ಶುಕ್ರವಾರ, ಫೆಬ್ರವರಿ 26, 2021
32 °C

ಪರಿಶುದ್ಧ ಗಾಳಿಯೂ ಬದುಕಿನ ಹಕ್ಕು: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಭಿಪ್ರಾಯ

ಪಿಟಿಐ Updated:

ಅಕ್ಷರ ಗಾತ್ರ : | |

ಪರಿಶುದ್ಧ ಗಾಳಿ ಈ ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು. ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದರೆ ಜನರ ಬದುಕುವ ಮೂಲಭೂತ ಹಕ್ಕನ್ನು ನಿರಾಕರಿಸಿದಂತೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಭಿಪ್ರಾಯಪಟ್ಟಿದೆ.

ಶುದ್ಧ ಗಾಳಿ, ನೀರು ಮತ್ತು ಸ್ವಚ್ಛಂದ ವಾತಾವರಣ ಮುಂತಾ ದವು ಜನರ ಸಂವಿಧಾನದತ್ತ ಹಕ್ಕುಗಳು. ಈ ಹಕ್ಕುಗಳನ್ನು ರಕ್ಷಿಸು ವುದು ಸರ್ಕಾರದ ಕೆಲಸ ಎಂದು ಹೇಳಿದೆ.

ಪರಿಸರ ರಕ್ಷಣೆಗೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲಾಗಿರುವ ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ಮಂಡಳಿ ಸಲಹೆ ನೀಡಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ‘ರಾಷ್ಟ್ರೀಯ ಶುದ್ಧ ಗಾಳಿ ಯೋಜನಾ (ಎನ್‌ಸಿಎಪಿ)’ ವರದಿಯಲ್ಲಿ 2024ರ ವೇಳೆಗೆ ಶೇ 20–30ರಷ್ಟು ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವುದಾಗಿ ಹೇಳಿದೆ.

ಮಾಲಿನ್ಯ ನಿಯಂತ್ರಣಕ್ಕೆ ಕಾಲಾವಕಾಶ ಕೋರಿದ ಕೇಂದ್ರ ಸರಕಾರದ ಮನವಿಗೆ ನ್ಯಾಯಮೂರ್ತಿ ಎ.ಕೆ. ಗೋಯಲ್ ನೇತೃತ್ವದ ನ್ಯಾಯಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. 

ಈ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ನಿಲುವನ್ನು ತರಾಟೆಗೆ ತೆಗೆದುಕೊಂಡ ಗೋಯಲ್ ಅವರು, ‘ಇದು ಜನರ ಸಂವಿಧಾನದತ್ತ ಹಕ್ಕಿನ ನಿರಾಕರಣೆ. ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆ’ ಎಂದು‌ ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಸಿಎಪಿ ವರದಿಯಲ್ಲಿ ನೀಡಿರುವ ಅಂಕಿ, ಅಂಶಗಳ ಬಗ್ಗೆ ಆಕ್ಷೇಪ ಎತ್ತಿದ ನ್ಯಾಯಮಂಡಳಿ, ವರದಿಯಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಳ್ಳುವಂತೆ ಸಲಹೆ ಮಾಡಿದೆ. ಇದಕ್ಕೆ ಒಪ್ಪಿಗೆ ಸೂಚಿಸಿದ ಅರಣ್ಯ ಸಚಿವಾಲಯದ ಅಧಿಕಾರಿಗಳು ತಜ್ಞರಿಂದ ಪುನರ್‌ ಪರಿಶೀಲನೆ ನಡೆಸಿ, ವರದಿ ಪರಿಷ್ಕರಿಸಲಾಗುವುದು ಎಂದು ಭರವಸೆ ನೀಡಿದರು.     

ವಾಯು ಮಾಲಿನ್ಯ ನಿಯಂತ್ರಣಕ್ಕೆ ಹತ್ತು ವರ್ಷಗಳ ಕಾಲಾವಕಾಶ ಅಗತ್ಯ. ಮೊದಲ ಮೂರು ವರ್ಷದಲ್ಲಿ ಗರಿಷ್ಠ ಶೇ35 ರಷ್ಟು ಮಾಲಿನ್ಯ ನಿಯಂತ್ರಿಸಬಹುದು ಎಂದು ಎನ್‌ಸಿಎಪಿ ವರದಿಯಲ್ಲಿ ಹೇಳಲಾಗಿದೆ. ಈ ಅಂಶದ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿ ಗೋಯಲ್‌, ‘ಹಾಗಾದರೆ ದೇಶದಲ್ಲಿ ಇನ್ನೂ ಹತ್ತು ವರ್ಷ ಮಾಲಿನ್ಯ ಸಮಸ್ಯೆ ಹಾಗೆಯೇ ಇರುತ್ತದೆಯೇ? ಅದಕ್ಕೆ ಪರಿಹಾರ ಸಾಧ್ಯ ಇಲ್ಲವೇ? ನಿಜಕ್ಕೂ ಹತ್ತು ವರ್ಷ ಬೇಕಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಆರು ತಿಂಗಳ ಒಳಗೆ 175 ವಾಯುಮಾಪನ ಕೇಂದ್ರ

ಗಾಳಿಯ ಗುಣಮಟ್ಟ ಅಳೆಯಲು ದೇಶದಲ್ಲಿ ಮತ್ತಷ್ಟು ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಮಂಗಳವಾರ ಆದೇಶಿಸಿದೆ.

ದೇಶದಲ್ಲಿ ಇನ್ನೂ ಇಂತಹ ಕೇಂದ್ರಗಳ ಸ್ಥಾಪನೆ ಅಗತ್ಯವಿದ್ದು, ಆರು ತಿಂಗಳ ಒಳಗಾಗಿ ಹೆಚ್ಚುವರಿಯಾಗಿ 175 ವಾಯು ಮಾಪನ ಕೇಂದ್ರಗಳನ್ನು ತೆರೆಯುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಎನ್‌ಜಿಟಿ ಸೂಚಿಸಿದೆ. 

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ದೇಶದಲ್ಲಿ ಈಗಾಗಲೇ 173 ವಾಯು ಮಾಪನ ಕೇಂದ್ರಗಳನ್ನು ಸ್ಥಾಪಿಸಿದ್ದು, ಅವೆಲ್ಲವೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.

ಒಂದು ತಿಂಗಳ ಒಳಗೆ ಈ ಕೇಂದ್ರಗಳ ನಿರ್ಮಾಣ ಕಾರ್ಯ ಆರಂಭವಾಗಬೇಕು ಮತ್ತು ಕಡ್ಡಾಯವಾಗಿ ಆರು ತಿಂಗಳ ಒಳಗೆ  ನಿರ್ಮಾಣ ಕಾಮಗಾರಿ ಮುಗಿಯಬೇಕು ಎಂದು ಗಡುವು ವಿಧಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಪ್ರಾಧಿಕಾರಗಳ ಅಧ್ಯಕ್ಷ, ನಿರ್ದೇಶಕರು ಇಲ್ಲವೇ ಸದಸ್ಯರೊಂದಿಗೆ ಆನ್‌ಲೈನ್‌ನಲ್ಲಿಯೇ ನಿಯಮಿತವಾಗಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸುವಂತೆ ಸೂಚಿಸಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಪ್ರಾಧಿಕಾರಗಳಲ್ಲಿರುವ ‘ಪರಿಸರ ಪರಿಹಾರ ನಿಧಿ’ಯಲ್ಲಿರುವ ಹಣವನ್ನು ವಾಯುಮಾಪನ ಕೇಂದ್ರಗಳ ಸ್ಥಾಪನೆಯ ಉದ್ದೇಶಕ್ಕೆ ಬಳಸಬಹುದು ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಗೋಯೆಲ್‌ ಹೇಳಿದ್ದಾರೆ. ಸ್ಥಳೀಯ ಪರಿಸರ ಸಂರಕ್ಷಣೆ, ಗಾಳಿಯ ಗುಣಮಟ್ಟ, ಪರಿಣಾಮ ಮತ್ತು ಇತ್ಯಾದಿ ಅಶಗಳ ಬಗ್ಗೆ ಮಂಡಳಿ ಸಿಬ್ಬಂದಿ ಅಥವಾ ಸ್ವತಂತ್ರ ಸಂಸ್ಥೆಗಳಿಂದ ಅಧ್ಯಯನ ನಡೆಸುವಂತೆಯೂ ಅವರು ಸಲಹೆ ಮಾಡಿದ್ದಾರೆ. 

‌ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಮಾರಕವಾಗುವಂತಹ ಮಾಲಿನ್ಯ ಮತ್ತು ವಾಣಿಜ್ಯ ಚಟುವಟಿಕೆಗಳನ್ನುನಿಷೇಧಿಸಲು ಅಥವಾ ಸ್ಥಳಾಂತರಿಸಲು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚಿಸಿದ್ದಾರೆ.

***
ರಾಷ್ಟ್ರೀಯ ಪರಿಶುದ್ಧ ಗಾಳಿ ಯೋಜನೆ (ಎನ್‌ಸಿಎಪಿ) ವರದಿ ಅಡಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಕ್ರಮ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿಲ್ಲ. 
– ಎ.ಕೆ. ಗೋಯೆಲ್‌, ಅಧ್ಯಕ್ಷ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ 

ಆಧಾರ: ಪಿಟಿಐ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು