ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕೋವಿಡ್ ನಿಯಂತ್ರಣ: ಕೇರಳ ಎಡವಿದ್ದೆಲ್ಲಿ?

Last Updated 5 ಅಕ್ಟೋಬರ್ 2020, 2:19 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕು ನಿರ್ವಹಣೆಯಲ್ಲಿ ತನ್ನದೇ ಆದ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕೇರಳ ರಾಜ್ಯವು ಜಗತ್ತಿನ ಗಮನ ಸೆಳೆದಿದೆ.

ಸೋಂಕು ವ್ಯಾಪಿಸುತ್ತಿದ್ದ ಸಂದರ್ಭದಲ್ಲಿ ಕೇರಳ ಸರ್ಕಾರವು ಕೈಗೊಳ್ಳುತ್ತಿದ್ದ ಪ್ರತಿಯೊಂದು ಸೂತ್ರವು ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಕೇರಳ ರಾಜ್ಯದಲ್ಲಿ ದಿನವೊಂದಕ್ಕೆ ಸೋಂಕಿತರ ಸಂಖ್ಯೆ ಆರರಿಂದ ಎಂಟು ಸಾವಿರದ ಗಡಿದಾಟುತ್ತಿದೆ. ಇದು ಅಲ್ಲಿನ ಸರ್ಕಾರಕ್ಕೆ ಈಗ ಸವಾಲಾಗಿ ಪರಿಣಮಿಸಿದೆ.

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಈ ರೋಗವು ದೇಶದಲ್ಲಿ ಮೊದಲು ಕಾಲಿರಿಸಿದ್ದೇ ಕೇರಳಕ್ಕೆ. ಚೀನಾದಲ್ಲಿದ್ದ ಕೇರಳದ ವಿದ್ಯಾರ್ಥಿಗಳನ್ನು ಜನವರಿ ತಿಂಗಳಲ್ಲಿ ಕರೆತಂದಾಗ ಅವರಲ್ಲಿ ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ನಿಫಾದಂತಹ ರೋಗವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದ ಕೇರಳ ಸರ್ಕಾರ ಮತ್ತು ಅಲ್ಲಿನ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿರಲಿಲ್ಲ.

ರೋಗ ಬಾಧಿತ ವಿದ್ಯಾರ್ಥಿ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದ್ದರು. ಮುಂದೆ ವಿದೇಶದಲ್ಲಿದ್ದ ಕೇರಳಿಗರನ್ನು ತಾಯ್ನಾಡಿಗೆ ಕರೆತಂದಾಗ ರೋಗ ಬಾಧಿತರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೂ ಸರ್ಕಾರ ಇದನ್ನು ಸಮರ್ಥವಾಗಿಯೇ ನಿರ್ವಹಿಸಿತ್ತು ಈ ಕಾರಣಕ್ಕಾಗಿಯೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕೇರಳವನ್ನು ಪ್ರಶಂಸಿತ್ತು. ಕೊರೊನಾ ನಿಯಂತ್ರಣದಲ್ಲಿ ಕೇರಳ ಮಾದರಿ ರಾಜ್ಯ ಎಂದೂ ಹಲವರು ಹೊಗಳಿದ್ದರು. ಹಲವು ರಾಜ್ಯಗಳು ಕೇರಳದ ಸಲಹೆ ಪಡೆದಿತ್ತು‌.

ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರು ಸೋಂಕಿನ ವಿರುದ್ಧದ ಹೋರಾಟದ ಚುಕ್ಕಾಣಿ ಹಿಡಿದು ಸಮರ್ಥವಾಗಿಯೇ ಮುನ್ನಡೆಸಿದ್ದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈಗಲೂ ಪ್ರತಿದಿನ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣಗಳ ಮಾಹಿತಿಯನ್ನು ಜನರ ಮುಂದಿಡುತ್ತಾರೆ.

ಸೆಪ್ಟೆಂಬರ್ ತಿಂಗಳಿನಿಂದ ರೋಗಬಾಧಿತರ ಸಂಖ್ಯೆ ಒಂದೇ ಸಮನೆ ಏರಿಕೆ ಕಾಣುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ರೋಗ ಹರಡುವುದನ್ನು ನಿಯಂತ್ರಿಸಲು ಕೇರಳ ಸರ್ಕಾರ ಕೆಲವು ನಗರಗಳಲ್ಲಿ ಈಗ ಮತ್ತೆ 144ನೇ ಸೆಕ್ಷನ್ ಜಾರಿ ಮಾಡಿದೆ. ಇದರ ಪ್ರಕಾರ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ರಾಜಧಾನಿ ತಿರುವನಂತಪುರದಲ್ಲಿ ದಿನವೊಂದಕ್ಕೆ ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ.

ಆರಂಭದಲ್ಲಿ ಲಾಕ್ ಡೌನ್ ಮೊದಲಾದ ಕಠಿಣ ನಿಯಂತ್ರಣಗಳನ್ನು ಜಾರಿಗೆ ತರುವ ಮೂಲಕ ರಾಜ್ಯವು ರೋಗ ಹೆಚ್ಚಾಗಿ ಹರಡದಂತೆ ನೋಡಿಕೊಂಡಿತ್ತು. ಅಲ್ಲದೆ ಬೇರೆ ರಾಜ್ಯಗಳನ್ನು ಸಂಪರ್ಕಿಸುವ ಗಡಿಗಳನ್ನು ಕೂಡ ಬಂದ್ ಮಾಡಿತ್ತು. ಅನ್ಯರಾಜ್ಯಗಳಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿತ್ತು. ಈ ಕಾರಣಕ್ಕಾಗಿಯೇ ಸೆಪ್ಟೆಂಬರ್ ತಿಂಗಳ ಮೊದಲ ವಾರದ ವರೆಗೂ ದಿನವೊಂದಕ್ಕೆ ಸೋಂಕಿತರ ಸಂಖ್ಯೆ 1,100ರ ಸನಿಹದಲ್ಲೇ ಇತ್ತು.

ಆದರೆ ಕಳೆದ ಹದಿನೈದು ದಿನಗಳಿಂದ ರೋಗಪೀಡಿತರ ಸಂಖ್ಯೆ ಏರುಮುಖವಾಗಿದೆ. ಕೇರಳದ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಭಾನುವಾರ ಒಂದೇ ದಿನ 8,553 ಮಂದಿಗೆ ಸೋಂಕು ದೃಢಪಟ್ಟಿದೆ.

ಇದುವರೆಗೆ ರಾಜ್ಯದಲ್ಲಿ 22,9886 ಮಂದಿಗೆ ಸೋಂಕು ತಗುಲಿದೆ. ಅದರಲ್ಲಿ 14,4471 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 896ಕ್ಕೇರಿದೆ. ಒಟ್ಟು ಸಕ್ರಿಯ ಪ್ರಕರಣಗಳು ಭಾನುವಾರ 84,497 ಆಗಿತ್ತು. ಸೋಂಕಿತರ ಪ್ರಮಾಣದಲ್ಲಿ ಕೇರಳವು ದೇಶದಲ್ಲಿ 17ನೇ ಸ್ಥಾನದಲ್ಲಿದೆ.

ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದಲೇ ಸದೃಢಗೊಳಿಸಿರುವ ಕಾರಣ ಆರಂಭದಲ್ಲಿ ರೋಗವನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ಮರಣಸಂಖ್ಯೆ ಕಡಿಮೆಯಾಗಲು ಇದು ಕೂಡ ಕಾರಣ. ಆರೋಗ್ಯ ಕಾರ್ಯಕರ್ತರು ಮತ್ತು ಪೊಲೀಸರ ಸಂಯೋಜಿತ ಕಾರ್ಯ ನಿರ್ವಹಣೆ, ಹೆಚ್ಚು ಪ್ರಮಾಣದಲ್ಲಿ ನಡೆದ ರೋಗ ಪತ್ತೆ ಪರೀಕ್ಷೆ, ರೋಗಿಗಳ ಪ್ರಯಾಣ ವಿವರ ಸಂಗ್ರಹ, ಕಟ್ಟುನಿಟ್ಟಿನ ಕ್ವಾರಂಟೈನ್ ವ್ಯವಸ್ಥೆ, ಕಿಯೋಸ್ಕ್‌ ಗಳ ಮೂಲಕ ರೋಗ ಪರೀಕ್ಷೆ ಇವುಗಳೆಲ್ಲವು ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿತ್ತು

ಪ್ರತಿಭಟನೆಗಳೇ ಮುಳುವಾಯಿತೆ?: ಕೇರಳದ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಚಿನ್ನ ಕಳ್ಳಸಾಗಣೆ ಪ್ರಕರಣ ಯಾವಾಗ ಬೆಳಕಿಗೆ ಬಂತೊ ಅವಾಗಿನಿಂದ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿವೆ.

ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಯು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿವೆ. ಹಲವು ದಿನಗಳ ಕಾಲ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಸರ್ಕಾರ ಹೇರಿದ್ದ ಎಲ್ಲಾ ನಿಯಂತ್ರಣಗಳನ್ನೂ ಮೀರಿ ಪ್ರತಿಭಟನೆ ನಡೆಸಿರುವುದು ಕೋವಿಡ್ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಆಡಳಿತ ಪಕ್ಷ ಆರೋಪಿಸಿದೆ.

ಓಣಂ ಹಬ್ಬದ ಸಂದರ್ಭದಲ್ಲಿ ಸರ್ಕಾರವು ಹಿಂದೆ ಹೇರಿದ್ದ ನಿರ್ಬಂಧಗಳನ್ನು ಸಡಿಲಿಸಿತ್ತು ಇದು ಕೂಡ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಗಿರಬಹುದು ಎಂಬುದು ಹಲವರ ವಾದ.

ಟಾಟಾ ಆಸ್ಪತ್ರೆ: ಕೇವಲ ಆರು ತಿಂಗಳೊಳಗೆ ಟಾಟಾ ಸಮೂಹವು ಕಾಸರಗೋಡಿನಲ್ಲಿ ಕೋವಿಡ್ ಆಸ್ಪತ್ರೆಯನ್ನು ನಿರ್ಮಿಸಿದ್ದು, ಇದರ ಉದ್ಘಾಟನೆ ಕೂಡ ನಡೆದಿದೆ. 500 ಬೆಡ್‌ಗಳ ಸಾಮರ್ಥ್ಯವಿರುವ ಈ ಆಸ್ಪತ್ರೆಯು ಗಡಿ ಜಿಲ್ಲೆಯಾಗಿರುವ ಕಾಸರಗೋಡಿನ ಜನರಲ್ಲಿ ನೆಮ್ಮದಿ ಮೂಡಿಸಿದೆ.

ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆಯು ಮತ್ತೆ ಕಠಿಣ ನಿಯಂತ್ರಣಗಳನ್ನು ಹೇರಿಕೆಗೆ ಕಾರಣವಾಗಬಹುದೇ ಎಂಬ ಚರ್ಚೆಯೂ ಈಗ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT