ಮಂಗಳವಾರ, ಮಾರ್ಚ್ 28, 2023
29 °C

ಚೀನಾ ಮತ್ತೆ ದುಸ್ಸಾಹಸ: ಹರಿತ ಆಯುಧಗಳೊಂದಿಗೆ ದಾಳಿಗೆ ಹೊಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷ ಮುಂದುವರಿದಿದೆ. ಪೂರ್ವ ಲಡಾಖ್‌ನ ಪಾಂಗಾಂಗ್‌ ಸರೋವರದ ಬಳಿ ಸೋಮವಾರ ರಾತ್ರಿ ಗುಂಡಿನ ಹಾರಾಟ ನಡೆದಿದೆ.

ಈ ದಿಢೀರ್‌ ಬೆಳವಣಿಗೆ ನಂತರ ಗಡಿಯಲ್ಲಿ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. ಅದರ ಬೆನ್ನಲ್ಲೇ ‘ಮೊದಲು ದಾಳಿ ನಡೆಸಿದ್ದು ಯಾರು’ ಎಂಬ ಬಗ್ಗೆ ಎರಡೂ ರಾಷ್ಟ್ರಗಳು ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿವೆ. ಗುಂಡಿನ ಚಕಮಕಿಯಲ್ಲಿ ಸಾವು–ನೋವುಗಳಾದ ಬಗ್ಗೆ ವರದಿಯಾಗಿಲ್ಲ.

ಲಡಾಖ್‌ನಲ್ಲಿ ಸೋಮವಾರ ಸಂಜೆ ಕಬ್ಬಿಣದ ಸರಳು, ಭರ್ಚಿಯಂತಹ ಹರಿತಆಯುಧಗಳೊಂದಿಗೆ ಭಾರತೀಯ ಯೋಧರ ಬಿಡಾರಗಳತ್ತ ಧಾವಿಸಿದ 50–60 ಚೀನಾ ಯೋಧರು ದಾಳಿಗೆ ಯತ್ನಿಸಿದರು ಎಂದು ಭಾರತ ಆರೋಪಿಸಿದೆ.

ಜೂನ್ 15ರಂದು ಗಾಲ್ವನ್‌ ಕಣಿವೆಯಲ್ಲಿ ನಡೆದ ದಾಳಿಯ ವೇಳೆ ಬಳಸಿದ ರೀತಿಯದ್ದೇ ಅಸ್ತ್ರಗಳು ಅವರ ಕೈಯಲ್ಲಿದ್ದವು. ಅದೇ‌ ಮಾದರಿ ದಾಳಿಗೆ ಅವರು ಸಜ್ಜಾಗಿ ಬಂದಂತೆ ತೋರುತಿತ್ತು. ಭಾರತದ ಯೋಧರು ದಾಳಿಯನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಚೀನಾ ಸೈನಿಕರು 10–15 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಪ್ರತಿಯಾಗಿ ಭಾರತ ಗುಂಡಿನ ದಾಳಿ ನಡೆಸಲಿಲ್ಲ ಎಂದು ಮೂಲಗಳು ತಿಳಿಸಿವೆ. 

‘ಪ್ರಚೋದನೆ ಉಂಟಾದರೂ ನಮ್ಮ ಯೋಧರು ಬಹಳ ಪ್ರಬುದ್ಧತೆ ಮತ್ತು ಸಂಯಮದಿಂದ  ವರ್ತಿಸಿದ್ದಾರೆ’ ಎಂದು ಭಾರತೀಯ ಸೇನೆ ಮತ್ತು ವಿದೇಶಾಂಗ ಸಚಿವಾಲಯ ಹೇಳಿವೆ.

ರೆಝಾಂಗ್‌ ಲಾ ಪ್ರದೇಶದಿಂದ ಭಾರತದ ಸೇನೆಯನ್ನು ಹಿಮ್ಮೆಟ್ಟಿಸಿ ಮುಖಾಪರಿ ಪರ್ವತ ಶ್ರೇಣಿಯನ್ನು ವಶಪಡಿಸಿಕೊಳ್ಳಲು ಚೀನಾ ಇಂಥದೊಂದು ದುಸ್ಸಾಹಸಕ್ಕೆ ಕೈಹಾಕಿದೆ ಎಂದು ಭಾರತ ಪ್ರತಿಕ್ರಿಯಿಸಿದೆ.

ನಾಪತ್ತೆಯಾಗಿದ್ದ ಭಾರತೀಯರು ಚೀನಾ ಸೇನೆಯ ವಶದಲ್ಲಿ 

ಗುವಾಹಟಿ: ಕಳೆದ ವಾರ ಅರುಣಾಚಲ ಪ್ರದೇಶ ಸುಭಾನ್‌ಸಿರಿ ಜಿಲ್ಲೆಯ ಗಡಿಭಾಗದಲ್ಲಿ ಏಕಾಏಕಿ ನಾಪತ್ತೆಯಾಗಿದ್ದ ಐವರು ಸ್ಥಳೀಯ ಯುವಕರು ಚೀನಾ ಸೇನೆಯ ವಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಯುವಕರು ನಾಪತ್ತೆಯಾದ ವಿಷಯವನ್ನು ಭಾರತೀಯ ಸೇನೆಯು ಹಾಟ್‌ಲೈನ್ ಮೂಲಕ ಚೀನಾ ಸೇನೆಯ ಗಮನಕ್ಕೆ ತಂದಿತ್ತು. ಐವರು ಭಾರತೀಯ ಯುವಕರು ತಮ್ಮ ವಶದಲ್ಲಿರುವುದಾಗಿ ಚೀನಾ ದೃಢಪಡಿಸಿದೆ. ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಮಂಗಳವಾರ ಟ್ವೀಟ್‌ ಮಾಡಿದ್ದಾರೆ. 

‘ಗಡಿಯಿಂದ ಚೀನಾ ಸೇನೆ ಶೀಘ್ರ ವಾಪಸ್‌’

ಬೀಜಿಂಗ್‌ : ಲಡಾಖ್ ಗಡಿಯಲ್ಲಿ ನಿಯೋಜಿಸಲಾದ ಸೇನೆಯನ್ನು ಚಳಿಗಾಲಕ್ಕೂ ಮೊದಲೇ ವಾಪಸ್‌ ಕರೆಸಿಕೊಳ್ಳುವುದಾಗಿ ಚೀನಾ ಸುಳಿವು ನೀಡಿದೆ.  

ಭಾರತದೊಂದಿಗೆ ಮಾತುಕತೆಯ ನಂತರ ಸಾಧ್ಯವಾದಷ್ಟೂ ಬೇಗ ಗಡಿಯಿಂದ ಸೇನೆಯನ್ನು ಮರಳಿ ಕರೆಸಿಕೊಳ್ಳುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಝಾಹೊ ಲಿಜಿಯಾನ್‌ ಹೇಳಿದ್ದಾರೆ.

ಸೋಮವಾರ ರಾತ್ರಿ ನಡೆದ ಗುಂಡಿನ ಚಕಮಕಿಯ ನಂತರ ಈ ಹೇಳಿಕೆ ಹೊರಬಿದ್ದಿದೆ. ಗಡಿಯಿಂದ ಸೇನೆ ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಮೊದಲಿನಿಂದಲೂ ಚೀನಾ ಮೇಲೆ ಒತ್ತಡ ಹೇರಿತ್ತು. 

***

ಚೀನಾ ಸೇನೆಯು ದಾರಿತಪ್ಪಿಸುವ ಹುನ್ನಾರದಲ್ಲಿ ತೊಡಗಿದೆ. ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ನಡೆಯುತ್ತಿರುವಾಗಲೇ ಚೀನಾ ಇಂಥ ದುಸ್ಸಾಹಸಕ್ಕೆ ಮುಂದಾಗಿರುವುದು ವಿಪರ್ಯಾಸ 
– ಭಾರತೀಯ ಸೇನೆ  

***

ಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಗಸ್ತು ತಿರುಗುತ್ತಿದ್ದ ನಮ್ಮ ಸೇನಾ ಸಿಬ್ಬಂದಿಯ ಮೇಲೆ ಭಾರತೀಯ ಯೋಧರು ಅಪ್ರಚೋದಿತವಾಗಿ ದಾಳಿ ನಡೆಸಿದ್ದಾರೆ
– ಕರ್ನಲ್‌ ಝಾಂಗ್‌ ಶೂಲಿ, ಚೀನಾ ಸೇನೆಯ ವಕ್ತಾರ  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು