ನವದೆಹಲಿ: ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪವು ಬಿಜೆಪಿ ಶಾಸಕರ ಗದ್ದಲ ಹಾಗೂ ಅವರ ವಿರುದ್ಧ ನಿರ್ಣಯ ಅಂಗೀಕರಿಸುವುದಕ್ಕೆ ಸಾಕ್ಷಿಯಾಯಿತು.
ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಶಾಸಕರು ಸದನದ ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ. ಅಲ್ಲದೇ, ಬಿಜೆಪಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಈ ವಿಷಯವನ್ನು ಸದನದ ನೀತಿಸಂಹಿತೆ ಸಮಿತಿಗೆ ಒಪ್ಪಿಸಬೇಕು ಎಂಬ ನಿರ್ಣಯವನ್ನು ಶುಕ್ರವಾರ ಅಂಗೀಕರಿಸಲಾಯಿತು.
ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಸದನವನ್ನು ಉದ್ದೇಶಿಸಿ ಭಾಷಣ ಆರಂಭಿಸಿದರು. ಆಗ, ರದ್ದುಗೊಳಿಸಿರುವ ದೆಹಲಿ ಅಬಕಾರಿ ನೀತಿಯನ್ನು ಪ್ರಸ್ತಾಪಿಸಿದ ಬಿಜೆಪಿ ಶಾಸಕರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.
‘ದೆಹಲಿ ಅಬಕಾರಿ ನೀತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಕೂಡಲೇ ರಾಜೀನಾಮೆ ನೀಡಬೇಕು’ ಎಂದೂ ಆಗ್ರಹಿಸಿದರು.
ಗದ್ದಲ ಜೋರಾದ ಹಿನ್ನೆಲೆಯಲ್ಲಿ ಸ್ಪೀಕರ್ ರಾಮನಿವಾಸ್ ಗೋಯೆಲ್ ಅವರ ಸೂಚನೆಯಂತೆ, ಮೂವರು ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಸದನದಿಂದ ಹೊರಹಾಕಿದರೆ, ಉಳಿದ ಶಾಸಕರು ಸಭಾತ್ಯಾಗ ಮಾಡಿದರು. ನಂತರ, ಲೆಫ್ಟಿನೆಂಟ್ ಗವರ್ನರ್ ತಮ್ಮ ಭಾಷಣ ಮುಂದುವರಿಸಿದರು.
ನಂತರ ಮಾತನಾಡಿದ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, ‘ಬಿಜೆಪಿ ಶಾಸಕರು ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ವಿಷಯವನ್ನು ನೀತಿಸಂಹಿತೆ ಸಮಿತಿಗೆ ವಹಿಸಲಾಗುವುದು’ ಎಂಬ ನಿರ್ಣಯವನ್ನು ಮಂಡಿಸಿದರು.
ಸಾಧನೆಗಳ ಪಟ್ಟಿ: ಬಜೆಟ್ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಗವರ್ನರ ವಿ.ಕೆ.ಸಕ್ಸೇನಾ ಅವರು, ದೆಹಲಿ ಸರ್ಕಾರದ ಸಾಧನೆಗಳನ್ನು ಸದನದ ಮುಂದಿಟ್ಟರು.
‘ಬರುವ ದಿನಗಳಲ್ಲಿ ದೆಹಲಿಯು ಅಭಿವೃದ್ಧಿ ಹೊಂದಿದ ಜಾಗತಿಕ ನಗರವಾಗಿ ಹೊರಹೊಮ್ಮಲಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.
‘ಶಾಲೆಗಳು ಹಾಗೂ ಶಿಕ್ಷಣ ಪದ್ಧತಿಯಲ್ಲಿ ತಂದ ಸುಧಾರಣೆಗಳ ಫಲವಾಗಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿಶ್ವದರ್ಜೆಯ ಗುಣಮಟ್ಟದ ಹೊಂದಿದ ಶಾಲೆಗಳನ್ನು ಸ್ಥಾಪಿಸಲಾಗಿದ್ದು, ‘ಮಿಷನ್ ಬುನಿಯಾದ್’ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಸುಧಾರಿಸಿದೆ’ ಎಂದು ಹೇಳಿದರು.
‘ಹೊಸದಾಗಿ 20,000 ಕೊಠಡಿಗಳನ್ನು ನಿರ್ಮಾಣವೂ ಸೇರಿದಂತೆ ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಆರೋಗ್ಯ ಕ್ಷೇತ್ರದ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಬರುವ ದಿನಗಳಲ್ಲಿ 16 ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಸಾರಿಗೆ, ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ ಹಾಗೂ ಇತರ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಅವರು ಸದನದ ಮುಂದಿಟ್ಟರು.
‘ಇತ್ತೀಚಿನ ದಿನಗಳಲ್ಲಿ ಮಾತಿನಲ್ಲಿ ಹಿಡಿತ ತಪ್ಪುತ್ತಿದ್ದು, ಘನತೆ ಕುಂದುತ್ತಿದೆ’ ಎಂದು ಹೇಳುವ ಮೂಲಕ ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರು ಸದನದಿಂದ ನಿರ್ಗಮಿಸಿದರು.
ದೆಹಲಿ ಶಾಲೆಗಳ ಶಿಕ್ಷಕರನ್ನು ತರಬೇತಿಗಾಗಿ ವಿದೇಶಗಳಿಗೆ ಕಳುಹಿಸುವುದು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಸರ್ಕಾರದ ನಡುವೆ ಇತ್ತೀಚೆಗೆ ವಾಕ್ಸಮರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಕ್ಸೇನಾ ಅವರಿಂದ ಈ ಮಾತುಗಳನ್ನಾಡಿದರು ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.