ಸೋಮವಾರ, ಜನವರಿ 18, 2021
25 °C

ಎಲ್ಲರಿಗೂ ಲಸಿಕೆ ನೀಡಲು ಭಾರತ ಶಕ್ತವಾಗಿದೆ: ಕೇಂದ್ರ ಸಚಿವ ಆರೋಗ್ಯ ಡಾ.ಹರ್ಷವರ್ಧನ್

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ‘ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ದೇಶದ ಎಲ್ಲರಿಗೂ ಲಸಿಕೆ ನೀಡಲು ಭಾರತ ಶಕ್ತವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ನಿರ್ದಿಷ್ಟ ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯಕ್ಕೆ ಕೇಂದ್ರ ಚಾಲನೆ ನೀಡಿದ್ದು, ಅವರಿಗೆ ವಿದ್ಯುನ್ಮಾನ ಪ್ರಮಾಣಪತ್ರ ನೀಡಲಿದೆ ಎಂದು ಹೇಳಿದರು.

ಇಲ್ಲಿನ ರಾಜೀವ್‌ಗಾಂಧಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌–19 ಲಸಿಕೆ ನೀಡುವ ತಾಲೀಮು ಪರಿಶೀಲನೆ ಬಳಿಕ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು.

ಅಲ್ಪಾವಧಿಯಲ್ಲಿಯೇ ಕೋವಿಡ್‌ –19ಕ್ಕೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಭಾರತ ಶಕ್ತವಾಗಿದೆ. ಸದ್ಯ, ಎರಡು ಲಸಿಕೆಗಳಿಗೆ ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಮುಂದಿನ ನಾಲ್ಕು ಐದು ದಿನಗಳು ಅಥವಾ ಆದಷ್ಟು ಶೀಘ್ರದಲ್ಲಿ ನಾವು ಆದ್ಯತೆ ಗುಂಪುಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಲಿದ್ದೇವೆ. ಈಗಾಗಲೇ ಪೂರಕ ಯೋಜನೆಗಳನ್ನು ಸರ್ಕಾರ ರೂಪಿಸಿದೆ ಎಂದು ತಿಳಿಸಿದರು.

135 ಕೋಟಿ ಜನಸಂಖ್ಯೆಯುಳ್ಳ ಭಾರತದಲ್ಲಿ ಸರ್ವರಿಗೂ ವ್ಯವಸ್ಥಿತವಾಗಿ ಲಸಿಕೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ರೂಪಾಂತರ ವೈರಸ್‌: ಸೋಂಕಿತರ ಸಂಖ್ಯೆ 82ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಈವರೆಗೆ 82 ಮಂದಿಯಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಜನವರಿ 6ರ ತನಕ 76 ಮಂದಿಯಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿತ್ತು. ಆದರೆ ಶುಕ್ರವಾರಕ್ಕೆ ಈ ಪ್ರಕರಣಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಹೇಳಿದೆ.

ಎಲ್ಲ ಸೋಂಕಿತರನ್ನು ಆಯಾ ರಾಜ್ಯ ಸರ್ಕಾರಗಳು ಗೊತ್ತುಪಡಿಸಿದ ಕೇಂದ್ರಗಳಲ್ಲಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ. ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್‌ ಮಾಡಲಾಗಿದೆ. ಅವರ ಜತೆ ಪ್ರಯಾಣಿಸಿದವರು, ಸಂಪರ್ಕಕ್ಕೆ ಬಂದ ಕುಟುಂಬದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸೋಂಕು ಪ್ರಸರಣನ್ನು ತಡೆಯುವ ನಿಟ್ಟಿನಲ್ಲಿ ಕಣ್ಗಾವಲು ಮತ್ತು ನಿಯಂತ್ರಣ ಕ್ರಮಗಳನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿದೆ. ಅಲ್ಲದೇ ಮಾದರಿಗಳನ್ನು ಐಎನ್‌ಎಸ್‌ಎಸಿಓಜಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು