ಗುರುವಾರ , ಮೇ 13, 2021
19 °C
ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಆದೇಶ ಬಿಡುಗಡೆ

ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್‌ ಪರಿಗಣಿಸಿ -ಸುಪ್ರೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani
ನವದೆಹಲಿ: ದೇಶದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಗೆ ಕಡಿವಾಣ ಹಾಕಲು ‘ಸಾರ್ವಜನಿಕ ಹಿತಾಸಕ್ತಿ ದೃಷ್ಟಿ’ಯಿಂದ ಲಾಕ್‌ಡೌನ್‌ ಹೇರುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
 
ಮೂವರು ಸದಸ್ಯರ ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಮೂರ್ತಿ ಡಿ.ವೈಚಂದ್ರಚೂಡ್‌ ಅವರು ಈ ಮಾತು ಹೇಳಿದರು. ಹೆಚ್ಚುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಭವಿಷ್ಯದ ಕಾರ್ಯಸೂಚಿ, ಕಾರ್ಯಕ್ರಮಗಳ ಕುರಿತು ಮೇ 10ರೊಳಗೆ ವರದಿ ಸಲ್ಲಿಸಬೇಕು ಎಂದು ಪೀಠ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸೂಚಿಸಿತು.
 
ಸೋಂಕು ತಡೆ ಕ್ರಮವಾಗಿ ವಿವಿಧ ರಾಜ್ಯಗಳಲ್ಲಿ ಕರ್ಫ್ಯೂಜಾರಿ ಸೇರಿದಂತೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿರುವಂತೆಯೇ ಸುಪ್ರೀಂ ಕೋರ್ಟ್ ಈ ಸಲಹೆ ನೀಡಿದೆ. ಸ್ವಯಂಪ್ರೇರಿತವಾಗಿ ಕೈಗೊಂಡ ಪ್ರಕರಣ ಕುರಿತು ಭಾನುವಾರ ಆದೇಶವನ್ನು ಬಿಡುಗಡೆ ಮಾಡಲಾಗಿದೆ.
 
‘ಲಾಕ್‌ಡೌನ್‌ನಿಂದಾಗುವ ಮುಖ್ಯವಾಗಿ ಸಮಾಜದ ನಿರ್ಲಕ್ಷ್ಯಿತ ಸಮುದಾಯಗಳ ಮೇಲೆ, ಒಟ್ಟಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಅರಿವು ನಮಗಿದೆ. ಒಂದು ವೇಳೆ ಲಾಕ್‌ಡೌನ್‌ ಅನ್ನು ಜಾರಿಗೊಳಿಸಿದರೆ, ಈ ವರ್ಗಗಳ ಅಗತ್ಯಗಳನ್ನು ಈಡೇರಿಸಲು ಸೂಕ್ತ ಕ್ರಮ ಜರುಗಿಸಬೇಕು‘ ಎಂದು ಸ್ಪಷ್ಟಪಡಿಸಿದೆ.
 
ಅಗತ್ಯ ಔಷಧಗಳು, ಆಮ್ಲಜನಕ ಮತ್ತು ಲಸಿಕೆಗಳನ್ನು ಖರೀದಿಸುವುದಕ್ಕೆ ಇರುವ ನೀತಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದ ಸುಪ್ರೀಂ ಕೋರ್ಟ್, ಆರೋಗ್ಯ ಆರೈಕೆ ಸಿಬ್ಬಂದಿ, ವೈದ್ಯರ ಕುಶಲವನ್ನು ಗಮನಿಸಬೇಕು ಎಂದು ಹೇಳಿದೆ.
 
‘ಇಂಥ ಸುರಕ್ಷತಾ ಕ್ರಮಗಳು ಕೇವಲ ವೈದ್ಯರಿಗಷ್ಟೇ ಅಲ್ಲ, ದಾದಿಯರು, ಆಸ್ಪತ್ರೆ ಸಿಬ್ಬಂದಿ, ಆಂಬುಲೆನ್ಸ್‌ ಸಿಬ್ಬಂದಿ, ಸ್ವಚ್ಚತಾ ಸಿಬ್ಬಂದಿ, ಚಿತಾಗಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಿತವನ್ನು ಈ ಪಿಡುಗಿನ ಸಂದರ್ಭದಲ್ಲಿ ಗಮನಿಸಬೇಕು’ ಎಂದು ತಿಳಿಸಿತು.
ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್ ಮತ್ತ ಎಸ್.ರವೀಂದ್ರ ಭಟ್ ಅವರಿದ್ದ ಪೀಠವು, ಆರೋಗ್ಯ ಕಾರ್ಯಕರ್ತರಿಗೆ ಜಾರಿಗೊಳಿಸಿದ್ದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್‌ ವಿಮಾ ಭದ್ರತೆ ಯೋಜನೆಯ ಅವಧಿಯನ್ನು ಒಂದು ವರ್ಷ ವಿಸ್ತರಿಸಿರುವುದನ್ನು ಗಣನೆಗೆ ತೆಗೆದುಕೊಂಡಿತು.
ಯೋಜನೆಯಡಿ 168 ವೈದ್ಯರು ಸೇರಿದಂತೆ ಕೇವಲ 287 ಜನರ ಕುಟುಂಬಗಳಿಗೆ ಸಂಬಂಧಿಸಿದ ಕ್ಲೇಮುಗಳನ್ನಷ್ಟೇ ಇತ್ಯರ್ಥಪಡಿಸಿರುವುದನ್ನೂ ಅದು ಉಲ್ಲೇಖಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು