ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡುವುದಕ್ಕೆ ಕೇಂದ್ರ ಸರ್ಕಾರದ ವಿರೋಧ

ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿ ಆಕ್ಷೇಪ
Last Updated 12 ಮಾರ್ಚ್ 2023, 20:59 IST
ಅಕ್ಷರ ಗಾತ್ರ

ನವದೆಹಲಿ: ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ. ಇದು ವೈಯಕ್ತಿಕ ಕಾನೂನುಗಳು ಮತ್ತು ಸಮಾಜದ ಒಪ್ಪಿತ ಮೌಲ್ಯಗಳ ನಡುವಣ ನಾಜೂಕು ಸಮತೋಲನಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸರ್ಕಾರವು ಹೇಳಿದೆ.

ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್‌ ಅಡಿಯಲ್ಲಿ ಬರುವ ನಡವಳಿಕೆಯನ್ನು (ಸಲಿಂಗ ಲೈಂಗಿಕತೆ) ಅಪರಾಧಮುಕ್ತಗೊಳಿಸಿದ್ದರೂ ಸಲಿಂಗ ಮದುವೆಯು ಮೂಲಭೂತ ಹಕ್ಕು ಎಂದು ಜನರು ಕೇಳುವಂತಿಲ್ಲ ಎಂದು ಪ್ರಮಾಣ‍ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಒಂದೇ ಲಿಂಗಕ್ಕೆ ಸೇರಿದ ಇಬ್ಬರು ವ್ಯಕ್ತಿಗಳ ನಡುವಣ ಮದುವೆಯನ್ನು ಶಾಸನೋಕ್ತ ಕಾನೂನುಗಳು ಅಥವಾ ವೈಯಕ್ತಿಕ ಕಾನೂನುಗಳು ಮಾನ್ಯ ಮಾಡುವುದು ಸಾಧ್ಯವಿಲ್ಲ. ಮದುವೆ ಎಂಬ ಪರಿಕಲ್ಪನೆಯೇ ಮೂಲಭೂತವಾಗಿ ಇಬ್ಬರು ವಿರುದ್ಧ ಲಿಂಗದ ಜನರ ಸಂಯೋಗವಾಗಿದೆ. ಈ ವ್ಯಾಖ್ಯೆಯೇ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಕಾನೂನಾತ್ಮಕ ವಾಗಿ ಮದುವೆ ಎಂಬ ಪರಿಕಲ್ಪನೆಯೊಂದಿಗೆ ತಳಕು ಹಾಕಿಕೊಂಡಿವೆ. ಈ ಪರಿಕಲ್ಪನೆಯನ್ನು ನ್ಯಾಯಾಂಗೀಯ ವ್ಯಾಖ್ಯಾನದ ಮೂಲಕ ಹಾಳುಗೆಡವಬಾರದು ಅಥವಾ ದುರ್ಬಲಗೊಳಿಸಬಾರದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಸಲಿಂಗ ಮದುವೆಯ ಸಂಬಂಧಗಳಿಗೆ ಮಾನ್ಯತೆ ಮತ್ತು ಅಂತಹ ಸಂಬಂಧಗಳ ಹಕ್ಕುಗಳಿಗೆ ಮಾನ್ಯತೆ ನೀಡುವುದು ಕಾನೂನಿನ ಮೇಲೆ ಪರಿಣಾಮ ಉಂಟು ಮಾಡುವಂತಹ ಕ್ರಮವಾಗಿದೆ. ಇದು ಶಾಸಕಾಂಗದ ಹೊಣೆಗಾರಿಕೆಯಾಗಿದೆ. ಇಂತಹ ವಿಚಾರಗಳನ್ನು ನ್ಯಾಯಾಂಗದ ವಿಚಾರಣೆಯ ಮೂಲಕ ಪರಿಹರಿಸುವುದು ಎಂದಿಗೂ ಸಾಧ್ಯವಿಲ್ಲ ಎಂದು ಸರ್ಕಾರ ವಿವರಿಸಿದೆ.

ಸಲಿಂಗ ಮದುವೆಯಲ್ಲಿ ಒಬ್ಬರು ‘ಗಂಡ’ ಮತ್ತು ಇನ್ನೊಬ್ಬರು ‘ಹೆಂಡತಿ’ ಎಂದು ಗುರುತಿಸುವುದು ಸಾಧ್ಯವಿಲ್ಲ. ಹಾಗಾಗಿ, ವಿವಿಧ ಕಾಯ್ದೆಗಳನ್ನು ಇವರಿಗೆ ಅನ್ವಯಿಸಲು ಸಾಧ್ಯವಾಗದು ಎಂದು ಸರ್ಕಾರ ಹೇಳಿದೆ.

ಕ್ರೋಡೀಕೃತ ಮತ್ತು ಕ್ರೋಡೀಕೃತವಲ್ಲದ ವೈಯಕ್ತಿಕ ಕಾನೂನುಗಳು ಎಲ್ಲ ಧರ್ಮಗಳ ಎಲ್ಲ ಶಾಖೆಗಳಿಗೆ ಸಂಬಂಧಿಸಿದ ವಿಚಾರಗಳನ್ನೂ ನೋಡಿಕೊಳ್ಳುತ್ತವೆ. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ, ಎಲ್ಲ ಧರ್ಮಗಳಲ್ಲಿರುವ ಭಿನ್ನತೆಗಳಿಗೂ ಅನ್ವಯವಾಗುವ ವೈಯಕ್ತಿಕ ಕಾನೂನುಗಳು ಇವೆ. ಮದುವೆ ಎಂಬ ಪರಿಕಲ್ಪನೆ ಕೂಡ ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿದೆ. ಹಿಂದೂಗಳಲ್ಲಿ ಇದು ಪವಿತ್ರವಾಗಿದೆ. ಗಂಡು ಮತ್ತು ಹೆಣ್ಣು ಪರಸ್ಪರರ ಕುರಿತು ಕರ್ತವ್ಯಗಳನ್ನು ಹೊಂದಿರುವ ಪವಿತ್ರ ಬಂಧವಾಗಿದೆ. ಮುಸ್ಲಿಮರಲ್ಲಿ ಇದು ಒಂದು ಕರಾರು. ಆದರೆ, ಅಲ್ಲಿ ಕೂಡ ಅದು ಹೆಣ್ಣು ಮತ್ತು ಗಂಡಿನ ನಡುವಯೇ ನಡೆಯುತ್ತದೆ. ಹಾಗಾಗಿ, ಸಾಮಾಜಿಕ ಮತ್ತು ಧಾರ್ಮಿಕ ನಿಯಮಗಳಲ್ಲಿ ಗಾಢವಾಗಿ ಬೇರು ಬಿಟ್ಟಿರುವ ದೇಶದ ಶಾಸನ ನೀತಿಯನ್ನು ನ್ಯಾಯಾಲಯವು ಬದಲಾಯಿಸುವುದು ಸರಿಯಲ್ಲ ಎಂದು ಕೇಂದ್ರ ವಾದಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT