ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲಿ ಖಾಲಿಸ್ತಾನ ಪರ ಪ್ರತಿಭಟನೆ: ದೆಹಲಿ ಪೊಲೀಸರಿಂದ ಪ್ರಕರಣ ದಾಖಲು

Last Updated 24 ಮಾರ್ಚ್ 2023, 7:41 IST
ಅಕ್ಷರ ಗಾತ್ರ

ನವದೆಹಲಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಖಾಲಿಸ್ತಾನ ಪರ ಪ್ರತ್ಯೇಕತಾವಾದಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಐಪಿಸಿ, ಯುಎಪಿಎ ಮತ್ತು ಪಿಡಿಪಿಪಿ ಕಾಯ್ದೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿದೇಶದಲ್ಲಿ ಭಾರತೀಯ ರಾಷ್ಟ್ರೀಯತೆಗೆ ಧಕ್ಕೆ ತರುವಂತೆ ಕೆಲವರು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ. ಪ್ರಕರಣದ ಕುರಿತು ವಿಶೇಷ ತಂಡ ತನಿಖೆ ಆರಂಭಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಖಾಲಿಸ್ತಾನ ಪರ ಪ್ರತ್ಯೇಕತಾವಾದಿಗಳು ಲಂಡನ್‌ನ ಭಾರತೀಯ ಹೈಕಮಿಷನ್‌ ಎದುರಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ, ಕಚೇರಿ ಮೇಲೆ ನಡೆಸಿರುವ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಬ್ರಿಟನ್‌ ವಿದೇಶಾಂಗ ಸಚಿವ ಜೇಮ್ಸ್‌ ಕ್ಲೆವರ್ಲಿ ಹೇಳಿದ್ದಾರೆ.

ಕಚೇರಿಗೆ ಅಗತ್ಯ ಭದ್ರತೆಯನ್ನು ನೀಡುವ ಕುರಿತು ಪರಿಶೀಲಿಸುತ್ತಿದ್ದೇವೆ. ಈ ಬಗ್ಗೆ ಪೊಲೀಸರ ಜೊತೆ ಚರ್ಚೆ ನಡೆಸಿದ್ದೇವೆ ಎಂದೂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಕಚೇರಿ ಮೇಲಿನ ದಾಳಿಯು ಸ್ವೀಕಾರಾರ್ಹವಲ್ಲ. ಈ ಕುರಿತ ನಮ್ಮ ನಿಲುವನ್ನು ಭಾರತದ ರಾಯಭಾರಿ ವಿಕ್ರಂ ದೊರೈಸ್ವಾಮಿ ಅವರಿಗೆ ಸ್ಪಷ್ಟಪಡಿಸಿದ್ದೇವೆ’ ಎಂದೂ ವಿವರಿಸಿದ್ದಾರೆ.

‘ದಾಳಿಯ ಕುರಿತು ತನಿಖೆ ನಡೆಯುತ್ತಿದೆ. ನಾವು ಭಾರತ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT