ನದಿ ದಾಟುತ್ತಿದ್ದಾಗ ಮೊಸಳೆ ದಾಳಿ: ಸಿನಿಮೀಯ ರೀತಿಯಲ್ಲಿ ಪಾರಾದ ಬಿಹಾರದ ರೈತ

ಪಟ್ನಾ: ತನ್ನ ಮೇಲೆ ದಾಳಿ ಮಾಡಿ, ತಿನ್ನಲು ಬಂದ ಮೊಸಳೆಯೊಂದಿಗೆ ಸೆಣಸಾಡಿದ ರೈತನೊಬ್ಬ, ಸಿನಿಮೀಯ ರೀತಿಯಲ್ಲಿ ಬದುಕುಳಿದಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ವರದಿಯಾಗಿದೆ.
ಪಾರಾಗಿ ಬಂದ ರೈತನನ್ನು ಪರ್ಮ ಮುಷಾಹರ್ ಎನ್ನಲಾಗಿದ್ದು, ಅವರು ಸೋಮವಾರ ಸಂಜೆ 'ಬಗಹ' ಪಟ್ಟಣದ ಬಳಿ 'ಹರ್ಷ' ನದಿ ದಾಟುತ್ತಿದ್ದ ವೇಳೆ ಸುಮಾರು 10 ಅಡಿ ಉದ್ದದ ಮೊಸಳೆ ದಾಳಿ ಮಾಡಿದೆ.
ಜಮುನಾಪುರ್ ಗ್ರಾಮದ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪರ್ಮ ಹೇಳಿಕೆ ನೀಡಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಪರ್ಮ, 'ಊರಿಗೆ ತಲುಪಲು ನಾನು ನದಿ ದಾಟಬೇಕಾಗಿತ್ತು. ಹಳ್ಳಿಯವರು ಓಡಾಡಲು ಸಾಮಾನ್ಯವಾಗಿ ಇದೇ ಮಾರ್ಗವನ್ನು ಬಳಸುತ್ತಾರೆ. ನಾನೂ ಈ ಹಿಂದೆ ಅದೇ ದಾರಿಯಲ್ಲಿ ಹೋಗಿಬರುತ್ತಿದ್ದೆ' ಎಂದು ಹೇಳಿದ್ದಾರೆ.
'ನದಿಯ ಮಧ್ಯಕ್ಕೆ ತಲುಪುತ್ತಿದ್ದಂತೆ, ಕಾಲಿನಲ್ಲಿ ತೀವ್ರವಾದ ನೋವು ಕಾಣಿಡಿಕೊಂಡಿತು. ಹಿಂತಿರುಗಿ ನೋಡಿದಾಗ ಮೊಸಳೆ ನನ್ನ ಕಾಲನ್ನು ಕಚ್ಚಿರುವುದು ಕಂಡಿತು. ನದಿ ದಾಟುವುದಕ್ಕೆ ಹಿಡಿದುಕೊಂಡಿದ್ದ ದೊಣ್ಣೆಯಿಂದ ಮೊಸಳೆಯ ತಲೆ ಮೇಲೆ ನಿರಂತರವಾಗಿ ಹಲ್ಲೆ ಮಾಡಿದೆ. ಅದು ಕಾಲನ್ನು ಬಿಡುವವರೆಗೂ ಹೊಡೆದೆ. ಅಷ್ಟರಲ್ಲಾಗಲೇ ಕಾಲಿನ ಸ್ವಲ್ಪ ಭಾಗವನ್ನು ತಿಂದಿತ್ತು. ನಂತರ ಕೂಡಲೇ ದಂಡೆಯತ್ತ ಓಡಿದೆ. ಸಹಾಯಕ್ಕಾಗಿ ಕೂಗಿಕೊಂಡೆ' ಎಂದು ಮೊಸಳೆಯಿಂದ ಪಾರಾಗಿ ಬಂದ ಅನುಭವ ಹಂಚಿಕೊಂಡಿದ್ದಾರೆ.
'ನದಿಯಲ್ಲಿ ಸ್ವಲ್ಪವೇ ನೀರು ಇದ್ದದ್ದರಿಂದ ಬದುಕುಳಿಯಲು ಸಾಧ್ಯವಾಯಿತು' ಎಂದೂ ತಿಳಿಸಿದ್ದಾರೆ.
ಚೀರಾಟ ಕೇಳಿ ನೆರವಿಗೆ ಧಾವಿಸಿದ ಗ್ರಾಮಸ್ಥರು ಪರ್ಮ ಅವರನ್ನು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಪರ್ಮ ಅವರ ಸ್ಥಿತಿ ಗಂಭಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಗಹದಲ್ಲಿರುವ ಸಬ್–ಡಿವಿಷನಲ್ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸೂಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.