ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ 2ನೇ ಹಂತ: ನೋಂದಣಿ ಹೇಗೆ?

ಆನ್‌ಲೈನ್‌ ಜತೆಗೆ ನಿಯೋಜಿತ ಕೇಂದ್ರಗಳಲ್ಲಿಯೂ ಹೆಸರು ಸೇರ್ಪಡೆಗೆ ಅವಕಾಶ
Last Updated 26 ಫೆಬ್ರುವರಿ 2021, 18:49 IST
ಅಕ್ಷರ ಗಾತ್ರ

ನವದೆಹಲಿ: ದೇಶದ 27 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ, ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನ ಆರಂಭಿಸಲು ದೇಶವು ಸಿದ್ಧತೆ ಮಾಡಿಕೊಳ್ಳುತ್ತಿದೆ. ಎರಡನೇ ಹಂತದ ಈ ಅಭಿಯಾನದಲ್ಲಿ, ಲಸಿಕೆ ಹಾಕಿಸಿಕೊಳ್ಳಲು ಇಚ್ಛಿಸುವವರಿಗೆ ಹೆಸರು ನೋಂದಾಯಿಸಲು ಮೂರು ಆಯ್ಕೆಗಳನ್ನು ಕೇಂದ್ರದ ಆರೋಗ್ಯ ಸಚಿವಾಲಯವು ನೀಡಿದೆ.

ಲಸಿಕೆ ಪಡೆಯಲು ಇಚ್ಛೆ ಇರುವವರು‘ಕೋ–ವಿನ್‌ 2.0’ ಆನ್‌ಲೈನ್‌ ಸಾಫ್ಟ್‌ವೇರ್‌ ಮೂಲಕ ಹೆಸರು ನೋಂದಾಯಿಸಬಹುದು ಅಥವಾ ದೇಶದಾದ್ಯಂತ ಇರುವ 30,000 ಲಸಿಕಾ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಹೋಗಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು. ಇದಲ್ಲದೆ, ರಾಜ್ಯ ಸರ್ಕಾರಗಳೇ ಲಸಿಕೆಗೆ ಅರ್ಹರಾದವರ ಗುಂಪುಗಳನ್ನು ನೋಂದಾಯಿಸಿ, ಅವರನ್ನು ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಬಹುದಾಗಿದೆ.

‘ಮೇಲ್ದರ್ಜೆಗೆ ಏರಿಸಿರುವ ಸಾಫ್ಟ್‌ವೇರ್‌ ಕುರಿತ ಮಾಹಿತಿ ಹಾಗೂ ಅಭಿಯಾನಕ್ಕೆ ಸಂಬಂಧಿಸಿದ ಇತರ ಎಲ್ಲಾ ವಿವರಗಳನ್ನು ರಾಜ್ಯಗಳಿಗೆ ನೀಡಲಾಗಿದೆ’ ಎಂದು ಕೇಂದ್ರದ ಆರೋಗ್ಯ ಕಾರ್ಯದರ್ಶಿರಾಜೇಶ್‌ ಭೂಷಣ್‌ ಹಾಗೂ ಲಸಿಕಾ ನಿರ್ವಹಣೆಯ ಉಸ್ತುವಾರಿ ಸಮಿತಿಯ ಅಧ್ಯಕ್ಷ ಆರ್‌.ಎಸ್‌. ಶರ್ಮಾ ತಿಳಿಸಿದ್ದಾರೆ.

20 ಸಾವಿರ ಸರ್ಕಾರಿ ಆಸ್ಪತ್ರೆಗಳು ಹಾಗೂ 10 ಸಾವಿರ ಖಾಸಗಿ ಆಸ್ಪತ್ರೆಗಳ ಮೂಲಕ ದೇಶದ ನಾಗರಿಕರಿಗೆ ಲಸಿಕೆಗಳನ್ನು ನೀಡುವ ಅಭಿಯಾನವನ್ನು ಮಾರ್ಚ್‌ 1ರಿಂದ ಆರಂಭಿಸಲು ಈಚೆಗೆ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇದಕ್ಕಾಗಿ ಸರ್ಕಾರವು ₹ 35,000 ಕೋಟಿ ಮೀಸಲಿಟ್ಟಿದೆ.

ಈ ಹಂತದಲ್ಲಿ, 60 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಆರೋಗ್ಯ ಸಂಬಂಧಿ ಹಲವು ಸಮಸ್ಯೆಗಳಿಂದ ಬಳಲುವ 45– 59 ವರ್ಷದೊಳಗಿನ ವಯಸ್ಸಿನವರು ಮಾತ್ರ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರಿ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಆದರೆ, ನೋಂದಾಯಿತ ಖಾಸಗಿ ಕೇಂದ್ರಗಳಿಂದ ಲಸಿಕೆ ಪಡೆಯುವವರು ಪೂರ್ವನಿರ್ಧಾರಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ. ಆದರೆ, ಶುಲ್ಕ ಎಷ್ಟು ಎಂದು ಸರ್ಕಾರ ಇನ್ನೂ ಘೋಷಿಸಿಲ್ಲ.

ಅರ್ಹ ಫಲಾನುಭವಿಗಳು ಆಧಾರ್‌, ಮತದಾರರ ಗುರುತಿನ ಚೀಟಿ ಅಥವಾ ಇನ್ಯಾವುದೇ ಗುರುತಿನ ಚೀಟಿಯನ್ನು ನೀಡಬೇಕಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಮೊದಲ ಹಂತದ ಅಭಿಯಾನದಲ್ಲಿ ಲಸಿಕೆ ಹಾಕಿಸಿಕೊಳ್ಳದವರೂ ಈ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಇಂಥವರು ತಮ್ಮ ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನು ಸಲ್ಲಿಸಬೇಕಾಗುತ್ತದೆ.

ಕೋ–ವಿನ್‌ ಸಾಫ್ಟ್‌ವೇರ್ ಅನ್ನು ಮೇಲ್ದರ್ಜೆಗೆ ಏರಿಕೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇನ್ನು ಮುಂದೆ ಶನಿವಾರ ಹಾಗೂ ಭಾನುವಾರಗಳಂದು ಲಸಿಕಾ ಕಾರ್ಯಕ್ರಮ ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಕಾರ್ಯಸೂಚಿ ವಿಸ್ತರಣೆ: ಕೋವಿಡ್‌–19 ಕಣ್ಗಾವಲು, ನಿಯಂತ್ರಣ ಕ್ರಮಗಳನ್ನು ಒಳಗೊಂಡ ಕಾರ್ಯಸೂಚಿಯನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. ‘ಕೋವಿಡ್‌–19 ಸಕ್ರಿಯ ಪ್ರಕರಣಗಳು ಹಾಗೂ ಹೊಸ ಸೋಂಕಿನ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಪಿಡುಗಿನಿಂದ ಮುಕ್ತಿ ಪಡೆಯಲು ಇದರ ಮೇಲೆ ಕಣ್ಗಾವಲು ಮುಂದುವರಿಸುವುದು ಅಗತ್ಯ’ ಎಂದು ಸಚಿವಾಲಯ ತಿಳಿಸಿದೆ.

ಇನ್ನೂ 40 ರಾಷ್ಟ್ರಗಳಿಗೆ ರಫ್ತು

‘ಭಾರತವು 70 ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಯನ್ನು ರಫ್ತು ಮಾಡುತ್ತಿದ್ದು, ಈ ಪಟ್ಟಿಗೆ ಇನ್ನೂ 40 ರಾಷ್ಟ್ರಗಳನ್ನು ಸೇರ್ಪಡೆ ಮಾಡಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯ ಹಾಗೂ ಪುಣೆ ಅಂತರರಾಷ್ಟ್ರೀಯ ಕೇಂದ್ರಗಳ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಏಷ್ಯಾ ಆರ್ಥಿಕ ಸಂವಾದ–2021’ರ ಐದನೇ ಆವೃತ್ತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘70 ರಾಷ್ಟ್ರಗಳಿಗೆ ಲಸಿಕೆಯನ್ನು ರಫ್ತು ಮಾಡುವ ತನ್ನ ಮಾತನ್ನು ಭಾರತ ಉಳಿಸಿಕೊಂಡಿದೆ. ಅಷ್ಟೇ ಅಲ್ಲ, ಈ ಪಟ್ಟಿಗೆ ಇನ್ನೂ 40 ರಾಷ್ಟ್ರಗಳನ್ನು ಶೀಘ್ರದಲ್ಲೇ ಸೇರಿಸಲಿದೆ. ಆರಂಭದಲ್ಲಿಯೇ ಲಾಕ್‌ಡೌನ್‌, ಅಂತರ ಕಾಯ್ದುಕೊಳ್ಳುವುದೇ ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಾರತವು ಸಂಭವಿಸಬಹುದಾದ ಭಾರಿ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.

ಸಕ್ರಿಯ ಪ್ರಕರಣ ಇಳಿಕೆ

ಶುಕ್ರವಾರ ಮುಂಜಾನೆಗೆ ಅಂತ್ಯವಾಗುವ 24 ಗಂಟೆಗಳ ಅವಧಿಯಲ್ಲಿ ದೇಶದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌ನಿಂದ ಒಂದೂ ಸಾವು ಸಂಭವಿಸಿಲ್ಲ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 1,000ಕ್ಕೂ ಕಡಿಮೆ ಇದೆ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ತಿಳಿಸಿದೆ. ಕೆಲವು ರಾಜ್ಯಗಳಲ್ಲಿ ಸೋಂಕಿತರ ಪ್ರಕರಣಗಳು ಏರಿಕೆಯಾಗುತ್ತಿದ್ದರೂ, ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 1,55,986ಕ್ಕೆ ಇಳಿದಿದೆ. ಇದು ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆಯ ಶೇ 1.41ರಷ್ಟಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT