ಶನಿವಾರ, ಮಾರ್ಚ್ 25, 2023
27 °C

ಅಪಘಾತದ ಪರಿಹಾರ ಮೊತ್ತ ನೊಂದವರ ಘನತೆ ರಕ್ಷಿಸಬೇಕು: ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ರಸ್ತೆ ಅಪಘಾತದಿಂದ ಶಾಶ್ವತ ಅಂಗವಿಕಲತೆಗೆ ಒಳಗಾಗುವ ಸಂತ್ರಸ್ತನ ಬದುಕಿನಲ್ಲಿ ಘನತೆ ಕಾಪಾಡಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಕೋರ್ಟ್‌ಗಳು ಪ್ರಾಮಾಣಿಕವಾಗಿ ಯತ್ನಿಸಿ, ‘ಪರಿಹಾರಕ್ಕೆ ಆದೇಶಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಇಂಥ ಪ್ರಯತ್ನಗಳು ಸಂತ್ರಸ್ತನ ನೋವು ನಿವಾರಿಸಬೇಕು. ವಾಸ್ತವಿಕ ಸಂಗತಿಗಳನ್ನು ಆಧರಿಸಿ ಅವರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು ಎಂದೂ ನ್ಯಾಯಮೂರ್ತಿಗಳಾದ ಆರ್‌.ಸುಭಾಷ್‌ ರೆಡ್ಡಿ ಮತ್ತು ಹೃಷಿಕೇಷ್‌ ರಾಯ್‌ ಅವರಿದ್ದ ಪೀಠವು ಹೇಳಿದೆ.

ಆರೋಗ್ಯಕರ ವ್ಯಕ್ತಿಯು ಅಂಗವಿಕಲತೆಗೆ ಗುರಿಯಾದಾಗ ಸಹಜ ಒಡನಾಟ ಕಳೆದುಕೊಳ್ಳುತ್ತಾರೆ. ಉತ್ಪಾದಕತೆಯ ಬದುಕು ಸಾಗಿಸಲೂ ಅಸಮರ್ಥರಾಗುತ್ತಾರೆ. ಇದು, ಘನತೆಗೆ ಧಕ್ಕೆ ತರಲಿದೆ. ಇಂಥ ಬೆಳವಣಿಗೆಯನ್ನು  ಚಾರ್ಲ್ಸ್‌ ಡಿಕನ್ಸ್‌ ಅವರ ‘ಪ್ಲೀಸ್‌ ಸರ್, ಐ ವಾಂಟ್‌ ಸಮ್‌ ಮೋರ್’ ಕೃತಿಯ ಪಾತ್ರಧಾರಿಯಂತೆ ನೋಡಬಾರದು ಎಂದು ಪೀಠವು ಅಭಿಪ್ರಾಯಪಟ್ಟಿತು.

ಅಪಘಾತದಲ್ಲಿ ಪೂರ್ಣ ಅಂಗವಿಕಲರಾಗಿದ್ದ ಕೇರಳದ ಜಿತೇಂದ್ರನ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪರಿಗಣಿಸಿತು. ಕೇರಳ ಹೈಕೋರ್ಟ್ ಪರಿಹಾರದ ಮೊತ್ತವನ್ನು ₹ 14.31 ಲಕ್ಷದಿಂದ ₹ 27.67ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತ್ತು. 2001ರಲ್ಲಿ ವೇಗವಾಗಿ ಬಂದಿದ್ದ ಕಾರು ಡಿಕ್ಕಿ ಹೊಡೆದಿದ್ದು, ಇವರು ವಾಹನದ ಹಿಂಬದಿ ಸವಾರರಾಗಿದ್ದರು. ಅಪಘಾತ ನಡೆದಾಗ 21 ವರ್ಷದವರಾಗಿದ್ದ ಇವರು ಜ್ಯುವೆಲ್ಲರಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ₹ 4,500 ಗಳಿಸುತ್ತಿದ್ದರು.

ಅಪಘಾತದಲ್ಲಿ ಶೇ 69ರಷ್ಟು ಅಂಗವಿಕಲತೆ ಆಗಿದ್ದರೂ ಪೂರ್ಣ ಶ್ರವಣಶಕ್ತಿ ಕಳೆದುಕೊಂಡಿದ್ದಾರೆ ಎಂಬುದನ್ನು ಕೋರ್ಟ್‌ ಪರಿಗಣಿಸಿತು. ಜೊತೆಗೆ ಇವರಿಗೆ ನೆರವಾಗಬೇಕಾದ ಸಹಾಯಕನ ವಾರ್ಷಿಕ ವೆಚ್ಚವನ್ನೂ ಪರಿಗಣನೆಗೆ ತೆಗೆದುಕೊಂಡಿತು.

ತೀವ್ರ ಸ್ವರೂಪದ ನೋವಿನ ಕಾರಣ ನೊಂದವರು ಹೆಚ್ಚಿನ ಪರಿಹಾರ ಕೋರುವುದು ಅತಿಶಯೋಕ್ತಿಯಲ್ಲ. ಬದಲಿಗೆ ಜೀವನದ ಮೇಲೆ ಆಗಿರುವ ನೋವಿಗೆ ಸೂಕ್ತ ಪರಿಹಾರ ಸಿಗಲಿ ಎಂಬುದೇ ಆಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು