ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಮುಖಂಡರು ತಮ್ಮ ವಿರುದ್ಧ ಸುಳ್ಳು ಹಾಗೂ ದ್ವೇಷ ಹಬ್ಬುತ್ತಿದ್ದಾರೆ: ದೀಪ್ ಸಿಧು

Last Updated 28 ಜನವರಿ 2021, 11:33 IST
ಅಕ್ಷರ ಗಾತ್ರ

ಚಂಡೀಗಡ: ತಮ್ಮ ವಿರುದ್ಧ ಸುಳ್ಳು ಆರೋಪವನ್ನು ಹೊರಿಸುತ್ತಿರುವ ರೈತ ಮುಖಂಡರು ದ್ವೇಷವನ್ನುಹಬ್ಬುತ್ತಿದ್ದಾರೆ ಎಂದು ನಟ ಹಾಗೂ ಹೋರಾಟಗಾರ ದೀಪ್ ಸಿಧು ಆರೋಪ ಮಾಡಿದ್ದಾರೆ.

ಗಣರಾಜ್ಯೋತ್ಸವ ದಿನದಂದು ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ದೀಪ್ ಸಿಧು ಪಿತೂರಿ ನಡೆಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದರು. ಅಲ್ಲದೆ ದೀಪ್ ಸಿಧು ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು.

ಐತಿಹಾಸಿಕ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿದ್ದ ಪ್ರತಿಭಟನಾಕಾರರಲ್ಲಿ ಒಬ್ಬರಾಗಿರುವ 36 ವರ್ಷದ ದೀಪ್ ಸಿಧು ವಿರುದ್ಧವೂ ದೆಹಲಿ ಪೊಲೀಸ್ ಎಫ್‌ಐಆರ್ ದಾಖಲಿಸಿದೆ.

ಈ ಕುರಿತು ಫೇಸ್‌ಬುಕ್ ವಿಡಿಯೊದಲ್ಲಿ ಪ್ರತಿಕ್ರಿಯಿಸಿರುವ ದೀಪ್ ಸಿಧು, ರೈತ ಮುಖಂಡರು ಹಾಗೂ ದೆಹಲಿ ಪೊಲೀಸರು ನಿಗದಿಪಡಿಸಿದ ಮಾರ್ಗದಲ್ಲಿ ತೆರಳಲು ಯುವಕರು ಮುಂದಾಗಲಿಲ್ಲ ಎಂದು ಹೇಳಿದರು.

ಯುವಕರ ಗುಂಪನ್ನು ಕೆಂಪುಕೋಟೆಯತ್ತ ಸಾಗಲು ಪ್ರಚೋದಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ದೀಪ್ ಸಿಧು, ಜನರು ತಮ್ಮ ಸ್ವಂತ ನಿರ್ಧಾರದಂತೆ ಕೆಂಪುಕೋಟೆಯತ್ತ ತೆರೆಳಿದ್ದರು ಎಂದು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ವ್ಯಕ್ತಿ ಎಂಬ ರೈತರ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿರುವ ದೀಪ್ ಸಿಧು, ಆರ್‌ಎಸ್‌ಎಸ್ ಅಥವಾ ಬಿಜೆಪಿಯ ವ್ಯಕ್ತಿ ಕೆಂಪುಕೋಟೆಯಲ್ಲಿ ನಿಶಾನ್ ಸಾಹಿಬ್ (ಸಿಖ್ಖರ ಧಾರ್ಮಿಕ ಧ್ವಜ) ಮತ್ತು ರೈತರ ಧ್ವಜವನ್ನು ಹಾರಿಸುತ್ತಾರೆಯೇ ? ಕನಿಷ್ಠ ಅದರ ಬಗ್ಗೆಯಾದರೂ ಯೋಚಿಸಿ ಎಂದು ಪ್ರತ್ಯಾರೋಪ ಮಾಡಿದರು.

ಕೆಂಪುಕೋಟೆಯ ಧ್ವಜಸ್ತಂಭದಲ್ಲಿ ಧಾರ್ಮಿಕ ಹಾಗೂ ರೈತ ಸಂಘಟನೆಯ ಧ್ವಜ ಹಾರಿಸುವಾಗ ದೀಪ್ ಸಿಧು ಅಲ್ಲಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರೈತ ಮುಖಂಡರು ನನ್ನ ವಿರುದ್ಧ ಅಪಪ್ರಚಾರ ಮತ್ತು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ದೀಪ್ ಸಿಧು ಆರೋಪಿಸಿದ್ದಾರೆ. ಜನವರಿ 26ರಂದು ಪ್ರತಿಭಟನೆ ನಡೆಸಲು ಕೃಷಿ ಮುಖಂಡರು ಆಹ್ವಾನ ನೀಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದೇವೆ ಎಂದುಪ್ರತಿಭಟನೆಕಾರರ ಹೇಳಿಕೆಯನ್ನು ದೀಪ್ ಸಿಧು ವಿವರಿಸುತ್ತಾರೆ.

ಕೆಂಪು ಕೋಟೆಗೆ ಸಾವಿರಾರು ಜನರು ತಲುಪಿದ್ದರು. ಆದರೆ ಅಲ್ಲಿ ಯಾವುದೇ ರೈತ ಮುಖಂಡರು ಇರಲಿಲ್ಲ. ಯಾರೂ ಹಿಂಸಾಚಾರಕ್ಕೆ ತಿರುಗಲಿಲ್ಲ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿಲ್ಲ ಎಂದು ಸಮರ್ಥಿಸಿದರು.

ತಮ್ಮ ಪ್ರತಿಭಟನೆಯನ್ನು ಗುರುತಿಸಲು ನಿಶಾನ್ ಸಾಹಿಬ್ ಹಾಗೂ ರೈತರ ಧ್ವಜವನ್ನು ಧ್ವಜಸ್ತಂಭಕ್ಕೆ ಕಟ್ಟಿದರು. ಹಾಗೆ ಮಾಡುವುದು ದೇಶದ್ರೋಹವಾದರೆ ಅಲ್ಲಿ ಇದ್ದವರೆಲ್ಲರೂ ದೇಶದ್ರೋಹಿಗಳು. ಈ ಎಲ್ಲ ಕೃತ್ಯಗಳಿಗೆ ಒಬ್ಬ ವ್ಯಕ್ತಿಯ ಮೇಲೆ ಆರೋಪ ಹೊರಿಸಿ ಆತನಿಗೆ ದೇಶದ್ರೋಹಿ ಪಟ್ಟ ಕಟ್ಟುವುದಾದರೆ ಅದಕ್ಕೆ ನೀವು ನಾಚಿಕೆಪಟ್ಟುಕೊಳ್ಳಬೇಕು ಎಂದು ಹೇಳಿದರು.

ದೀಪ್ ಸಿಂಧು ಬಿಜೆಪಿ ಹಾಗೂ ಸರ್ಕಾರದ ಏಜೆಂಟ್ ಎಂದು ಆರೋಪಿಸಿದ್ದ ರೈತ ಮುಖಂಡರು, ದೇಶದ್ರೋಹಿ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT