ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕ್ಕಾಗಿ ಒಂದಾದ ಬಿಜೆಪಿ–ಫೇಸ್‌ಬುಕ್: ಜುಕರ್‌ಬರ್ಗ್‌ಗೆ ಕಾಂಗ್ರೆಸ್ ಪತ್ರ

Last Updated 29 ಆಗಸ್ಟ್ 2020, 12:12 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಮತ್ತು ಫೇಸ್‌ಬುಕ್ ನಡುವೆ ಲಾಭಕ್ಕಾಗಿ‌ ಕೊಡುಕೊಳ್ಳುವಿಕೆಯ ಸಂಬಂಧ ಏರ್ಪಟ್ಟಿದೆ ಎಂದು ಆರೋಪಿಸಿ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಕಾಂಗ್ರೆಸ್‌ ಪತ್ರ ಬರೆದಿದೆ. ಈ ಸಂಬಂಧ ತನಿಖೆ ನಡೆಸಲು ಸಂಸ್ಥೆ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡುವಂತೆ ಒತ್ತಾಯಿಸಿದೆ.

‘ಟೈಮ್‌ ನಿಯತಕಾಲಿಕೆಯಲ್ಲಿ ಆಗಸ್ಟ್‌ 27, 2020ರಂದು ಪ್ರಕಟವಾಗಿದ್ದ ಲೇಖನದ ಬಗ್ಗೆ ನಿಮ್ಮ ಗಮನ ಸೆಳದಿದ್ದೇವೆ. ಅದು,ಪಕ್ಷಪಾತ ನಡೆಸುತ್ತಿರುವುದಕ್ಕೆ ಸಾಕ್ಷ್ಯ ಹಾಗೂ ಹೆಚ್ಚಿನ ವಿವರಗಳನ್ನೊಳಗೊಂಡಂತೆಫೇಸ್‌ಬುಕ್‌ ಇಂಡಿಯಾ ಮತ್ತು ಆಡಳಿತ ಪಕ್ಷ ಬಿಜೆಪಿ ನಡುವಣ ವಿನಿಮಯದ ಸಂಬಂಧ ಏರ್ಪಟ್ಟಿರುವುದನ್ನು ಬಹಿರಂಗಪಡಿಸಿದೆ’ ಎಂದು ಉಲ್ಲೇಖಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಅವರು ಜುಕರ್‌ಬರ್ಗ್‌ಗೆ ಪತ್ರಬರೆದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ವೇಣುಗೋಪಾಲ್‌, ಭಾರತದಲ್ಲಿ ವಿದೇಶಿ ಕಂಪೆನಿಯ ಕಾರ್ಯಾಚರಣೆಯ ಉತ್ಸಾಹ ಮತ್ತು ಕಾನೂನಿನ ಉಲ್ಲಂಘನೆಯಾಗುತ್ತಿದೆ. ಇದು ಆತಂಕಕಾರಿ ನಡೆಯಾಗಿದೆ ಎಂಬುದನ್ನು ಲೇಖನದಲ್ಲಿ ಒತ್ತಿ ಹೇಳಲಾಗಿದೆ ಎಂದಿದ್ದಾರೆ.

‘ಭಾರತದಲ್ಲಿ ಮುಂದಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ನ ನಿರ್ಣಾಯಕ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ಪರವಾನಗಿ ಪಡೆಯುವುದಕ್ಕೆ ಪ್ರತಿಯಾಗಿ ತನ್ನ‌ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಅವಕಾಶವನ್ನು ಬಿಜೆಪಿಗೆ ನೀಡಲಾಗಿದೆ. ದೇಶದಲ್ಲಿ ನಿಮ್ಮ ಕಂಪೆನಿಯ ನಾಯಕತ್ವ ತಂಡದಲ್ಲಿನ ಒಬ್ಬರಿಗಿಂತ ಹೆಚ್ಚು ಜನರು ಬಿಜೆಪಿ ಪರವಾಗಿ ಪಕ್ಷಪಾತದಲ್ಲಿ ತೊಡಗಿದ್ದಾರೆ. ಸಮಸ್ಯೆ ತುಂಬಾ ದೊಡ್ಡದಾಗಿದ್ದು, ವ್ಯಾಪಕವಾಗುತ್ತಿದೆ’ ಎಂದು ಪತ್ರದಲ್ಲಿ ಬರೆದಿರುವುದನ್ನು ಓದಿದ್ದಾರೆ.

ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಒಡೆತನದ ಸಂಸ್ಥೆಯಾಗಿದೆ.

‘ನಿಮ್ಮ ಭಾರತೀಯ ತಂಡವು 40 ಕೋಟಿ ಭಾರತೀಯರು ಬಳಸುವ ವಾಟ್ಸ್ಆ್ಯಪ್‌ ವೇದಿಕೆಯನ್ನು ದ್ವೇಷದ ಮಾತುಗಳ ಸ್ವಾಧೀನಕ್ಕೆ ಸ್ವಇಚ್ಛೆಯಿಂದ ಒಳಪಡಿಸಿದೆ. ಇದರ ಪರಿಣಾಮವಾಗಿ ದೇಶದ ಸಾಮಾಜಿಕ ಸಾಮರಸ್ಯವನ್ನು ಕತ್ತರಿಸಲಾಗುತ್ತದೆ’ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮುಂದುವರಿದು,‘ಈ ಹೊಸ ಬೆಳವಣಿಗೆ ಮತ್ತು ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಹಾಗೂ ದೇಶದಲ್ಲಿ ನಿಮ್ಮ ಕಾರ್ಯಾಚರಣೆಯಲ್ಲಿ ಕೊಳಕನ್ನು ತಡೆಯಲು ಕಂಪೆನಿ ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಅದನ್ನು ನೀವು ನಮಗೆ ತಿಳಿಸಬೇಕು ಎಂದು ದೇಶದ ಪ್ರಧಾನ ವಿರೋಧ ಪಕ್ಷವಾಗಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಪಕ್ಷವಾಗಿ ನಿಮ್ಮನ್ನು ಕೋರುತ್ತೇವೆ’ ಎಂದೂ ಒತ್ತಾಯಿಸಿದ್ದಾರೆ.

‘ವಿದೇಶಿ ಕಂಪನಿಯೊಂದು ಖಾಸಗಿ ಲಾಭದ ಅನ್ವೇಷಣೆಗಾಗಿ ನಮ್ಮ ದೇಶದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವಂತಿಲ್ಲ’ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್‌ ಈ ಹಿಂದೆ ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಕಟವಾಗಿದ್ದ ‘ಭಾರತದ ರಾಜಕೀಯದ ಜೊತೆಫೇಸ್‌ಬುಕ್‌ನ ದ್ವೇಷ ಭಾಷಣ ನಿಯಮ ಘರ್ಷಣೆ’ ಶೀರ್ಷಿಕೆಯ ಲೇಖನವನ್ನು ಉಲ್ಲೇಖಿಸಿಆಗಸ್ಟ್‌ 17ರಂದುಜುಕರ್‌ಬರ್ಗ್‌ಗೆ ಪತ್ರ ಬರೆದಿತ್ತು. ಆ ಬಗ್ಗೆಯೂ ಮಾತನಾಡಿರುವ ವೇಣುಗೋಪಾಲ್‌‌, ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ಲೇಖನವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಫೇಸ್‌ಬುಕ್‌ ಇಂಡಿಯಾ ತಂಡದ ‘ನಿರ್ದಯವಾದ ಪಕ್ಷಪಾತ ಮತ್ತು ಹಸ್ತಕ್ಷೇಪ’ವನ್ನು ಸ್ಪಷ್ಟವಾಗಿ ವಿವರಿಸಿದೆ ಎಂದು ಆರೋಪಿಸಿದ್ದಾರೆ.

ವಾಟ್ಸ್‌ಆ್ಯಪ್‌ ಮೇಲೆ ಬಿಜೆಪಿಯ ಹಿಡಿತವಿದೆ. ಪಾವತಿ ಸೇವೆಗಳಿಗೆ ಸಂಬಂಧಿಸಿದ ತನ್ನ ಮುಂದಿನ ಯೋಜನೆಗಳನ್ನು ಭಾರತದಲ್ಲಿ ಜಾರಿಗೊಳಿಸಲು ವಾಟ್ಸ್‌ಆ್ಯಪ್‌ಗೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇದೇ ದಿನ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT