ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರ ರೈತರ ಹಕ್ಕುಗಳನ್ನು ಕಸಿದುಕೊಂಡಿದೆ: ಪ್ರಿಯಾಂಕಾ ಗಾಂಧಿ ಆಕ್ರೋಶ

Last Updated 24 ಜನವರಿ 2021, 10:00 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸಂಪತ್ತನ್ನು ಕಾರ್ಪೊರೇಟ್‌ ಕಂಪೆನಿಗಳಿಗೆ ವರ್ಗಾಯಿಸಿ, ರೈತರ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಬಿಜೆಪಿಯು ತನ್ನ ಶತಕೋಟ್ಯಾದೀಶ ಸ್ನೇಹಿತರಿಗೆ ಕೆಂಪು ರತ್ನಗಂಬಳಿ ಹಾಸಿ, ದೇಶದ ಸಂಪೂರ್ಣ ಸಂಪತ್ತನ್ನು ಹಸ್ತಾಂತರಿಸಿದೆ. ಆದರೆ, ರೈತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ದೆಹಲಿಗೆ ಬಂದರೆ ನಿರ್ಬಂಧಿಸಲಾಗುತ್ತದೆ. ಇದು ಬಿಜೆಪಿ ಹಾಗೂ ಸೂಟು ಬೂಟುದಾರಿಗಳ (ಕಾರ್ಪೊರೇಟ್‌ ಕಂಪೆನಿಗಳ) ‘ಜುಗಲ್‌ಬಂದಿ’ (ಪಾಲುದಾರಿಕೆ) ಆಗಿದೆ. ಇದು ರೈತರ ಹಕ್ಕುಗಳನ್ನು ಕಸಿದುಕೊಳ್ಳುವ ನಿರ್ಬಂಧವಾಗಿದೆ’ ಎಂದು ಪ್ರಿಯಾಂಕಾ ಟ್ವೀಟ್‌ ಮಾಡಿದ್ದಾರೆ.

ಹೊಸದಾಗಿ ರೂಪಿಸಿರುವ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ರೈತರು ದೆಹಲಿ ಗಡಿಯ ವಿವಿಧ ಭಾಗಗಳಲ್ಲಿ ನವೆಂಬರ್‌ 26 ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ರೈತರು ಮತ್ತು ಸರ್ಕಾರದ ನಡುವೆ ಶುಕ್ರವಾರ ನಡೆದ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ.ರೈತರ ಪ್ರತಿಭಟನೆಯನ್ನು ಬೆಂಬಲಿಸಿರುವ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳು, ಸರ್ಕಾರವನ್ನು ಗುರಿಯಾಗಿರಿಸಿ ಟೀಕಾಪ್ರಹಾರ ನಡೆಸುತ್ತಿವೆ.

ಟ್ರ್ಯಾಕ್ಟರ್‌ ಪರೇಡ್‌ಗೆ ಅವಕಾಶ
ಸದ್ಯ ಇದೇ 26ರಂದು, ಗಣರಾಜ್ಯೋತ್ಸವದ ದಿನ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಪರೇಡ್‌ಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಪ್ರತಿಭಟನಾ ನಿರತ ರೈತರ ಸಂಘಟನೆಗಳು ಪೊಲೀಸರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಪರೇಡ್‌ಗೆ ಅನುಮತಿ ದೊರೆತಿದೆ. ಈ ವೇಳೆ ಸುಮಾರು 2 ಲಕ್ಷ ಟ್ರಾಕ್ಟರ್‌ಗಳು ಭಾಗವಹಿಸುವ ಸಾಧ್ಯತೆ ಇದೆ.

‘ಗಣರಾಜ್ಯೋತ್ಸವ ದಿನದಂದು (ಜನವರಿ 26ರಂದು) ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ್‍ಯಾಲಿ ‘ಕಾನೂನು ಮತ್ತು ಸುವ್ಯವಸ್ಥೆ’ ವಿಷಯವಾಗಿದೆ. ಹೀಗಾಗಿ, ಈ ವಿಷಯವನ್ನು ನಿಭಾಯಿಸುವ ಸಂಪೂರ್ಣ ಅಧಿಕಾರ ದೆಹಲಿ ಪೊಲೀಸರಿಗಿದೆ’ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

ಗಣರಾಜ್ಯೋತ್ಸವ ಸಂಭ್ರಮಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಆಯೋಜಿಸಿರುವ ಟ್ರ್ಯಾಕ್ಟರ್‌ ರ್‍ಯಾಲಿ ಅಥವಾ ಯಾವುದೇ ರೀತಿಯ ಪ್ರತಿಭಟನೆಗೆ ತಾತ್ಕಾಲಿಕ ಪ್ರತಿಬಂಧಕಾಜ್ಞೆ (ಇಂಜಂಕ್ಷನ್) ನೀಡಬೇಕು ಎಂದು ಕೋರಿ ದೆಹಲಿ ಪೊಲೀಸರ ಮೂಲಕ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿತ್ತು. ಗಣರಾಜ್ಯೋತ್ಸವ ದಿನದಂದು ನಡೆಯುವ ಪ್ರತಿಭಟನೆ ಮತ್ತು ರ‍್ಯಾಲಿಯಿಂದ ದೇಶಕ್ಕೆ ಮುಜುಗರವಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT