳಿಬರುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು