ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮೃತಿ ಮಗಳಿಗೆ ಸಂಬಂಧಿಸಿದ ಪೋಸ್ಟ್ ಡಿಲಿಟ್ ಮಾಡಿ: ಕಾಂಗ್ರೆಸ್‌ ನಾಯಕರಿಗೆ ಕೋರ್ಟ್

Last Updated 29 ಜುಲೈ 2022, 10:24 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಶುಕ್ರವಾರ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಸ್ಮೃತಿ ಮತ್ತು ಅವರ ಮಗಳ ಕುರಿತ ಟ್ವೀಟ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದೆ.

ಇರಾನಿ ಅವರ 18 ವರ್ಷದ ಮಗಳು ಝೋಯಿಶ್‌ ಇರಾನಿ ಗೋವಾದಲ್ಲಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಿಂದ ಸ್ಮೃತಿ ಅವರನ್ನು ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದ್ದರು.

ತಮ್ಮ ಹಾಗೂ ತಮ್ಮ ಮಗಳ ವಿರುದ್ಧ ಆಧಾರ ರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಇರಾನಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ₹2 ಕೋಟಿ ಮೊತ್ತದ ಮಾನಹಾನಿ ಪ್ರಕರಣ ದಾಖಲಿಸಿದ್ದರು.

ಸ್ಮೃತಿ ಮತ್ತು ಅವರ ಮಗಳ ವಿರುದ್ಧ ಕಾಂಗ್ರೆಸ್‌ ನಾಯಕರು ಮಾಡಿದ ಆರೋಪಗಳಿಗೆ ಸಂಬಂಧಿಸಿದ ಟ್ವೀಟ್‌ಗಳು, ರಿಟ್ವೀಟ್‌ಗಳು, ಪೋಸ್ಟ್‌ಗಳು, ವೀಡಿಯೊಗಳು ಮತ್ತು ಫೋಟೋಗಳನ್ನು 24 ಗಂಟೆಗಳ ಒಳಗೆ ತೆಗೆದು ಹಾಕಬೇಕು. ಪ್ರತಿವಾದಿಗಳು (ಕಾಂಗ್ರೆಸ್‌ ನಾಯಕರು) ನಿರ್ದೇಶನಗಳನ್ನು ಅನುಸರಿಸಲು ವಿಫಲವಾದರೆ, ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳೇ ಆ ಪೋಸ್ಟ್‌ಗಳನ್ನು ತೆಗೆದುಹಾಕಬೇಕು ಎಂದು ಕೋರ್ಟ್‌ ಹೇಳಿದೆ.

ಇರಾನಿ ವಿರುದ್ಧ ‘ಅಪಪ್ರಚಾರ ಮತ್ತು ಬೋಗಸ್‘ ಆರೋಪಗಳನ್ನು ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿತು. ಅಲ್ಲದೆ, ಪ್ರಕರಣವು ಕಾಂಗ್ರೆಸ್‌ ನಾಯಕರ ವಿರುದ್ಧವಿದೆ ಎಂದಿತು.

‘ವಾಸ್ತವ ಸತ್ಯಗಳನ್ನು ಪರಿಶೀಲಿಸದೆ ದೂಷಣೆ, ಆರೋಪಗಳನ್ನು ಮಾಡಲಾಗಿದೆ ಎಂದು ಪ್ರಾಥಮಿಕವಾಗಿ ನಾನು ಭಾವಿಸುತ್ತೇನೆ. ಪ್ರತಿವಾದಿಗಳು ಮಾಡಿರುವ ಟ್ವೀಟ್‌ಗಳು ಮತ್ತು ರೀಟ್ವೀಟ್‌ಗಳು ಫಿರ್ಯಾದುದಾರರ (ಸ್ಮೃತಿ ಇರಾನಿ) ಪ್ರತಿಷ್ಠೆಗೆ ಗಂಭೀರವಾದ ಹಾನಿಯುಂಟುಮಾಡಿದೆ’ ಎಂದು ನ್ಯಾಯಾಧೀಶರು ಹೇಳಿದರು.

ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಿಂದ ಮಾಡಿದ ಆರೋಪಗಳನ್ನು ತೆಗೆದುಹಾಕಲು ಪ್ರತಿವಾದಿಗಳಿಗೆ ನಿರ್ದೇಶಿಸುವ ಮಧ್ಯಂತರ ಆದೇಶವನ್ನು ನೀಡುವುದು ಸೂಕ್ತವೆಂದು ನಾನು ಭಾವಿಸುತ್ತೇನೆ ಎಂದು ನ್ಯಾಯಾಧೀಶರು ಹೇಳಿದರು.

ಸ್ಮೃತಿ ಅವರ ಮಗಳಿಗೆ ಸಂಬಂಧಿಸಿದ ಪೋಸ್ಟ್, ವೀಡಿಯೊಗಳು, ಟ್ವೀಟ್‌ಗಳು, ರಿಟ್ವೀಟ್‌ಗಳು, ತಿರುಚಲಾದ ಚಿತ್ರಗಳನ್ನು ತೆಗೆದುಹಾಕಲು ಮತ್ತು ಅದರ ಮರುಪ್ರಸಾರವನ್ನು ನಿಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT