ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಮಾಹಿತಿ ಕೋರಿಕೆ

ಲಸಿಕೆ ಪ್ರಯೋಗ: ಐಸಿಎಂಆರ್‌, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಲಸಿಕೆಗಳ ವೈದ್ಯಕೀಯ ಪ್ರಯೋಗಕ್ಕೆ ಸಂಬಂಧಿಸಿದ ಮಾಹಿತಿ ಬಹಿರಂಗ ಪಡಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರ, ಐಸಿಎಂಆರ್‌, ಭಾರತ್‌ ಬಯೊಟೆಕ್‌ ಹಾಗೂ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ ನೋಟಿಸ್‌ ನೀಡಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ, ‘ದೇಶದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಜನರಲ್ಲಿ ಹಿಂಜರಿಕೆ ಇದೆ. ಪ್ರತಿಯೊಬ್ಬರೂ ಲಸಿಕೆ ಪಡೆಯದ ಹೊರತು ಯಾರೂ ಸುರಕ್ಷಿತರಾಗಿ ಇರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹೀಗಾಗಿ, ಸದ್ಯಕ್ಕೆ ಈ ಬಗ್ಗೆ ಯಾವುದೇ ಆದೇಶವನ್ನು ನೀಡುವುದಿಲ್ಲ’ ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ತಿಳಿಸಿತು.

ರಾಷ್ಟ್ರೀಯ ತಾಂತ್ರಿಕ ಸಲಹಾ ಮಂಡಳಿ ಮಾಜಿ ಸದಸ್ಯ ಡಾ. ಜಾಕೋಬ್ ಪುಲಿಯೆಲ್ ಅರ್ಜಿ ಸಲ್ಲಿಸಿದ್ದಾರೆ. ಲಸಿಕೆ ಪಡೆದ ಬಳಿಕ ಉಂಟಾಗುವ ಅಡ್ಡಿಪರಿಣಾಮ ಪ್ರಕರಣಗಳ ವರದಿ ಮಾಡುವ ಬಗ್ಗೆಯೂ ಅರ್ಜಿಯಲ್ಲಿ ಮಾಹಿತಿ ಕೋರಲಾಗಿದೆ.

‘ತಮ್ಮ ಕ್ಲಿನಿಕಲ್ ಪರೀಕ್ಷೆಯ ದತ್ತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿದ್ದರೂ ಲಸಿಕೆ ತೆಗೆದುಕೊಳ್ಳುವಂತೆ ಜನರಿಗೆ ಒತ್ತಾಯಿಸಲಾಗುತ್ತಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ವೈದ್ಯಕೀಯ ಪ್ರಯೋಗ ಪೂರ್ಣಗೊಳಿಸದೇ ಅಥವಾ ದತ್ತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸದೇ ಜಾರಿಗೆ ತರಲಾಗಿದೆ. ದೇಶದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಈಗಾಗಲೇ ಕೋವಿಡ್‌ಗೆ ಒಡ್ಡಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಲಸಿಕೆ ಹಾಕುವುದು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು’ ಎಂದು ವರದಿಯನ್ನು ಉಲ್ಲೇಖಿಸಿ ಪ್ರಶಾಂತ್ ಭೂಷಣ್ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ‘ದೇಶದ ಶೇ 50ಕ್ಕಿಂತ ಹೆಚ್ಚು ಜನರಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. ಈಗ ವೈದ್ಯಕೀಯ ಪ್ರಯೋಗದ ವರದಿ ಕೇಳಿದರೆ, ಅವರ ಮನಸ್ಸಿನಲ್ಲಿ ಗೊಂದಲ ಏರ್ಪಡುವುದಿಲ್ಲವೇ? ಸಾರ್ವಜನಿಕರ ದೃಷ್ಟಿಯಿಂದ ಈ ವಿಚಾರದ ಬಗ್ಗೆ ಯೋಚಿಸಿದ್ದೀರಾ’ ಎಂದು ಪ್ರಶ್ನಿಸಿತು.

‘ದೇಶದಲ್ಲಿ ಇನ್ನೂ 4 ಲಕ್ಷ ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಕಳೆದ 100 ವರ್ಷಗಳಲ್ಲಿ ಪ್ರಪಂಚವು ಈ ರೀತಿಯ ಸಾಂಕ್ರಾಮಿಕ ರೋಗವನ್ನು ಎದುರಿಸಿರಲಿಲ್ಲ. ಮೇಲಾಗಿ ಲಸಿಕೆಗಳಿಗೆ ಭಾರಿ ಬೇಡಿಕೆಯಿದೆ’ ಎಂದು ಕೋರ್ಟ್ ಹೇಳಿತು.

‘ಸಾರ್ವಜನಿಕರ ಹಿತದೃಷ್ಟಿಯಿಂದ ಈ ವಿಷಯ ಅತ್ಯಂತ ಮಹತ್ವದ್ದಾಗಿರುವುದರಿಂದ ತಾವು  ಅರ್ಜಿ ಸಲ್ಲಿಸಿದ್ದಾಗಿ ಹೇಳಿದ ಭೂಷಣ್, ಇದು ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುವಂಥ ದ್ದಾಗಿದೆ’ ಎಂದರು.

‘ಇದು ಲಸಿಕೆ ವಿರೋಧಿಸಿ ಹಾಕಿದ ಅರ್ಜಿಯಂತೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಲಸಿಕೆ ಪಡೆಯಲು ಬಲವಂತ ಹಾಗೂ ಕಡ್ಡಾಯ ಮಾಡಿ ರುವುದಕ್ಕೆ ಹಾಗೂ ಲಸಿಕೆ ಪಡೆಯದವರ ಸಂಚಾರದ ಮೇಲೆ ನಿರ್ಬಂಧ ಹೇರಿರುವ ವಿಷಯವೂ ಇಲ್ಲಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಇತರ ಸಂಸ್ಥೆಗಳಿಗೆ ನೋಟಿಸ್‌ ನೀಡಿದ ನ್ಯಾಯಾ ಲಯವು, ಇದಕ್ಕೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿತು.

ಎನ್‌ಟಿಎಫ್‌ ಶಿಫಾರಸುಗಳ ಅನುಷ್ಠಾನ: ವರದಿ ಸಲ್ಲಿಸಲು ಕೇಂದ್ರಕ್ಕೆ ‘ಸುಪ್ರೀಂ‘ ಸೂಚನೆ:

ನವದೆಹಲಿ: ಕೋವಿಡ್‌–19ನ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಕೇಂದ್ರ ಸರ್ಕಾರವು ಏನು ಸಿದ್ಧತೆ ಮಾಡಿಕೊಂಡಿದೆ ಎಂದು ಕೇಳಿರುವ ಸುಪ್ರೀಂ ಕೋರ್ಟ್‌, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವೈದ್ಯಕೀಯ ಆಮ್ಲಜನಕ ಹಂಚಿಕೆ ಮಾಡುವ ಸಂಬಂಧ ನ್ಯಾಯಾಲಯವು ನೇಮಿಸಿದ ರಾಷ್ಟ್ರೀಯ ಕಾರ್ಯಪಡೆಯ (ಎನ್‌ಟಿಎಫ್‌) ಶಿಫಾರಸಿನ ಅನ್ವಯ ಕೈಗೊಂಡ ಕ್ರಮಗಳ ಬಗ್ಗೆ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ರಾಷ್ಟ್ರೀಯ ಕಾರ್ಯಪಡೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿರುವ ಹಿರಿಯ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರಿದ್ದು, ಸದ್ಯದ ತುರ್ತು ಅಗತ್ಯಗಳನ್ನು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ, ಅದು ನೀಡಿರುವ ಶಿಫಾರಸುಗಳನ್ನು ಕೇಂದ್ರ ಸರ್ಕಾರವು ನೀತಿ ನಿರೂಪಣಾ ಹಂತದಲ್ಲಿ ಅನುಷ್ಠಾನಗೊಳಿಸುವುದು ಅನಿವಾರ್ಯ ಎಂದು ಹೇಳಿದೆ.

ಈ ವಿಷಯದ ವಿಚಾರಣೆಯನ್ನು ಎರಡು ವಾರಗಳ ನಂತರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ಪೀಠವು, ಇದನ್ನು ಕೋವಿಡ್ ಸಿದ್ಧತೆ ಕುರಿತು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವ ವಿಷಯಗಳ ಪಟ್ಟಿಯಲ್ಲಿ ಸೇರಿಸಿತು.

ಎನ್‌ಟಿಎಫ್ ಸಮಿತಿಯು ಅಂತಿಮ ವರದಿ ಸಲ್ಲಿಸಿರುವುದನ್ನು ಹಾಗೂ ದೆಹಲಿಗೆ ವೈದ್ಯಕೀಯ ಆಮ್ಲಜನಕದ ಅಗತ್ಯತೆ ಕುರಿತು ಮೌಲ್ಯಮಾಪನ ನಡೆಸಿರುವ ಉಪ ಸಮಿತಿಯು ಮಧ್ಯಂತರ ವರದಿಯನ್ನು ಸಲ್ಲಿಸಿರುವುದನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿತು.

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ದೆಹಲಿಗೆ 700 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕ ಪೂರೈಸಬೇಕೆಂಬ ನ್ಯಾಯಾಲಯದ ನಿರ್ದೇಶನ ಪಾಲಿಸದ ಅಧಿಕಾರಿಗಳ ವಿರುದ್ಧ ದೆಹಲಿ ಹೈಕೋರ್ಟ್‌ನ ನ್ಯಾಯಾಂಗ ನಿಂದನೆ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಆಲಿಸಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು