ಮಂಗಳವಾರ, ಸೆಪ್ಟೆಂಬರ್ 21, 2021
26 °C

ಕಲ್ಲಿದ್ದಲು ಕಳವು: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ನಿವಾಸಕ್ಕೆ ಸಿಬಿಐ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತಾ: ಕಲ್ಲಿದ್ದಲು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ರುಜೀರಾ ಬ್ಯಾನರ್ಜಿ ಅವರ ವಿಚಾರಣೆಗಾಗಿ  ಸಿಬಿಐ ಅಧಿಕಾರಿಗಳು ಮಂಗಳವಾರ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸಕ್ಕೆ ಭೇಟಿ ನೀಡಿದರು.

ರುಜಿರಾ ಬ್ಯಾನರ್ಜಿ, ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ರುಜಿರಾ ಅವರಿಗೆ ಸಿಬಿಐ ಭಾನುವಾರ ನೋಟಿಸ್ ಜಾರಿ ಮಾಡಿತ್ತು.

ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ರುಜಿರಾ ಅವರು, ಮನೆಯಲ್ಲೇ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದು. ಮಂಗಳವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ನಡುವೆ ಮನೆಯಲ್ಲಿ ತಾವು ವಿಚಾರಣೆಗೆ ಲಭ್ಯವಿರುವುದಾಗಿಯೂ ತಿಳಿಸಿದ್ದರು. ರುಜಿರಾ ಅವರ ಮನವಿ ಪುರಸ್ಕರಿಸಿದ ತಂಡ, ಇಂದು (ಮಂಗಳವಾರ) ಅವರ ಮನೆಗೆ ಭೇಟಿ ನೀಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ರುಜಿರಾ ಅವರನ್ನು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು, ಈ ಪ್ರಕರಣದಲ್ಲಿ ಅಕ್ರಮ ವ್ಯವಹಾರ ನಡೆದಿರುವ ಶಂಕೆಯ ಮೇರೆಗೆ, ಅವರ ಬ್ಯಾಂಕ್ ವಹಿವಾಟಿನ ವಿವರಗಳನ್ನು ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ, ಸಿಬಿಐನ ಇಬ್ಬರು ಮಹಿಳಾ ಅಧಿಕಾರಿಗಳು ರುಜಿರಾ ಅವರ  ಸಹೋದರಿ ಮೇನಕಾ ಗಂಭೀರ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ತಿಂಗಳುಗಳು ಬಾಕಿ ಇರುವಂತೆ  ಈ ಬೆಳವಣಿಗೆಗಳು ನಡೆದಿದೆ. ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಈ ಬೆಳವಣಿಗೆಗಳನ್ನು ‘ರಾಜಕೀಯ ಹಗೆತನ‘ ಎಂದು ಆರೋಪಿಸಿದೆ.

ಅಕ್ರಮ ಕಲ್ಲಿದ್ದಲು ಮಾರಾಟಕ್ಕೆ ಸಂಬಂಧಿಸಿದಂತೆ, ಹಗರಣದ ಕಿಂಗ್‌ಪಿನ್‌ ಅನುಪ್‌ ಮಜ್ಹಿ ಅಲಿಯಾಸ್ ಲಾಲಾ ವಿರುದ್ಧ ಸಿಬಿಐ ಮೊಕದ್ದಮೆ ದಾಖಲಿಸಿದ ನಂತರ, ಕಳೆದ ವರ್ಷ ನ.28ರಂದು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ  ರಾಜ್ಯಗಳ ಹಲವು ಕಡೆಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿತ್ತು.

ಲಾಲಾ,  ಕುನುಸ್ಟೋರಿಯಾ ಮತ್ತು ಕಜೋರಾ ಪ್ರದೇಶಗಳಲ್ಲಿನ ಇಸಿಎಲ್‌ ಗುತ್ತಿಗೆ ಗಣಿ ಪ್ರದೇಶಗಳಿಂದ ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನದಲ್ಲಿ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು