ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಿಂದ ಅವಮಾನವಾಗಿದೆ ಎಂಬ ಅಮರಿಂದರ್‌ ಹೇಳಿಕೆಯಲ್ಲಿ ಹುರುಳಿಲ್ಲ: ಕಾಂಗ್ರೆಸ್‌

Last Updated 1 ಅಕ್ಟೋಬರ್ 2021, 17:08 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನಿಂದ ತಮಗೆ ಅವಮಾನವಾಗಿದ್ದು, ಹೀಗಾಗಿ ಪಕ್ಷ ತೊರೆಯುತ್ತಿರುವುದಾಗಿ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ನೀಡಿದ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಅಮರಿಂದರ್‌ ಹೇಳಿಕೆ ಖಂಡಿಸಿರುವ ಕಾಂಗ್ರೆಸ್‌, ಇದರ ಹಿಂದೆ ‘ಯಾವುದೋ ಒತ್ತಡ’ ಇದ್ದಂತಿದೆ ಎಂದಿದೆ. ಕ್ಯಾಪ್ಟನ್‌ ಸೋತಾಗಲೂ ಅವರಿಗೆ ಪಕ್ಷವು ಎಷ್ಟು ದೊಡ್ಡ ಸ್ಥಾನವನ್ನು ನೀಡಿತ್ತು ಎಂಬುದನ್ನು ಅವರು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದೆ.

‘ಅಮರಿಂದರ್‌ ಅವರನ್ನು ಬಿಜೆಪಿ ತನ್ನ ಮುಖವಾಡವನ್ನಾಗಿ ಬಳಸಿಕೊಳ್ಳಲು ನೋಡುತ್ತಿದೆ’ ಎಂದು ಆರೋಪಿಸಿರುವ ಪಂಜಾಬ್‌ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್‌, ಅಂಥದಕ್ಕೆ ಅಮರಿಂದರ್‌ ಅವಕಾಶ ಮಾಡಿಕೊಡಬಾರದು ಹಾಗೂ ಕಾಂಗ್ರೆಸ್‌ ಬಗ್ಗೆ ತಾವು ನೀಡಿದ ಹೇಳಿಕೆಗಳನ್ನು ಮರುಪರಿಶೀಲಿಸಬೇಕು ಎಂದಿದ್ದಾರೆ.

‘ಅಮರಿಂದರ್‌ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಬಳಿಕ, ಜನರ ಅನುಕಂಪವನ್ನು ಪಡೆಯುವುದಕ್ಕಾಗಿ ಅವಮಾನದ ಸಿದ್ಧಾಂತವನ್ನು ಪ್ರಚುರಪಡಿಸಲಾಗುತ್ತಿದೆ. ಆದರೆ, ಇಂಥ ಅನುಕಂಪದ ರಾಜಕಾರಣದಿಂದ ವ್ಯಕ್ತಿಗೆ ಸಹಾಯವಾಗಬಲ್ಲದು ಆದರೆ, ಪಂಜಾಬ್‌ಗೆ ಅಲ್ಲ’ ಎಂದು ರಾವತ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹೇಳಿಕೆಯಲ್ಲಿ ನವಜೋತ್‌ ಸಿಂಗ್‌ ಸಿಧು ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ, ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿಯಾಗಿರುವ ಚರಣಜಿತ್‌ ಸಿಂಗ್ ಚನ್ನಿ ಅವರ ‘ಸಾಮಾನ್ಯ ಹಿನ್ನೆಲೆ’ಯನ್ನು ಒತ್ತಿಹೇಳಿದ್ದಾರೆ. ‘ಚನ್ನಿ ಅವರನ್ನಾದರೂ ಅಮರಿಂದರ್‌ ಸಿಂಗ್‌ ಆಶೀರ್ವದಿಸುತ್ತಾರೆಂದು ಪಕ್ಷವು ನಿರೀಕ್ಷಿಸಿತ್ತು. ಆದರೆ, ಅದು ಆಗಲಿಲ್ಲ’ ಎಂದಿದ್ದಾರೆ.

1998ರಲ್ಲಿ ಪಟಿಯಾಲಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿನ ಸೋಲಿನ ಆಘಾತದಲ್ಲಿದ್ದಾಗಲೂ, ಅವರನ್ನು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವರು ಆ ಸ್ಥಾನದಲ್ಲಿ ಮೂರು ಅವಧಿ ಇದ್ದರು. ಎರಡು ಅವಧಿ ಪಂಜಾಬ್‌ ಮುಖ್ಯಮಂತ್ರಿಯಾಗಿದ್ದ ಅವರಿಗೆ ಪಕ್ಷವು ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು ಎಂದು ರಾವತ್‌ ಹೇಳಿದ್ದಾರೆ.

ಹಲವು ಬಾರಿ ನೆನಪಿಸಿದ ಮೇಲೂ ಅಮರಿಂದರ್‌ ಅವರು, ಮಾದಕ ವಸ್ತುಗಳು ಹಾಗೂ ವಿದ್ಯುತ್‌
ನಂಥ ವಿಷಯಗಳ ಬಗ್ಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾದರು ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಪಕ್ಷದ ಶಾಸಕರು, ಸಚಿವರ, ನಾಯಕರು ಸೇರಿದಂತೆ ಯಾರ ಸಲಹೆಗೂ ಅವರಲ್ಲಿ ಬೆಲೆ ಇರಲಿಲ್ಲ. ಅವರ ಮನೆಯಲ್ಲಿ ಹಲವು ಬಾರಿ ಚರ್ಚೆ ನಡೆಸಿದ್ದೇನೆ. ಹೈಕಮಾಂಡ್‌ನ 18 ಅಂಶಗಳ ಅಜೆಂಡಾದಲ್ಲಿ ಐದನ್ನಾದರೂ ಅನುಷ್ಠಾನಕ್ಕೆ ತರುವ ಬಗ್ಗೆ ಆ ಚರ್ಚೆ ನಡೆದಿತ್ತು. ಅದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಒಂದೂ ಆಗಲಿಲ್ಲ’ ಎಂದು ರಾವತ್‌ ಹೇಳಿದರು.

ಅವಮಾನವಲ್ಲದೇ ಮತ್ತೇನು?ಅಮರಿಂದರ್‌ ಸಿಂಗ್‌

ಚಂಡೀಗಡ : ತಮ್ಮ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಮಾಡಿರುವ ಆಪಾದನೆ
ಗಳಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ತಮ್ಮನ್ನು ಅವಮಾನಿಸಿಲ್ಲ ಎನ್ನುವುದಾದರೆ, ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಲು ನವಜೋತ್‌ ಸಿಂಗ್‌ ಸಿಧುಗೆ ಅವಕಾಶ ಕೊಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ತಮ್ಮ ನೇತೃತ್ವದ ಸರ್ಕಾರವನ್ನು ದುರ್ಬಲಗೊಳಿಸಲು ಸಿಧು ನೇತೃತ್ವದ ಬಂಡಾಯ ಶಾಸಕರಿಗೆ ಅವಕಾಶ ಕೊಟ್ಟಿದ್ದೇಕೆ? ಸಿಧುಗೆ ಪಕ್ಷದ ಮೇಲೆ ಏನು ಹಿಡಿತವಿದೆ? ಪಕ್ಷದ ನಾಯಕತ್ವದ ನಿಲುವುಗಳ ಬಗ್ಗೆ ತಮ್ಮನ್ನು ಕತ್ತಲಲ್ಲಿ ಇಟ್ಟಿದ್ದೇಕೆ?‌ ಎಂದು ಅಮರಿಂದರ್‌ಹರಿಹಾಯ್ದಿದ್ದಾರೆ.‌

‘ನನ್ನ ಕಡುವಿರೋಧಿಗಳು ಕೂಡ ನನ್ನ ಜಾತ್ಯತೀತ ನಿಲುವುಗಳ ಬಗ್ಗೆ ಸಂದೇಹ ಪಡಲಾರರು. ಆದರೆ, ರಾವತ್‌ ಅವರಂಥ ಹಿರಿಯ ನಾಯಕರು ಸಂಶಯಿಸಿದರು. ಆದರೆ, ಇದಕ್ಕಾಗಿ ನನಗೆ ಈಗ ಆಶ್ಚರ್ಯವಾಗುತ್ತಿಲ್ಲ. ಏಕೆಂದರೆ, ಇಷ್ಟು ವರ್ಷಗಳವರೆಗೆ ನಾನು ಶ್ರದ್ಧೆ ಇಟ್ಟಿದ್ದ ಪಕ್ಷದಲ್ಲಿಯೇ ನನ್ನ ಬಗ್ಗೆ ನಂಬಿಕೆ –ಗೌರವ ಇರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ’ ಎಂದಿದ್ದಾರೆ.

‘ನನ್ನನ್ನು ಯಾವ ಬಗೆಯಲ್ಲಿ ಅವಮಾನಿಸಲಾಗಿತ್ತು ಎಂಬುದನ್ನು ತಿಳಿದೂ ರಾವತ್‌ ಇಂಥ ಆರೋಪ ಮಾಡು
ತ್ತಿದ್ದಾರೆ ಎಂದರೆ, ಇದು ಅವಮಾನವಲ್ಲದೇ ಮತ್ತೇನು’ಎಂದು ಕೇಳಿದ್ದಾರೆ.

‘ಯಾವುದೋ ಒತ್ತಡ’ ದಿಂದ ಇಂಥ ಹೇಳಿಕೆ ನೀಡಿದ್ದಾರೆ ಎಂಬ ರಾವತ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮರಿಂದರ್, ‘ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮೂರು ವಾರಗಳ ಮೊದಲೇ ನಾನು ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೆ. ಆದರೆ, ಅವರು ಮುಂದುವರಿಯುವಂತೆ ಸೂಚಿಸಿದ್ದರು. ನನಗಿದ್ದ ಒಂದೇ ಒತ್ತಡ ಎಂದರೆ, ಮೇಲಿಂದ ಮೇಲೆ ಅಪಮಾನಗಳನ್ನು ಅನುಭವಿಸಿಯೂ ಕಾಂಗ್ರೆಸ್‌ಗೆ ನಿಷ್ಠನಾಗಿ ಇದ್ದದ್ದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT