ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರದ್‌ ಪವಾರ್‌ ಕುಟುಂಬದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಶಮನ?

Last Updated 14 ಆಗಸ್ಟ್ 2020, 9:27 IST
ಅಕ್ಷರ ಗಾತ್ರ

ಮುಂಬೈ: ಎನ್‌ಸಿಪಿ ಮತ್ತು ಶರದ್‌ ಪವಾರ್-ಕುಟುಂಬದೊಳಗೆ ಎರಡನೇ ಬಾರಿಗೆ ಎದುರಾಗಿದ್ದ ಬಿಕ್ಕಟ್ಟು ಸಭೆ, ಸಮಾಲೋಚನೆಗಳ ಬಳಿಕ ಮುಕ್ತಾಯವಾಗಿರುವಂತೆ ಕಾಣುತ್ತಿದೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಪಾರ್ಥ ಪವಾರ್ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವಿಚಾರದಲ್ಲಿ ಪಕ್ಷ ಮತ್ತು ಸರ್ಕಾರದ ನಿಲುವಿಗೆ ವಿರುದ್ಧವಾಗಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಅಲ್ಲದೆ, ಅಯೋಧ್ಯೆಯ ರಾಮ ಮಂದಿರ ಭೂಮಿ-ಪೂಜೆಯನ್ನು ಶ್ಲಾಘಿಸಿದ್ದರು. ಇದು ಪವಾರ್‌ ಕುಟುಂಬ ಮತ್ತು ಎನ್‌ಸಿಪಿಯೊಳಗೆ ಬಿಕ್ಕಟ್ಟು ಉದ್ಭವಿಸಲು ಕಾರಣವಾಗಿತ್ತು.

ಗುರುವಾರ 29 ವರ್ಷದ ಪಾರ್ಥ ಪವಾರ್‌ ಅವರು ಕುಟುಂಬದ ಪ್ರಶ್ನಾತೀತ ನಾಯಕ, 79 ವರ್ಷದ ಶರದ್‌ ಪವಾರ್‌ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ಭೇಟಿ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದು ಹೇಳಲಾಗಿದೆ.

ಇದಕ್ಕೂ ಮೊದಲು ಬುಧವಾರ ರಾತ್ರಿ ಶರದ್‌ ಪವಾರ್‌ ಅವರು ಸೋದರನ ಪುತ್ರ ಅಜಿತ್‌ ಪವಾರ್‌, ಪುತ್ರಿ ಸುಪ್ರಿಯಾ ಸುಳೆ ಮತ್ತು ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಜಲ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಜಯಂತ್ ಪಾಟೀಲ್ ಅವರೊಂದಿಗೆ ಪ್ರಮುಖ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದರು. ಬುಧವಾರ ಮತ್ತು ಗುರುವಾರ ಅಜಿತ್‌ ಪವಾರ್‌ ಮತ್ತು ಸುಪ್ರಿಯಾ ಸುಳೆ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ಮಾಡಿದ್ದರು.

ಈ ಎರಡೂ ಪ್ರತ್ಯೇಕ ಸಭೆಗಳಲ್ಲಿ ಏನಾಯಿತು ಎಂಬುದು ಈ ವರೆಗೆ ಎಲ್ಲಿಯೂ ಬಹಿರಂಗಗೊಂಡಿಲ್ಲ. ಆದರೆ, ಉದ್ಭವವಾಗಿದ್ದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳು ಈ ಸಭೆಗಳಲ್ಲಿ ನಡೆದಿವೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಜಯಂತ್ ಪಾಟೀಲ್ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಚಗನ್‌ ಭುಜಬಲ ಅವರು, ‘ಶರದ್‌ ಪವಾರ್‌ ಅವರು ಪಾರ್ಥ ಅವರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂಬ ವಿಚಾರದಲ್ಲಿ ಅಜಿತ್ ಪವಾರ್ ಅಸಮಾಧಾನ ಹೊಂದಿಲ್ಲ. ಪವಾರ್ ಸಾಹೇಬರು ಎನ್‌ಸಿಪಿ ಮತ್ತು ಪವಾರ್‌ ಕುಟುಂಬದ ಮುಖ್ಯಸ್ಥರು... ಮಾರ್ಗದರ್ಶನ, ಆದೇಶ, ಸೂಚನೆ ನೀಡುವ ಹಕ್ಕು ಅವರಿಗೆ ಇದೆ... ಅಜಿತ್ ಅವರು ಅಸಮಾಧಾನ ಹೊಂದಿಲ್ಲ’ ಎಂದು ಪಾಟೀಲ್ ಹೇಳಿದರು.

‘ಈ ವಿಷಯದ ಬಗ್ಗೆ ಪವಾರ್ ಸಾಹೇಬರು ಮಾತನಾಡಿದ್ದಾರೆ. ಹೀಗಾಗಿ ನಾನು ಮಾತನಾಡುವ ಅಗತ್ಯವಿಲ್ಲ. ಆತ (ಪಾರ್ಥ) ಹೊಸಬ(ರಾಜಕೀಯಕ್ಕೆ)... ಎನ್‌ಸಿಪಿ ಮತ್ತು ಪವಾರ್‌ ಕುಟುಂಬಸ್ಥರು ಒಂದಾಗಿದ್ದಾರೆ... ಅಜಿತ್ ಪವಾರ್ ಅಸಮಾಧಾನ ಹೊಂದಿಲ್ಲ’ ಎಂದು ಭುಜಬಲ ಹೇಳಿದರು.

ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣದಲ್ಲಿ ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸುವ ಮುನ್ನವೇ, ಪಾರ್ಥ ಪವಾರ್‌ ಅವರು ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು. ಇದು ಮಹಾರಾಷ್ಟ್ರದ ಎನ್‌ಸಿಪಿ–ಶಿವಸೇನೆ–ಕಾಂಗ್ರೆಸ್‌ (ಮಹಾ ವಿಕಾಸ ಅಘಾಡಿ) ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು.

ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಪುತ್ರ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಅವರ ಹೆಸರು ತಳುಕು ಹಾಕಿಕೊಂಡಿದೆ. ಈ ವಿಚಾರವಾಗಿ ಮಹಾರಾಷ್ಟ್ರ ಬಿಜೆಪಿಯೂ ಆಕ್ರೋಶ ವ್ಯಕ್ತಪಡಿಸಿದೆ.

ಸುಶಾಂತ್‌ ಸಾವು ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಪಾರ್ಥ ಅವರು ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್‌ (ಎನ್‌ಸಿಪಿ) ಅವರನ್ನು ಭೇಟಿ ಮಾಡಿದ್ದರು. ಅಲ್ಲದೆ, ಪ್ರಕರಣದ ತನಿಖೆ ವಿಚಾರವಾಗಿ ಪಾರ್ಥ ಅವರು ತಮ್ಮ ನಿಲುವನ್ನು ಎನ್‌ಸಿಪಿ ಸಂಸ್ಥಾಪಕ ಅಧ್ಯಕ್ಷ ಶರದ್‌ ಪವಾರ್‌ ಅವರಿಗೂ ತಿಳಿಸಿದ್ದಾರೆ ಎನ್ನಲಾಗಿದೆ.

ಕಳೆದ ಒಂಬತ್ತು ತಿಂಗಳಲ್ಲಿ ಎನ್‌ಸಿಪಿ ಮತ್ತು ಶರದ್‌ ಪವಾರ್‌ ಕುಟುಂಬದಲ್ಲಿ ತಲೆದೋರಿರುವ ಎರಡನೇ ಬಿಕಟ್ಟು ಇದಾಗಿದೆ. ನವೆಂಬರ್‌ನಲ್ಲಿ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ನೇತೃತ್ವದ ಸರ್ಕಾರ ಉಳಿದಿರಲಿಲ್ಲ. ನಂತರದ ಬೆಳವಣಿಗೆಯಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಶಿವಸೇನೆಯ ಉದ್ಧವ ಠಾಕ್ರೆ ಮುಖ್ಯಮಂತ್ರಿಯಾದರೆ, ಎನ್‌ಸಿಪಿಯ ಅಜಿತ್‌ ಪವಾರ್‌ ಉಪ ಮುಖ್ಯಮಂತ್ರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT