ಗುರುವಾರ , ಜನವರಿ 21, 2021
29 °C

ಕಾಬೂಲ್‌ ನದಿಗೆ ಅಣೆಕಟ್ಟು: ಪಾಕಿಸ್ತಾನದ ಆಕ್ಷೇಪ ನಿರ್ಲಕ್ಷಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಬೂಲ್ ನದಿಗೆ ಶಾಹತೂತ್ ಅಣೆಕಟ್ಟು ಕಟ್ಟಲು ಪಾಕಿಸ್ತಾನದ ಆಕ್ಷೇಪವನ್ನು ಭಾರತವು ನಿರ್ಲಕ್ಷಿಸಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಪಾಕಿಸ್ತಾನದ ಪ್ರಯತ್ನಕ್ಕೆ ಭಾರತವು ಈ ಮೂಲಕ ತಡೆ ಒಡ್ಡಿದೆ ಎಂದು ಮೂಲಗಳು ಹೇಳಿವೆ.

ಅಫ್ಗಾನಿಸ್ತಾನದ ತಾಲಿಬಾನ್ ಉಗ್ರರ ಜತೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನವು ಮುಂದಾಗಿದೆ. ಶಾಂತಿ ಮಾತುಕತೆ ನಡೆದರೆ ಅಫ್ಗಾನಿಸ್ತಾನದಲ್ಲಿ ಪ್ರಭಾವ ಹೆಚ್ಚಲಿದೆ. ಇದೇ ಸಂದರ್ಭದಲ್ಲಿ ಈ ಅಣೆಕಟ್ಟು ನಿರ್ಮಿಸಲು ಅಫ್ಗಾನಿಸ್ತಾನಕ್ಕೆ ಭಾರತವು ಬೆಂಬಲ ಸೂಚಿಸಿದೆ. ಅಲ್ಲದೆ ನೆರವು ನೀಡಲು ಒಪ್ಪಂದ ಮಾಡಿಕೊಂಡಿದೆ.

‘ಶಾಂತಿ ಸ್ಥಾಪನಾ ಪ್ರಕ್ರಿಯೆಯ ಮುಂದಾಳತ್ವ ಅಫ್ಗಾನಿಸ್ತಾನದ್ದೇ ಆಗಿರಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ.

‘ಕಾಬೂಲ್ ನದಿಗೆ ಅಣೆಕಟ್ಟು ಕಟ್ಟಿದರೆ, ಪಾಕಿಸ್ತಾನಕ್ಕೆ ಹರಿಯುವ ನೀರು ಕಡಿಮೆಯಾಗುತ್ತದೆ. ಇದರಿಂದ ಕೃಷಿಗೆ ತೊಂದರೆಯಾಗುತ್ತದೆ. ಪಾಕಿಸ್ತಾನದ ಹಲವು ಸಣ್ಣ ನದಿಗಳು ಅಫ್ಗಾನಿಸ್ತಾನವನ್ನು ಪ್ರವೇಶಿಸುತ್ತವೆ. ಅಲ್ಲಿ ಕಾಬೂಲ್ ನದಿಯನ್ನು ಸೇರಿ, ನಂತರ ಪಾಕಿಸ್ತಾನವನ್ನು ಮತ್ತೆ ಪ್ರವೇಶಿಸುತ್ತವೆ. ಶಾಹತೂತ್ ಅಣೆಕಟ್ಟು ನಿರ್ಮಿಸುವುದರಿಂದ ಈ ನದಿಗಳ ನೀರೂ, ಪಾಕಿಸ್ತಾನಕ್ಕೆ ಹರಿಯುವುದು ನಿಲ್ಲುತ್ತದೆ’ ಎಂದು ಪಾಕಿಸ್ತಾನವು ಆಕ್ಷೇಪ ವ್ಯಕ್ತಪಡಿಸಿತ್ತು.

ಕಾಬೂಲ್ ನದಿಯ ಜಲಾನಯನ ಪ್ರದೇಶವು ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಹರಡಿದೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಅತ್ಯಂತ ಪ್ರಮುಖ ನದಿಯಾಗಿದೆ.  ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಕಾಬೂಲ್ ನದಿಗೆ ಅಣೆಕಟ್ಟು ನಿರ್ಮಿಸಿ, ಕೃಷಿಗೆ ನೀರು ಒದಗಿಸುವ ಯೋಜನೆಯನ್ನು ಪಾಕಿಸ್ತಾನವು ಹಾಕಿಕೊಂಡಿದೆ. ಅಫ್ಗಾನಿಸ್ತಾನದಲ್ಲಿ ಅಣೆಕಟ್ಟು ನಿರ್ಮಿಸಿದರೆ, ಪಾಕಿಸ್ತಾನವು ನಿರ್ಮಿಸುವ ಅಣೆಕಟ್ಟಿಗೆ ಒಳಹರಿವು ಕಡಿಮೆಯಾಗಲಿದೆ. ಪಾಕಿಸ್ತಾನದ ಆಕ್ಷೇಪಕ್ಕೆ ಇದು ಪ್ರಮುಖ ಕಾರಣ ಎನ್ನಲಾಗಿದೆ.

ಕಾಬೂಲ್ ನದಿಯ ನೀರನ್ನು ಹಂಚಿಕೊಳ್ಳುವ ಸಂಬಂಧ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನೂ ಅಫ್ಗಾನಿಸ್ತಾನದ ಮುಂದೆ ಪಾಕಿಸ್ತಾನ ಇರಿಸಿತ್ತು. ಆದರೆ, ಒಪ್ಪಂದ ಮಾಡಿಕೊಳ್ಳಲು ಅಫ್ಗಾನಿಸ್ತಾನ ಮುಂದಾಗಲಿಲ್ಲ.

ಕಾಬೂಲ್‌ ನದಿಯು ಅಫ್ಗಾನಿಸ್ತಾನದ ಆಗ್ನೇಯ ದಿಕ್ಕಿಗೆ ಹರಿದು, ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯವನ್ನು ಪ್ರವೇಶಿಸುತ್ತದೆ. ಪಾಕಿಸ್ತಾನವನ್ನು ಪ್ರವೇಶಿಸುವ ಮುನ್ನ 11 ಉಪನದಿಗಳು ಕಾಬೂಲ್ ನದಿಯನ್ನು ಸೇರುತ್ತವೆ. ಪಾಕಿಸ್ತಾನವನ್ನು ಪ್ರವೇಶಿಸಿದ ನಂತರವೂ ಹಲವು ಉಪನದಿಗಳು ಕಾಬೂಲ್ ನದಿಯನ್ನು ಸೇರುತ್ತವೆ. ನಂತರ ಕಾಬೂಲ್ ನದಿ ಬಳಿಕ ಸಿಂಧೂ ನದಿಯನ್ನು ಸೇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು