ಸೋಮವಾರ, ಮೇ 17, 2021
21 °C

ಪಿಎಂ–ಕೇರ್ಸ್‌: ಮುಗಿಯದ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಪಿಎಂ–ಕೇರ್ಸ್‌ ನಿಧಿಯು ಕೋವಿಡ್‌ನಿಂದಾದ ಸಮಸ್ಯೆಗಳ ಪರಿಹಾರಕ್ಕೆ ದೇಣಿಗೆಗಳನ್ನು ಸ್ವೀಕರಿಸಲು ಸರ್ಕಾರವೇ ರಚಿಸಿದ ನಿಧಿಯಾಗಿರುವುದರಿಂದ, ಅದೊಂದು ಸಾರ್ವಜನಿಕ ಘಟಕವಾಗಿದೆ. ಅದರ ನಿಯಂತ್ರಣ ಹಾಗೂ ಮಾಲೀಕತ್ವ ಕೇಂದ್ರ ಸರ್ಕಾರದ ಬಳಿ ಇದೆ. ಆದರೆ, ಇದು ಖಾಸಗಿಯವರಿಂದ ದೇಣಿಗೆ ಸಂಗ್ರಹಿಸುತ್ತಿರುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿರುವ ಪ್ರಶ್ನೆಯೊಂದಕ್ಕೆ ಸರ್ಕಾರ ಡಿ.24ರಂದು ಈ ಉತ್ತರ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದು ಖಾಸಗಿ ನಿಧಿ ಎಂದು ಸರ್ಕಾರವು ಇತ್ತೀಚೆಗಷ್ಟೇ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿತ್ತು. ಈಗ ನೀಡಿರುವ ಈ ಹೊಸ ಹೇಳಿಕೆಯು ಸರ್ಕಾರವೇ ನೀಡಿದ್ದ ಇತ್ತೀಚಿನ ಹೇಳಿಕೆಗೆ ವಿರುದ್ಧವಾದುದಾಗಿದೆ.

‘ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು, ವಿದೇಶಿಯರು, ವಿದೇಶಿ ಸಂಸ್ಥೆಗಳು ಹಾಗೂ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳು ನೀಡಿದ ದೇಣಿಗೆಯಿಂದಲೇ ಈ ನಿಧಿಯನ್ನು ನಡೆಸಲಾಗುತ್ತದೆ. ಸರ್ಕಾರದಿಂದ ಪ್ರಾಯೋಜಿತವಾಗಿರುವ ಮತ್ತು ಖಾಸಗಿ ಟ್ರಸ್ಟಿಗಳು ನಿರ್ವಹಿಸುವ ಸಂಸ್ಥೆಯಾದರೆ ಮಾತ್ರ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್‌ 2(ಎಚ್‌) ಅನ್ವಯವಾಗುತ್ತದೆ. ಪಿಎಂ– ಕೇರ್ಸ್‌ ಇದಕ್ಕೆ ಭಿನ್ನವಾದ ನಿಧಿಯಾಗಿದ್ದು, ಸಾರ್ವಜನಿಕ ಪ್ರಾಧಿಕಾರ ಎಂದು ಪರಿಗಣಿಸುವಂತಿಲ್ಲ’ ಎಂದು ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ.‌

ಮಾರ್ಚ್‌ 27ರಂದು ಈ ನಿಧಿಯನ್ನು ಸ್ಥಾಪಿಸುವಾಗ ರಚಿಸಲಾದ ಕರಾರುಪತ್ರದಲ್ಲಿ, ‘ಇದು ಸರ್ಕಾರ ನಿಯಂತ್ರಿಸುವ ಅಥವಾ ಮಾಲೀಕತ್ವದ ಸಂಸ್ಥೆಯಲ್ಲ’ ಎಂದು ಘೋಷಿಸಲಾಗಿತ್ತು. ದೆಹಲಿಯ ಕಂದಾಯ ಇಲಾಖೆಯಡಿ ಟ್ರಸ್ಟ್‌ನ ನೋಂದಣಿ ಮಾಡಲಾಗಿದ್ದು, ಪ್ರಧಾನಿ ಇದರ ಅಧ್ಯಕ್ಷರು ಮತ್ತು ಹಿರಿಯ ಸಚಿವರು ಟ್ರಸ್ಟಿಗಳಾಗಿರುತ್ತಾರೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ನಿಧಿಯ ವೆಬ್‌ಸೈಟ್‌ನಲ್ಲಿ ಇತ್ತೀಚೆಗೆ ಪ್ರಕಟಿಸಲಾಗಿತ್ತು.

ಸರ್ಕಾರ ಈಗ ನೀಡಿರುವ ಪ್ರತಿಕ್ರಿಯೆಯಿಂದಾಗಿ ಈ ನಿಧಿಯ ಬಗೆಗಿನ ಗೊಂದಲಗಳು ಹೆಚ್ಚುವಂತಾಗಿದೆ. ‘ಸರ್ಕಾರದ ಘಟಕವೆಂದು ವಿವಿಧ ಮೂಲಗಳಿಂದ ದೇಣಿಗೆಯನ್ನು ಸಂಗ್ರಹಿಸಲಾಗಿದ್ದು, ನಿಯಮಾವಳಿಯ ಪ್ರಕಾರ ನಿಧಿಯನ್ನು ಕುರಿತ ಮಾಹಿತಿ ಬಹಿರಂಗಪಡಿಸುವ ಬದ್ಧತೆಯನ್ನು ಸರ್ಕಾರವು ಪ್ರದರ್ಶಿಸುತ್ತಿಲ್ಲ’ ಎಂದು ಆರೋಪಿಸಲಾಗಿದೆ.

‘ನಿಧಿಯು ಸರ್ಕಾರದ ಮಾಲೀಕತ್ವದ್ದಾಗಲಿ, ನಿಯಂತ್ರಣದಲ್ಲಿರುವುದಾಗಲಿ, ಅಂಗಸಂಸ್ಥೆಯಾಗಲಿ ಅಲ್ಲ. ಸರ್ಕಾರದಿಂದ ಅನುದಾನ ಪಡೆಯುವಂಥದ್ದೂ ಅಲ್ಲ ಮತ್ತು ಅಂಥ ಉದ್ದೇಶವೂ ಇಲ್ಲ. ಕೇಂದ್ರ ಸರ್ಕಾರಕ್ಕಾಗಲಿ, ಯಾವುದೇ ರಾಜ್ಯ ಸರ್ಕಾರಕ್ಕಾಗಲಿ ಇದರ ಕಾರ್ಯನಿರ್ವಹಣೆಯ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ನಿಯಂತ್ರಣ ಇಲ್ಲ’ ಎಂದು ಕರಾರುಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು.

ಕರಾರುಪತ್ರದ ಪ್ರಕಾರ ಅದು ಸರ್ಕಾರ ನಡೆಸುವ ಸಂಸ್ಥೆಯಲ್ಲ. ಆದ್ದರಿಂದ ಸಿಎಸ್‌ಆರ್‌ ದೇಣಿಗೆ ಪಡೆಯಲು ಅರ್ಹತೆ ಇರುವುದಿಲ್ಲ. ಆದರೆ, ನೋಂದಣಿಯಾದ ಮರುದಿನವೇ ಒಂದು ಸೂಚನೆಯನ್ನು ಹೊರಡಿಸಿದ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು, ‘ಪಿಎಂ–ಕೇರ್ಸ್‌ ಒಂದು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್‌ಆರ್‌)ನಿಧಿಯಾಗಿದ್ದು, ಕಾರ್ಪೊರೇಟ್‌ ಸಂಸ್ಥೆಗಳಿಂದ ದೇಣಿಗೆ ಪಡೆಯಲು ಅರ್ಹವಾಗಿದೆ’ ಎಂದಿತ್ತು.

ಇದಾಗಿ ಎರಡು ತಿಂಗಳ ನಂತರ, ಮೇ 26ರಂದು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಮಾ.28ರಿಂದಲೇ ಜಾರಿಯಾಗುವಂತೆ ಪಿಎಂ–ಕೇರ್ಸ್‌ ನಿಧಿಯನ್ನು ಕಂಪನಿ ಕಾಯ್ದೆಗಳಡಿ ತಂದಿತ್ತು. ನಿಧಿಯು ಆರಂಭದಿಂದಲೇ ಹಲವು ವಿರೋಧಾಭಾಸಗಳನ್ನು ಪ್ರಕಟಿಸುತ್ತಾ ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು