ಗುರುವಾರ , ಜೂನ್ 24, 2021
28 °C
1,200 ಟನ್‌ ಆಮ್ಲಜನಕ ಪೂರೈಸುವಂತೆ ಹೈಕೋರ್ಟ್‌ ನೀಡಿದ ಆದೇಶದ ವಿರುದ್ಧ ‘ಸುಪ್ರೀಂ’ಗೆ ಅರ್ಜಿ

ಪಾಲು ಹೆಚ್ಚಳ: ಕೇಂದ್ರ ಹಿಂದೇಟು, ಆದೇಶದ ವಿರುದ್ಧ ‘ಸುಪ್ರೀಂ’ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ವೈದ್ಯಕೀಯ ಆಮ್ಲಜನಕವನ್ನು 965 ಟನ್‌ನಿಂದ 1,200 ಟನ್‌ಗೆ ಹೆಚ್ಚಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ನೀಡಿದ ಆದೇಶಕ್ಕೆ ತಕ್ಷಣವೇ ತಡೆ ಕೊಡಬೇಕು ಎಂದು ಸುಪ‍್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ಅರ್ಜಿ ಸಲ್ಲಿಸಿದೆ. ರಾಜ್ಯದ ಆಮ್ಲಜನಕ ಪಾಲನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂಬ ಪರೋಕ್ಷ ಸಂದೇಶವನ್ನು ಈ ಮೂಲಕ ನೀಡಿದೆ.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎಂ.ಆರ್‌. ಶಾ ಅವರ ಪೀಠದ ಮುಂದೆ ಈ ವಿಷಯವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರಸ್ತಾಪಿಸಿದರು. ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ತುರ್ತಾಗಿ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. 

ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಾಗಿ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು. 

ಆದರೆ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ನ್ಯಾಯಾಲಯದ ಮುಂದೆ ಇಲ್ಲ. ಕರ್ನಾಟಕ ಹೈಕೋರ್ಟ್‌ನ ಆದೇಶ
ವನ್ನು ಓದದೇ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಪೀಠದ ಮುಂದೆ ಇರಿಸಲಾಗುವುದು ಎಂದು ಪೀಠವು ಹೇಳಿತು.

ಒಂದು ವಾರದ ಅವಧಿಯಲ್ಲಿ ರಾಜ್ಯದಾದ್ಯಂತ ಹೊಸದಾಗಿ 1.60 ಲಕ್ಷ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲೇ ಆಮ್ಲಜನಕದ ಉತ್ಪಾದನಾ ಘಟಕಗಳಿದ್ದರೂ ಬೇರೆ ರಾಜ್ಯಗಳಿಂದ ತರಿಸಿಕೊಳ್ಳವಂತೆ ಕೇಂದ್ರ ಸೂಚಿಸುತ್ತಿದೆ. ರಾಜ್ಯದ ಪಾಲಿನ ಆಮ್ಲಜನಕ ಹಂಚಿಕೆ ಹೆಚ್ಚಿಸಲು ಕೇಂದ್ರಕ್ಕೆ ಸೂಚಿಸಬೇಕು ಎಂದು ಕರ್ನಾಟಕದ ಅಡ್ವೋಕೆಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದೆದುರು ಬುಧವಾರ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಹೈಕೋರ್ಟ್‌, ಆಮ್ಲಜನಕದ ಪ್ರಮಾಣವನ್ನು 1,200 ಟನ್‌ಗೆ ಹೆಚ್ಚಿಸಲು ಕೇಂದ್ರಕ್ಕೆ ಆದೇಶ ನೀಡಿತ್ತು. 

‘ಪೂರೈಕೆ ಸೂತ್ರ ಪರಿಷ್ಕರಿಸಿ’: ರಾಜ್ಯಗಳಿಗೆ ಆಮ್ಲಜನಕ ಪೂರೈಸಲು ಕೇಂದ್ರ ರೂಪಿಸಿರುವ ಸೂತ್ರವು ಬೇಡಿಕೆಯನ್ನು ಸರಿಯಾಗಿ ಅಂದಾಜು ಮಾಡಿಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡು ಆಮ್ಲಜನಕ ಹಂಚಿಕೆ ಸೂತ್ರ ರೂಪಿಸಲಾಗಿದೆ. ಅದನ್ನು ಮರುಪರಿಶೀಲಿಸಬೇಕು. ನೀವು ಸೂತ್ರ ರೂಪಿಸಿದಾಗ ಐಸಿಯುಗೆ ದಾಖಲಾದ ಎಲ್ಲ ರೋಗಿಗಳಿಗೆ ಆಮ್ಲಜನಕದ ಅಗತ್ಯ ಇರಲಿಲ್ಲ. ಆದರೆ, ಈಗ ಮನೆಯಲ್ಲಿ ಪ್ರತ್ಯೇಕವಾಸದಲ್ಲಿರುವ ರೋಗಿಗಳಿಗೆ ಕೂಡ ಆಮ್ಲಜನಕ ಬೇಕಾಗಿದೆ. ಆಂಬುಲೆನ್ಸ್‌ಗಳು, ಕೋವಿಡ್‌ ಆರೈಕೆ ಕೇಂದ್ರಗಳನ್ನು ಗಣನೆಗೆ ತೆಗೆದುಕೊಳ್ಳದೆಯೇ ಸೂತ್ರ ರೂಪಿಸಲಾಗಿದೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಪೀಠವು ಹೇಳಿದೆ. 

ಆಮ್ಲಜನಕ ವಿತರಣೆ ವ್ಯವಸ್ಥೆಯ ಸಮಗ್ರ ಲೆಕ್ಕಪರಿಶೋಧನೆ ನಡೆಸಬೇಕು. ಇದರಿಂದ ಅಖಿಲ ಭಾರತ ಮಟ್ಟದ ಚಿತ್ರಣ ಸಿಗುತ್ತದೆ. ಜತೆಗೆ, ಆಮ್ಲಜನಕ ಪೂರೈಕೆಗೆ ಉತ್ತರದಾಯಿತ್ವ ನಿಗದಿ ಮಾಡುವುದು ಸಾಧ್ಯವಾಗುತ್ತದೆ ಎಂದು ಕೋರ್ಟ್‌ ಹೇಳಿದೆ. ಆಮ್ಲಜನಕ ಲೆಕ್ಕ ಪರಿಶೋಧನೆಗೆ ಪರಿಣತರ ಸಮಿತಿ ರಚಿಸುವಂತೆಯೂ ಪೀಠವುಸೂಚಿಸಿದೆ. 

‘ಮೂರನೇ ಅಲೆಗೆ ಸಿದ್ಧತೆ ಏನು?’

ಕೋವಿಡ್‌–19 ಸಾಂಕ್ರಾಮಿಕದ ಮೂರನೇ ಅಲೆಯನ್ನು ಎದುರಿಸಲು ತಯಾರಿಸಿರುವ ಯೋಜನೆ ಏನು ಮತ್ತು ಮಾಡಿಕೊಂಡಿರುವ ಸಿದ್ಧತೆ ಏನು ಎಂಬುದನ್ನು ತಿಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ವೈದ್ಯಕೀಯ ಆಮ್ಲಜನಕದ ಮೀಸಲು ಸಂಗ್ರಹ ಇರಿಸಿಕೊಳ್ಳಬೇಕು ಮತ್ತು ಲಸಿಕೆ ನೀಡಿಕೆ ವ್ಯಾಪಕಗೊಳ್ಳಬೇಕು ಎಂದು ಹೇಳಿದೆ. 

‘ಮೂರನೇ ಅಲೆಯು ಹತ್ತಿರದಲ್ಲಿಯೇ ಇದೆ. ಇದು ಮಕ್ಕಳನ್ನೂ ಬಾಧಿಸಲಿದೆ ಎಂದು ತಜ್ಞರು ಹೇಳಿದ್ದಾರೆ. ಹಾಗಿರುವಾಗ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಪೂರೈಕೆ ಹೆಚ್ಚಿಸಲು ಏನು ಸಮಸ್ಯೆ? ಪೂರೈಕೆ ಹೆಚ್ಚಳ ಮಾಡಿದರೆ, ಮೀಸಲು ಸಂಗ್ರಹ ಇರಿಸಿಕೊಂಡರೆ ಕೊನೆಯ ಕ್ಷಣದಲ್ಲಿ ದಿಗಿಲಾಗುವುದು ತಪ್ಪುತ್ತದೆ’ ಎಂದು ಚಂದ್ರಚೂಡ್‌ ನೇತೃತ್ವದ ಪೀಠವು ಹೇಳಿದೆ. 

ಮೂರನೇ ಅಲೆಯನ್ನು ನಿಭಾಯಿಸಲು ವೈಜ್ಞಾನಿಕವಾಗಿ ಸಜ್ಜಾಗಬೇಕು. ಮೂರನೇ ಅಲೆಯು ಸಂಪೂರ್ಣವಾಗಿ ಭಿನ್ನವಾಗಿರುವ ಸಾಧ್ಯತೆ ಇದೆ. ಇದು ಮಕ್ಕಳನ್ನು ಬಾಧಿಸಿದರೆ ಸಮಸ್ಯೆ ಸಂಕೀರ್ಣವಾಗುತ್ತದೆ. ಮಗುವನ್ನು ಆಸ್ಪತ್ರೆಗೆ ಒಯ್ಯುವಾಗ ಜತೆಗೆ ಅಪ್ಪ–ಅಮ್ಮ ಹೋಗುತ್ತಾರೆ. ಅದಕ್ಕಾಗಿಯೇ ಮೂರನೇ ಅಲೆಯ ಹೊತ್ತಿಗೆ ಈ ವರ್ಗಕ್ಕೆ ಲಸಿಕೆ ನೀಡಿರಬೇಕು. ಇದನ್ನು ವೈಜ್ಞಾನಿಕವಾಗಿ ಯೋಜಿಸಬೇಕು. ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಪೀಠ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು