ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಆಸ್ತಿ ಹೊಂದಿದ ಆರೋಪ: ಸಿಬಿಐ ವಿಚಾರಣೆ ಎದುರಿಸಿದ ಡಿ.ಕೆ. ಶಿವಕುಮಾರ್‌

Last Updated 25 ನವೆಂಬರ್ 2020, 21:32 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವರಾಗಿದ್ದ ಅವಧಿಯಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬುಧವಾರ ಕೆಲಕಾಲ ವಿಚಾರಣೆ ನಡೆಸಿದರು.

ಶಿವಕುಮಾರ್‌ 2013ರ ಏಪ್ರಿಲ್‌ 1ರಿಂದ 2018ರ ಏಪ್ರಿಲ್‌ 30ರ ಅವಧಿಯಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಮೇಲೆ 2020ರ ಮಾರ್ಚ್‌ನಲ್ಲಿ ಸಿಬಿಐ ಪ್ರಾಥಮಿಕ ವಿಚಾರಣೆ ಆರಂಭಿಸಿತ್ತು. ₹ 74.93 ಕೋಟಿ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಅಕ್ಟೋಬರ್‌ 3ರಂದು ಎಫ್‌ಐಆರ್‌ ದಾಖಲಿಸಿತ್ತು. ಅ.5ರಂದು ಹಲವೆಡೆ ದಾಳಿ ಮಾಡಿ, ಶೋಧ ನಡೆಸಿತ್ತು.

ನವೆಂಬರ್‌ 23ರಂದು ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿದ್ದರು. ಎರಡು ದಿನ ಕಾಲಾವಕಾಶ ಪಡೆದಿದ್ದ ಅವರು, ಬುಧವಾರ ಮಧ್ಯಾಹ್ನ ಗಂಗಾನಗರದ ಸಿಬಿಐ ಕಚೇರಿಗೆ ಹಾಜರಾದರು. ಪ್ರಕರಣದ ತನಿಖಾಧಿಕಾರಿಯಾಗಿರುವ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಎಸ್‌ಪಿ ವೈ. ಹರಿಕುಮಾರ್‌ ನೇತೃತ್ವದ ತಂಡ ಕೆಲವು ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿತು.

ಅಕ್ರಮ ಆಸ್ತಿ ಹೊಂದಿರುವುದು, ಕೆಲವು ವ್ಯಕ್ತಿಗಳು ಮತ್ತು ಕಂಪನಿಗಳ ಜತೆ ಸಂಶಯಾಸ್ಪದ ರೀತಿಯಲ್ಲಿ ಹಣದ ವಹಿವಾಟು ನಡೆಸಿರುವುದು, ಆದಾಯ ತೆರಿಗೆ ದಾಳಿ ವೇಳೆ ಪತ್ತೆಯಾದ ನಗದು ಮೂಲ ತಿಳಿಸದೇ ಇರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಿಬಿಐ ಅಧಿಕಾರಿಗಳು ಶಿವಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎಐಸಿಸಿ ಖಜಾಂಚಿಯಾಗಿದ್ದ ಅಹ್ಮದ್‌ ಪಟೇಲ್‌ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಂಜೆಯೇ ಗುಜರಾತ್‌ನ ವಡೋದರಾಕ್ಕೆ ತೆರಳಬೇಕಿರುವುದರಿಂದ ಬೇಗ ವಿಚಾರಣೆ ಮುಗಿಸುವಂತೆ ಶಿವಕುಮಾರ್‌ ಮಾಡಿದ ಮನವಿಯನ್ನು ಸಿಬಿಐ ಅಧಿಕಾರಿಗಳು ಪುರಸ್ಕರಿಸಿದರು. ಕೆಲವು ದಿನಗಳ ಬಳಿಕ ಶಿವಕುಮಾರ್‌ ಮತ್ತೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT