ಮಂಗಳವಾರ, ಮೇ 18, 2021
30 °C
ಲಖನೌ, ವಾರಾಣಸಿ ಸೇರಿ ಐದು ನಗರಗಳಲ್ಲಿ ಲಾಕ್‌ಡೌನ್‌ ಆದೇಶ ಹೊರಡಿಸಿದ ಅಲಹಾಬಾದ್‌ ಹೈಕೋರ್ಟ್‌

ರೋಗಿಗಳಿಗೆ ವೈದ್ಯಕೀಯ ಸೌಲಭ್ಯ ನೀಡಲು ವಿಫಲವಾದ ಯೋಗಿ ಸರ್ಕಾರಕ್ಕೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದ ಐದು ನಗರಗಳಲ್ಲಿ ಅಲಹಾಬಾದ್‌ ಹೈಕೋರ್ಟ್‌ ಲಾಕ್‌ಡೌನ್‌ ಹೇರಿದೆ. ಕೋವಿಡ್‌ ರೋಗಿಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನೀಡುವುದಕ್ಕೆ ವಿಫಲವಾದ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಿರುವ ಕ್ರಮವನ್ನೂ ಟೀಕಿಸಿದೆ. 

ಆರೋಗ್ಯ ಸಮಸ್ಯೆಗಳು ಬಿಗಡಾಯಿಸಿದ್ದಕ್ಕಾಗಿ ಸರ್ಕಾರದ ಚುಕ್ಕಾಣಿ ಹಿಡಿದವರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್‌, ಇದೇ 26ರಿಂದ ‌ಲಖನೌ, ವಾರಾಣಸಿ, ಕಾನ್ಪುರ, ಪ್ರಯಾಗರಾಜ್‌ ಮತ್ತು ಗೋರಖಪುರದಲ್ಲಿ ಲಾಕ್‌ಡೌನ್‌ ಹೇರಲು ಸೋಮವಾರ ಆದೇಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅಜಿತ್ ಕುಮಾರ್‌ ಅವರ ಪೀಠವು ಈ ಆದೇಶ ಹೊರಡಿಸಿದೆ. 

ಅತಿ ಹೆಚ್ಚು ತೊಂದರೆಗೆ ಒಳಗಾಗಿರುವ ಜಿಲ್ಲೆಗಳಲ್ಲಿ ಸಾಂಕ್ರಾಮಿಕವು ಎಲ್ಲರಿಗೂ ಹರಡುವುದಕ್ಕೆ ಮುನ್ನ ಕೆಲವು ‘ಕಠಿಣ ಕ್ರಮ’ಗಳನ್ನು ಕೈಗೊಳ್ಳುವುದು ಅಗತ್ಯ. ಇಂತಹ ವಿಚಾರಗಳಲ್ಲಿ ನ್ಯಾಯಾಂಗವು ನಿಗಾ ವಹಿಸಬೇಕು ಎಂಬುದು ಸಾರ್ವಜನಿಕ ಹಿತಾಸಕ್ತಿಯಾಗಿದೆ. ಸಕಾಲದಲ್ಲಿ  ಕ್ರಮಗಳನ್ನು ಕೈಗೊಳ್ಳದಿದ್ದರೆ ವ್ಯವಸ್ಥೆಯು ಇನ್ನಷ್ಟು ವೈಫಲ್ಯದತ್ತ ಸಾಗುತ್ತದೆ ಎಂದು ಪೀಠವು ಹೇಳಿದೆ. 

‘ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಜನರು ಸತ್ತರೆ, ಸಾಂಕ್ರಾಮಿಕ ಆರಂಭವಾಗಿ ಒಂದು ವರ್ಷದ ನಂತರವೂ ಸಿದ್ಧತೆ ಮಾಡಿಕೊಳ್ಳದ ಸರ್ಕಾರವನ್ನೇ ಹೊಣೆ ಮಾಡಬೇಕಾಗುತ್ತದೆ. ಚುನಾವಣೆಗಾಗಿ ವೆಚ್ಚ ಮಾಡಲು ನಮ್ಮಲ್ಲಿ ಎಷ್ಟು ಹಣ ಬೇಕಿದ್ದರೂ ಇದೆ, ಆದರೆ ಸಾರ್ವಜನಿಕರ ಆರೋಗ್ಯಕ್ಕೆ ವ್ಯಯ ಮಾಡಲು ಇಲ್ಲ ಎಂದಾದರೆ ಜನರು ನಮ್ಮನ್ನು ನೋಡಿ ನಗುತ್ತಾರೆ’ ಎಂದು ಹೇಳಿದೆ. 

ಲಾಕ್‌ಡೌನ್‌ನಿಂದಾಗಿ ಅರ್ಥ ವ್ಯವಸ್ಥೆಗೆ ತೊಂದರೆಯಾಗುತ್ತದೆ ಎಂಬ ಸರ್ಕಾರದ ಸಮರ್ಥನೆಯನ್ನೂ ನ್ಯಾಯ
ಪೀಠವು ಗಣನೆಗೆ ತೆಗೆದುಕೊಂಡಿಲ್ಲ. ‘ಅರ್ಥ ವ್ಯವಸ್ಥೆ, ಅರ್ಥ ವ್ಯವಸ್ಥೆ ಎಂಬುದೇ ಸರ್ಕಾರದ ರಾಗವಾಗಿದೆ. ಆಮ್ಲಜನಕ ಮತ್ತು ಔಷಧ ಬೇಕಿರುವ ವ್ಯಕ್ತಿಗೆ ನೀವು ಬೆಡ್ಡು ಮತ್ತು ಬೆಣ್ಣೆ ಕೊಟ್ಟರೆ ಏನು ಉಪಯೋಗ’ ಎಂದು ಪ್ರಶ್ನಿಸಿದೆ. 

ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಿರುವ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗದ ಕ್ರಮವೂ ಪೀಠದ ಅಸಮಾಧಾನಕ್ಕೆ ಕಾರಣವಾಗಿದೆ. ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ಕರ್ತವ್ಯ ನಿರ್ವಹಿಸುವಂತೆ ಬಲವಂತ ಮಾಡಿ ಅವರನ್ನು ಸಾಂಕ್ರಾಮಿಕಕ್ಕೆ ಒಡ್ಡಿಕೊಳ್ಳುವಂತೆ ಮಾಡುವುದು ಎಷ್ಟು ಸರಿ ಎಂದು ಕೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು