ಶನಿವಾರ, ಏಪ್ರಿಲ್ 17, 2021
27 °C
ಮುಖ್ಯ ಕಾರ್ಯದರ್ಶಿಗಳ ಜೊತೆ ಸಂವಾದ

ಕೋವಿಡ್‌: ನಿಯಮ ಪಾಲಿಸಲು ಕೇಂದ್ರ ಸರ್ಕಾರ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಿಯಮಾವಳಿ ಪಾಲಿಸುವುದು, ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಜರುಗಿಸುವುದು ಹಾಗೂ ವೇಗವಾಗಿ ಕೋವಿಡ್‌ ಹರಡುವ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಶನಿವಾರ ರಾಜ್ಯಗಳಿಗೆ ಸೂಚಿಸಿದೆ.

ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದನ್ನು ಮನಗಂಡ ಕೇಂದ್ರವು ಅಂಥ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಂವಾದ ನಡೆಸಿದೆ. ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದರು. ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಮಧ್ಯಪ್ರದೇಶ, ಛತ್ತೀಸಗಡ, ಪಶ್ಚಿಮ ಬಂಗಾಳ, ತೆಲಂಗಾಣ ಹಾಗೂ ಜಮ್ಮು–ಕಾಶ್ಮೀರದ ಮುಖ್ಯಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

‘ಹೆಚ್ಚಿನ ಪ್ರಕರಣ ವರದಿಯಾಗುವ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕಾ ಕಾರ್ಯಕ್ರಮ ಕೈಗೊಳ್ಳಬೇಕು. ಹಾಟ್‌ಸ್ಪಾಟ್ ಗುರುತಿಸಬೇಕು ಮತ್ತು ರೂಪಾಂತರಿತ ವೈರಾಣು ಪ್ರಕರಣಗಳ ಮೇಲೆ ನಿಗಾ ಇರಿಸಬೇಕು’ ಎಂದು ಪರಿಶೀಲನಾ ಸಭೆಯಲ್ಲಿ ರಾಜ್ಯಗಳಿಗೆ ಸೂಚಿಸಲಾಯಿತು.

ಜಿಲ್ಲೆಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹೆಚ್ಚು ಪ್ರಕರಣಗಳು ದೃಢಪಡುತ್ತಿರುವ ಜಿಲ್ಲೆಗಳಲ್ಲಿ ಕಣ್ಗಾವಲು ವ್ಯವಸ್ಥೆ ಹೆಚ್ಚಿಸಿ, ಕಟ್ಟುನಿಟ್ಟಿನ ನಿಯಂತ್ರಣ ಹೇರಬೇಕು ಎಂದು ಕೇಂದ್ರ ಸೂಚಿಸಿತು.

ಮಹಾರಾಷ್ಟ್ರದಲ್ಲಿ ಶನಿವಾರ 8,333 ಹೊಸ ಪ್ರಕರಣ ವರದಿಯಾಗಿವೆ. ಕೇರಳದಲ್ಲಿ 3,671, ಪಂಜಾಬ್‌ನಲ್ಲಿ 622 ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ಪರೀಕ್ಷೆ ಮುಂದುವರಿಕೆ: ವಿಮಾನ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ನಿಲ್ಲಿಸುವ ಆದೇಶವನ್ನು ವಾಪಸ್ ಪಡೆದಿರುವ ಅಸ್ಸಾಂ ಸರ್ಕಾರ, ತಪಾಸಣೆ ಮುಂದುವರಿಸಲು ನಿರ್ಧರಿಸಿದೆ. ಐದು ರಾಜ್ಯಗಳಿಂದ ವಿಮಾನ ಅಥವಾ ರೈಲಿನ ಮೂಲಕ ಅಸ್ಸಾಂಗೆ ಬರುವ ಜನರಿಗೆ ವಾರಪೂರ್ತಿ ಏಕಾಂತವಾಸ  (ಐಸೊಲೇಷನ್‌) ಕಡ್ಡಾಯ ಎಂದು ಒಡಿಶಾ ಸರ್ಕಾರ ತಿಳಿಸಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್, ಮಧ್ಯಪ್ರದೇಶ ಮತ್ತು ಛತ್ತೀಸಗಡ ರಾಜ್ಯಗಳಿಂದ ಬರುವರಿಗೆ ಇದು ಅನ್ವಯವಾಗಲಿದೆ.

ರಾತ್ರಿ ಕರ್ಫ್ಯೂ ವಿಸ್ತರಣೆ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಅಹಮದಾಬಾದ್ ಸೇರಿದಂತೆ ಗುಜರಾತ್‌ನ ನಾಲ್ಕು ಪ್ರಮುಖ ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಅಹಮದಾಬಾದ್, ಸೂರತ್, ವಡೋದರ ಮತ್ತು ರಾಜ್‌ಕೋಟ್‌ನಲ್ಲಿ ಇನ್ನೂ 15 ದಿನಗಳ ಕಾಲ ರಾತ್ರಿ ಕರ್ಫ್ಯೂ ಮುಂದುವರಿಯಲಿದೆ.

ಮಹಾರಾಷ್ಟ್ರದ ಅಮರಾವತಿ ಹಾಗೂ ಅಚಲಾಪುರ ಪಟ್ಟಣಗಳಲ್ಲಿ ಲಾಕ್‌ಡೌನ್‌ ಅನ್ನು ಮಾರ್ಚ್‌ 7ರ ವರೆಗೆ ವಿಸ್ತರಿಸಲಾಗಿದೆ.

ಮೂರು ಛತ್ರಗಳ ಮೇಲೆ ಎಫ್‌ಐಆರ್

ಮುಂಬೈ: ಮದುವೆ ಕಾರ್ಯಕ್ರಮದಲ್ಲಿ ನಿಗದಿಗಿಂತ ಹೆಚ್ಚು ಜನರು ಸೇರಲು ಅವಕಾಶ ಮಾಡಿಕೊಟ್ಟ ಮೂರು ಕಲ್ಯಾಣ ಮಂಟಪಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸಿಎಸ್‌ಟಿ ರಸ್ತೆಯ ಒಂದು ಛತ್ರದಲ್ಲಿ 200 ಜನರು ಸೇರಿದ್ದರು ಎಂದು ನಗರಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೇರಿದ್ದ ಜನರು ಮಾಸ್ಕ್ ಧರಿಸಿರಲಿಲ್ಲ. ಅಂತರ ಕಾಯ್ದುಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ. ವಕೋಲಾ ಪೊಲೀಸ್ ಠಾಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು