ಗುರುವಾರ , ಮೇ 6, 2021
23 °C

ರಸಗೊಬ್ಬರ ಬೆಲೆ ಹೆಚ್ಚಿಸದಂತೆ ತಾಕೀತು: ಕಂಪನಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಡಿಎಪಿಯಂತಹ ಯೂರಿಯಯೇತರ ರಸಗೊಬ್ಬರದ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಹೆಚ್ಚಿಸಬಾರದು ಎಂದು ಕೇಂದ್ರ ಸರ್ಕಾರವು ರಸಗೊಬ್ಬರ ಕಂಪನಿಗಳಿಗೆ ಶುಕ್ರವಾರ ನಿರ್ದೇಶನ ನೀಡಿದೆ. ರಸಗೊಬ್ಬರವನ್ನು ಹಳೆಯ ಬೆಲೆಗೇ ಮಾರಾಟ ಮಾಡಬೇಕು ಎಂದು ಕೇಂದ್ರವು ಸೂಚಿಸಿದೆ.

ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವಾಗಿ ನಿರ್ದೇಶನವೊಂದನ್ನು ರಸಗೊಬ್ಬರ ಕಂಪನಿಗಳಿಗೆ ನೀಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾದ ಕಾರಣ ದೇಶಿ ಮಾರುಕಟ್ಟೆಯಲ್ಲಿಯೂ ಯೂರಿಯೇತರ ರಸಗೊಬ್ಬರದ ಬೆಲೆ ಜಾಸ್ತಿಯಾಗಿದೆ. ಡಿಎಪಿ, ಎಂಒಪಿ ಹಾಗೂ ಎನ್‌ಪಿಕೆ ರಸಗೊಬ್ಬರದ ಚಿಲ್ಲರೆ ಮಾರಾಟ ದರವು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಿದೆ. ಈ ರಸಗೊಬ್ಬರಗಳ ದರವನ್ನು ಕಂಪನಿಗಳೇ ನಿರ್ಧರಿಸುತ್ತವೆ. ಇವಕ್ಕೆ ಕೇಂದ್ರ ಸರ್ಕಾರವು ನಿಗದಿತ ಮೊತ್ತವನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತದೆ.

‘ಡಿಎಪಿ, ಎಂಒಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳ ದರ ಹೆಚ್ಚಳ ಮಾಡಬಾರದು ಎಂಬ ಸೂಚನೆಯನ್ನು ಕಂಪನಿಗಳು ಒಪ್ಪಿಕೊಂಡಿವೆ’ ಎಂದು ಕೇಂದ್ರರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‌ಸುಖ್‌ ಮಾಂಡವೀಯ ತಿಳಿಸಿದರು. ರೈತರಿಗೆ ಈ ರಸಗೊಬ್ಬರಗಳು ಹಳೆಯ ದರಕ್ಕೆ ಸಿಗಲಿವೆ ಎಂದರು.

ಡಿಎಪಿಯ ಹೊಸ ಚೀಲದ ಮೇಲೆ ‘₹ 1,700’ ಎಂದು ಮುದ್ರಿಸಿರುವ ಇಫ್ಕೊ, ‘ಇದು ರೈತರಿಗೆ ಮಾರಾಟ ಮಾಡುವ ದರ ಅಲ್ಲ’ ಎಂದು ಗುರುವಾರ ಸ್ಪಷ್ಟಪಡಿಸಿತ್ತು. ಸಂಗ್ರಹದಲ್ಲಿ ಇರುವ 11.26 ಲಕ್ಷ ಟನ್ ರಸಗೊಬ್ಬರವನ್ನು ಹಳೆಯ ದರಕ್ಕೆ (ಪ್ರತಿ ಚೀಲಕ್ಕೆ ₹ 1,200) ರೈತರಿಗೆ ಮಾರಾಟ ಮಾಡಲಾಗುವುದು ಎಂದೂ ಅದು ತಿಳಿಸಿತ್ತು. ಕೆಲವು ಖಾಸಗಿ ಕಂಪನಿಗಳು ಡಿಎಪಿ ಬೆಲೆಯನ್ನು ಏಪ್ರಿಲ್‌ 1ರಿಂದ ಅನ್ವಯ ಆಗುವಂತೆ ಪ್ರತಿ ಚೀಲಕ್ಕೆ ₹ 1,700ಕ್ಕೆ ಹೆಚ್ಚಿಸಿವೆ. ಇನ್ನು ಕೆಲವು ಕಂಪನಿಗಳು ಡಿಎಪಿ ಬೆಲೆಯನ್ನು ₹1,600ಕ್ಕೆ ಹಾಗೂ ₹ 1,495ಕ್ಕೆ ಹೆಚ್ಚಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು