ಸೋಮವಾರ, ಜೂನ್ 14, 2021
25 °C

ಕೋವಿಡ್‌ನಿಂದ ಮೃತರ ಸಂಖ್ಯೆ ಕೇಂದ್ರ ಮರೆಮಾಚುತ್ತಿದೆ: ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್–19 ದೃಢಪಟ್ಟವರು ಹಾಗೂ ಈ ಸೋಂಕಿನಿಂದ ಮೃತಪಟ್ಟವರ ವಾಸ್ತವ ಸಂಖ್ಯೆಯನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಕೆಲವು ರಾಜ್ಯಗಳೊಂದಿಗೆ ಸೇರಿ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಶನಿವಾರ ಆರೋಪಿಸಿದರು.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು , ‘ಕಳೆದ ಮಾರ್ಚ್‌ 1ರಿಂದ ಮೇ 10ವರೆಗಿನ ಅವಧಿಯಲ್ಲಿ ಗುಜರಾತ್‌ನಲ್ಲಿ 1.23 ಲಕ್ಷ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ 58,000 ಜನರು ಮೃತಪಟ್ಟಿದ್ದಾರೆ ಎಂದು ಗುಜರಾತಿ ಮಾಧ್ಯಮವೊಂದು ವರದಿ ಮಾಡಿದೆ ಎಂದು ಹೇಳಿದರು.

‘ಈ 71 ದಿನಗಳಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ನಾವು ಸ್ವತಂತ್ರವಾಗಿ ಪರಿಶೀಲನೆ ನಡೆಸಿದ್ದೇವೆ. ಈ ವರ್ಷದ ಮಾರ್ಚ್‌ 1ರಿಂದ ಮೇ 10ರ ವರೆಗಿನ ಅವಧಿಯಲ್ಲಿ ಕೋವಿಡ್‌ನಿಂದಾಗಿ 4,218 ಜನರು ಮೃತಪಟ್ಟಿದ್ದಾರೆ ಎಂದು ಗುಜರಾತ್‌ ಸರ್ಕಾರದ ವರದಿ ಹೇಳುತ್ತದೆ’ ಎಂದು ದೂರಿದರು.

‘65,805 ಮರಣ ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರದ ಅಂಕಿ–ಅಂಶಗಳ ಪ್ರಕಾರ ಸತ್ತವರ ಸಂಖ್ಯೆ 4,218. ಈ ವ್ಯತ್ಯಾಸದ ಬಗ್ಗೆ ಸಂಬಂಧಪಟ್ಟವರು ವಿವರಣೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.

‘ಬೇರೆ ಸಮಸ್ಯೆಗಳಿಂದಾಗಿ ಇಷ್ಟೊಂದು ಜನರು ಮೃತಪಟ್ಟಿದ್ದಾರೆ ಎಂಬ ವಿವರಣೆ ಒಪ್ಪವಂಥದ್ದಲ್ಲ. ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಕೋವಿಡ್‌–19 ಕಾರಣ ಎಂಬ ಬಲವಾದ ಸಂಶಯವನ್ನು ಕಾಂಗ್ರೆಸ್‌ ಹೊಂದಿದೆ’ ಎಂದೂ ಹೇಳಿದರು.

ಕಾಂಗ್ರೆಸ್‌ನ ಈ ಆರೋಪಗಳನ್ನು ಗುಜರಾತ್‌ ಗೃಹ ಸಚಿವ ಪ್ರತಾಪ್‌ಸಿನ್ಹ ಜಡೇಜಾ ತಳ್ಳಿಹಾಕಿದ್ದಾರೆ. ರಾಜ್ಯ ಸರ್ಕಾರ ಮೃತ್ತರ ಸಂಖ್ಯೆಯನ್ನು ಮುಚ್ಚಿಟ್ಟಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು